ಖಾಸಗಿ ಶಾಲೆಗಳ ಹಾವಳಿಯಿಂದ ಸರ್ಕಾರಿ ಕನ್ನಡ ಶಾಲೆಗಳಿಗೆ ಕಂಟಕ: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಕಳವಳ

ಹುಕ್ಕೇರಿ: ಖಾಸಗಿ ಶಾಲೆಗಳ ಮಾಫಿಯಾ ಹೊಡೆತದಿಂದ ಸರ್ಕಾರಿ ಕನ್ನಡ ಶಾಲೆಗಳಿಗೆ ಕಂಟಕ ಎದುರಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಬನಶಂಕರಿ ಫೌಂಡೇಶನ್ ವತಿಯಿಂದ ಶುಕ್ರವಾರ ಕೊಡಮಾಡಲಾದ ಕೋಟೆಭಾಗದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಪ್ರತಿ ಕೊಠಡಿಗಳಿಗೆ ಗ್ರೀನ್ ಬೋರ್ಡ್ ಮತ್ತು ವಿದ್ಯಾರ್ಥಿಗಳಿಗೆ ವಾಟರ್ ಬಾಟಲ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಖಾಸಗಿ ಒಡೆತನದ ಶಾಲೆಗಳ ಮಾಫಿಯಾ ಮೀತಿ ಮೀರಿದ್ದು, ಈ ಸಂಸ್ಥೆಗಳಲ್ಲಿ ಶಾಲಾ ಶುಲ್ಕ, ಡೊನೇಶನ್ ಸೇರಿದಂತೆ ಮತ್ತಿತರ ಹಾವಳಿ ಹೆಚ್ಚಿದೆ. ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಹುತೇಕ ಖಾಸಗಿ ಶಾಲೆಗಳು ಪ್ರಭಾವಿ ಮತ್ತು ಜನಪ್ರತಿನಿಧಿಗಳಿಗೆ ಸೇರಿವೆ. ಈ ಮಾಫಿಯಾದಿಂದ ಸರ್ಕಾರಿ ಶಾಲೆಗಳ ಅವನತಿಯಾಗುತ್ತಿದ್ದು ಸಾವಿರಾರು ಸರ್ಕಾರಿ ಶಾಲೆಗಳು ಮುಚ್ಚಿಹೋಗಿವೆ. ಇದಕ್ಕೆ ಸರ್ಕಾರ ಮತ್ತು ಜನಪ್ರತನಿಧಿಗಳು ನೇರ ಹೊಣೆ ಎಂದು ಅವರು ಆರೋಪಿಸಿದರು.
ಕೋಟೆಭಾಗದ ಈ ಶಾಲೆಯನ್ನು ಬನಶಂಕರಿ ಫೌಂಡೇಶನ್ದಿಂದ ದತ್ತು ತೆಗೆದುಕೊಂಡು ಭೌತಿಕ ಬೆಳವಣಿಗೆಯೊಂದಿಗೆ ಶಾಲೆಯನ್ನು ಸಮಗ್ರ ಅಭಿವೃದ್ಧಿಪಡಿಸಲಾಗುವುದು. ಜತೆಗೆ ಕಲಿಕೆಗೆ ಬೇಕಾದ ಉತ್ತಮ ವಾತಾವರಣ ಸೃಷ್ಟಿಸಲಾಗುವುದು. ಬರುವ ದಿನಗಳಲ್ಲಿ ಶಾಲೆಯ ಶತಮಾನೋತ್ಸವ ಆಚರಿಸುವ ಮೂಲಕ ಇಡೀ ಜಿಲ್ಲೆಯಲ್ಲಿಯೇ ಮಾದರಿ ಶಾಲೆಯನ್ನಾಗಿ ರೂಪಿಸಲು ಪಣ ತೊಡಲಾಗಿದೆ ಎಂದು ಅವರು ಹೇಳಿದರು.
ವಿರಕ್ತಮಠದ ಶಿವಬಸವ ಸ್ವಾಮೀಜಿ, ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ಬಿಇಒ ಮೋಹನ ದಂಡಿನ್, ಎಸ್ಡಿಎಂಸಿ ಅಧ್ಯಕ್ಷ ಅರವಿಂದ ದೇಶಪಾಂಡೆ, ಸೋಮಶೇಖರ ಮಠಪತಿ, ಬನಶಂಕರಿ ಫೌಂಡೇಶನ್ ಟ್ರಸ್ಟಿಗಳಾದ ವಿನೋದ ಮುತಾಲಿಕ, ಅನಂತ ಮುತಾಲಿಕ, ತೇಜಸ್ವಿನಿ ಜೋಶಿ, ಸಂಜೀವ ಮುತಾಲಿಕ ಮತ್ತಿತರರು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಎಸ್.ಎಸ್.ನೊಗನಿಹಾಳ ಸ್ವಾಗತಿಸಿದರು. ಶಿಕ್ಷಕಿ ಮಂಜುಳಾ ಅಡಿಕೆ ನಿರೂಪಿಸಿದರು. ಶಿಕ್ಷಕ ಮಹಾಂತೇಶ ಸಂಬಾಳ ವಂದಿಸಿದರು.//////