Belagavi News In Kannada | News Belgaum

ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳ ಫಲಾನುಭವಿಗಳ ಜತೆ‌ ಕೇಂದ್ರ ಸಚಿವ ಸೋಮ ಪ್ರಕಾಶ್ ಸಂವಾದ ಜೂ.27 ರಂದು

ಕೇಂದ್ರ ಸರಕಾರದ ಯೋಜನೆಗಳ ಜಾಗೃತಿ ಮೂಡಿಸಬೇಕು: ಸಚಿವ ಗೋವಿಂದ ಕಾರಜೋಳ

ಬೆಳಗಾವಿ, ಜೂ.23: ಕೇಂದ್ರ ಸರಕಾರವು ಕಳೆದ ಎಂಟು‌ ವರ್ಷಗಳಲ್ಲಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆಗಳ ಫಲಾನುಭವಿಗಳ ಜತೆ ಕೇಂದ್ರ‌ ಸಚಿವರಾದ ಸೋಮ‌ ಪ್ರಕಾಶ್ ಅವರು ಜೂ.27 ರಂದು ಸಂವಾದ ನಡೆಸಲಿದ್ದಾರೆ. ಮಾರನೇ ದಿನವಾದ ಜೂ.28 ರಂದು ವಿವಿಧ ಕಡೆಗಳಲ್ಲಿ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ತಿಳಿಸಿದರು.
ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳ ಫಲಾನುಭವಿಗಳ ಜತೆ‌ ಕೇಂದ್ರ ಸಚಿವರ ಸಂವಾದ ಮತ್ತಿತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಗುರುವಾರ(ಜೂ.23) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ‌ ಆವಾಸ್ ಯೋಜನೆ, ಉಜ್ವಲ್ ಯೋಜನೆ, ಜಲಜೀವನ ಮೀಷನ್, ಆಯುಷ್ಮಾನ್ ಭಾರತ, ಪ್ರಧಾನಮಂತ್ರಿ ಮುದ್ರಾ ಯೋಜನೆ, ಪೋಷಣ ಅಭಿಯಾನ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ, ಸ್ವಚ್ಛಭಾರತ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಒಂದು ದೇಶ; ಒಂದು ರೇಷನ್ ಕಾರ್ಡ್ ಯೋಜನೆ; ಪ್ರಧಾನಮಂತ್ರಿ ಸ್ವನಿಧಿ ಯೋಜನೆ, ಗರೀಬ್ ಕಲ್ಯಾಣ ಅನ್ನ ಯೋಜನೆಯ ಫಲಾನುಭವಿಗಳ ಜತೆ ಸಂವಾದ ನಡೆಸಲಿದ್ದಾರೆ.
ಇದಾದ ಬಳಿಕ ಕೇಂದ್ರ ಸಚಿವರು ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಮಾರನೇ ದಿನ ಬೆಳಗಾವಿ ಕೋಟೆ; ಪಡಿತರ ವಿತರಣಾ ಅಂಗಡಿ, ಬಿಮ್ಸ್ ಜನೌಷಧಿ ಕೇಂದ್ರಕ್ಕೆ ಭೇಟಿ ನೀಡುವರು.
ಇದಲ್ಲದೇ ಅಗಸಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಮೃತ ಸರೋವರ ಕಾಮಗಾರಿ ಪರಿಶೀಲನೆ ಹಾಗೂ ಅಗಸಗಿ ಮತ್ತು ಕಡೋಲಿ ಗ್ರಾಮದಲ್ಲಿ ನರೇಗಾ ಯೀಜನೆಯಡಿ ಕೈಗೊಂಡ ಶಾಲಾಭಿವೃದ್ಧಿ ಕಾಮಗಾರಿ ವೀಕ್ಷಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನ ಹಾಗೂ ಪ್ರಗತಿಯ ಕುರಿತು ‌ಮಾಹಿತಿಯನ್ನು ಪಡೆದುಕೊಂಡ ಸಚಿವರು, ಯೋಜನೆಗಳ ಕುರಿತ ಪಕ್ಷಿನೋಟವನ್ನು ಒಳಗೊಂಡ ಆಕರ್ಷಕ ಮಾಹಿತಿ ಪುಸ್ತಿಕೆಯನ್ನು ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೇಂದ್ರ ಸರಕಾರದ ಎಂಟು ಮಹತ್ವಾಕಾಂಕ್ಷಿ ಯೋಜನೆಗಳು ಮಾತ್ರವಲ್ಲದೇ, ಕೆರೆಗಳ ಅಭಿವೃದ್ಧಿ, ಪರಿಶಿಷ್ಟ ಜಾತಿ/ಪಂಗಡಗಳ ಜನರ ಅಭಿವೃದ್ಧಿಗೆ ಜಾರಿಗೊಳಿಸಲಾದ ಯೋಜನೆಗಳ ಬಗ್ಗೆಯೂ ಪ್ರಮುಖ ಮಾಹಿತಿಯನ್ನು ಕೂಡ ಪುಸ್ತಿಕೆಯಲ್ಲಿ ಒದಗಿಸಬೇಕು ಎಂದು ಸಲಹೆ ನೀಡಿದರು.
ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಪರಿಶಿಷ್ಟ ಜಾತಿ/ಪಂಗಡದವರು, ಓಬಿಸಿ, ಮಹಿಳೆಯರು ಸೇರಿದಂತೆ ಎಲ್ಲರಿಗೂ ಅವಕಾಶ ಕಲ್ಪಿಸಬೇಕು.
ಇದಲ್ಲದೇ ಕೋವಿಡ್ ನಿಂದ ತಂದೆ-ತಾಯಿಯನ್ನು ಕಳೆದುಕೊಂಡಿರುವ ಜಿಲ್ಲೆಯ 22 ಮಕ್ಕಳಿಗೆ ಪಿಎಂ-ಕೇರ್ಸ್ ನಿಧಿಯಿಂದ ತಲಾ‌ ಹತ್ತು ಲಕ್ಷ ರೂಪಾಯಿ ನೀಡಲಾಗಿದ್ದು, ಅಂತಹ ಫಲಾನುಭವಿ ಮಕ್ಕಳನ್ನು ಕೂಡ ಕಾರ್ಯಕ್ರಮಕ್ಕೆ ಕರೆಯಿಸಿ ಅವರಿಗೆ ಸೌಲಭ್ಯಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಸೂಚನೆ ನೀಡಿದರು.
ಪ್ರತಿ‌ ತಾಲ್ಲೂನಿಂದ ಐದು ಫಲಾನುಭವಿಗಳು:
ಕೇಂದ್ರ ಸಚಿವರಾದ ಸೋಮ ಪ್ರಕಾಶ್ ಅವರು ಸೋಮವಾರ(ಜೂ.27) ಬೆಳಿಗ್ಗೆ 10.30 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ಫಲಾನುಭವಿಗಳ ಜತೆ ಸಂವಾದ ನಡೆಸಲಿದ್ದಾರೆ.
ಪ್ರತಿ ತಾಲ್ಲೂಕಿನಿಂದ ಐದು ಜನರ ಫಲಾನುಭವಿಗಳನ್ನು ಕರೆಸಲಾಗುವುದು. ಅದರಲ್ಲಿ ಪ್ರತಿ ಯೋಜನೆಯ ಇಬ್ಬರು ಫಲಾನುಭವಿಗಳನ್ನು ಸಂವಾದಕ್ಕೆ ಆಯ್ಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ತಿಳಿಸಿದರು.
ಕೇಂದ್ರ ಸಚಿವರು ಫಲಾನುಭವಿಗಳ ಜತೆ ಸಂವಾದ ನಡೆಸಿದ ಬಳಿಕ ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಆದ್ದರಿಂದ ಮಾಹಿತಿ ಪುಸ್ತಿಕೆಯನ್ನು ಸಿದ್ಧಪಡಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಯೋಜನೆವಾರು ಪಕ್ಷಿನೋಟ ಮಾಹಿತಿಯನ್ನು ಸಿದ್ಧಪಡಿಸಿ ಒದಗಿಸಬೇಕು.
ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನ ಹಾಗೂ ಪ್ರಗತಿಯ ಕುರಿತು ಯೋಜನಾವಾರು ಮಾಹಿತಿಯನ್ನು  ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಚಿವರಿಗೆ ವಿವರಿಸಿದರು.
ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೇಕರ ಮತ್ತಿತರರು ಉಪಸ್ಥಿತರಿದ್ದರು.
ಕೃಷಿ, ಆರೋಗ್ಯ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.