Belagavi News In Kannada | News Belgaum

ತಳ ಮಟ್ಟದಲ್ಲಿ ಪಕ್ಷ ಸಂಘಟಿಸಿದರೆ 2023ಕ್ಕೆ ಕಾಂಗ್ರೆಸ್‌ ಕೈಯಲ್ಲಿ ಅಧಿಕಾರ ಖಚಿತ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ತಳ ಮಟ್ಟದಲ್ಲಿ ಪಕ್ಷ ಸಂಘಟಿಸಿದರೆ 2023ಕ್ಕೆ ಕಾಂಗ್ರೆಸ್‌ ಕೈಯಲ್ಲಿ ಅಧಿಕಾರ ಖಚಿತ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಬಿಜೆಪಿಗೆ ಬೇಸತ್ತ ಜನತೆ, ದೇಶ, ರಾಜ್ಯದ ಪ್ರಗತಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಅನಿವಾರ್ಯ ಎಂದ ಶಾಸಕ ಸತೀಶ್‌ ಜಾರಕಿಹೊಳಿ

ಘಟಫ್ರಭ: ತಳ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ, ಬಲಪಡಿಸಿದರೆ 2023ರಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

ಪಟ್ಟಣದ ಡಾ. ಎನ್.ಎಸ್.‌ ಹರ್ಡೇಕರ್‌ ಮಂಜಪ್ಪ ತರಬೇತಿ ಕೇಂದ್ರದಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ನವ ಸಂಕಲ್ಪ ಚಿಂತನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ತಾಂತ್ರಿಕತೆ ಬಹಳಷ್ಟು ಅಭಿವೃದ್ಧಿ ಹೊಂದಿದ್ದು, ಹೀಗಾಗಿ ಚುನಾವಣೆಗಳನ್ನು ಗೆಲ್ಲಬೇಕಾದರೆ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಅಂದಾಗ ನಾವು ಬೆಳಗಾವಿ ಜಿಲ್ಲೆಯಲ್ಲಿ 18ರಲ್ಲಿ 12 ಸೀಟುಗಳನ್ನು ಗೆಲ್ಲಬಹುದು ಎಂದರು.

ಕಳೆದ 8 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಭಿವೃದ್ದಿಗೆ ಆದ್ಯತೆ ನೀಡುತ್ತಿಲ್ಲ. ಭ್ರಷ್ಟಾಚಾರವೂ ಮಿತಿ ಮೀರಿದೆ. ಕಳಪೆ ಆಡಳಿತ ನೀಡುತ್ತಿದ್ದು, ಆರ್ಥಿಕತೆ ಹಳ್ಳ ಹಿಡಿದಿದೆ. ಹೀಗಾಗಿ ದೇಶ, ರಾಜ್ಯದ ಜನತೆ ಬೇಸತ್ತಿದ್ದಾರೆ ಎಂದು ಆರೋಪಿಸಿದರು.
ದೇಶ, ರಾಜ್ಯ ಸೇರಿದಂತೆ ಎಲ್ಲಾ ಸಮಾಜದವರೂ ಪ್ರಗತಿ ಕಾಣಬೇಕಾದರೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ. ಕಾರಣ ಯುವ ಜನತೆ ಎಚ್ಚರ ವಹಿಸುವುದು ಅಗತ್ಯವಿದೆ. ಅದೇ ಕಾರಣದಿಂದ ಘಟಪ್ರಭ ಪಟ್ಟಣದ ಸೇವಾದಳದಲ್ಲಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಕಾರ್ಯಕ್ರಮಕ್ಕೂ ಮುನ್ನ ಸೇವಾದಳದ ವತಿಯಿಂದ ಧ್ವಜಾರೋಹಣ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳಕರ್‌, ಅಂಜಲಿ ನಿಂಬಾಳ್ಕರ್‌, ಮಾಜಿ ಶಾಸಕರಾದ ಅಶೋಕ ಪಟ್ಟಣ, ರಮೇಶ ಕುಡಚಿ, ಆರ್‌.ಬಿ. ಪಾಟೀಲ್‌, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಕಾಂಗ್ರೆಸ್‌ ಮುಖಂಡರಾದ ಟಿ. ಈಶ್ವರ, ಮಹಾವೀರ ಮೋಹಿತೆ, ಸದಾನಂದ ಡಂಗಣ್ಣವರ್‌, ಸುನೀಲ್‌ ಹಣಮಣ್ಣವರ್‌, ದಯಾನಂದ ಪಾಟೀಲ್‌ ಸೇರಿದಂತೆ 300ರಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.