Belagavi News In Kannada | News Belgaum

3,500 ಗ್ರಾಂ ಚಿನ್ನ ಕದ್ದಿದ್ದ ಖರ್ತನಾಕ್ ಕಳ್ಳರು ಅರೆಸ್ಟ್

ಚಿಕ್ಕೋಡಿ: 3,500 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದ ಪ್ರಕರಣವನ್ನು ಬೆಳಗಾವಿ ಪೊಲೀಸರು ಭೇದಿಸಿದ್ದಾರೆ.

ಕಳೆದ ತಿಂಗಳು ಮೇ 28 ರಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿನ ಶ್ರೀ ಮಹಾಲಕ್ಷ್ಮಿ ಕೋ ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಸುಮಾರು 3,500 ಗ್ರಾಂ ಚಿನ್ನ ಕದ್ದಿದ್ದ ಖದೀಮರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀ ಮಹಾಲಕ್ಷ್ಮಿ ಕೋ ಆಪ್ ಕ್ರೆಡಿಟ್ ಸೊಸೈಟಿಯಲ್ಲಿದ್ದ 110 ಗ್ರಾಹಕರ ಒಟ್ಟು 3,500 ಗ್ರಾಂ ಚಿನ್ನ ಕಳ್ಳತನವಾಗಿತ್ತು. ಈ ಪೈಕಿ 2,800 ಗ್ರಾಂ ಚಿನ್ನವನ್ನ ಪೊಲೀಸರು ಖದೀಮರಿಂದ ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಮೇ ತಿಂಗಳ 28 ರಂದು ಈ ಕಳ್ಳತನ ಪ್ರಕರಣ ನಡೆದಿತ್ತು. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನ ಬೆನ್ನತ್ತಿದ್ದ ಬೆಳಗಾವಿ ಜಿಲ್ಲಾ ಪೊಲೀಸರು ಕಾರ್ಯಾಚರಣೆ ಕೈಗೊಂಡು 25 ದಿನಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನ ಚಿನ್ನ ಸಮೇತ ಬಂಧಿಸಿದ್ದಾರೆ.

ಹುಸೇನ್ ಮಲಿಕಸಾಬ್(40), ಸದ್ದಾಂ ಜಮಖಂಡಿ(22), ರಿಯಾಜ್ ಪೈಲವಾನ್(23) ಹಾಗೂ ಹಾಜಿಸಾಬ್ ಶೇಖ್(36) ಬಂಧಿತ ಆರೋಪಿಗಳಾಗಿದ್ದು, ಇವರು ವೃತ್ತಿಪರ ಕಳ್ಳರಾಗಿದ್ದಾರೆ.

ಈ ಕುರಿತು ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್‌ ನಿಂಬರಗಿ ಹಂದಿಗುಂದ ಅವರು, ಕೋ-ಆಪರೇಟಿವ್ ಸೊಸೈಟಿಯಲ್ಲಿ ಬಡಜನರು ಅದರಲ್ಲಿಯೂ ವಿಶೇಷವಾಗಿ ಕಷ್ಟಪಟ್ಟು ದುಡಿದ ರೈತರು ಚಿನ್ನವನ್ನು ಇಟ್ಟಿದ್ದರು. ಅದಕ್ಕೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹಾರುಗೇರಿ ಸಿಪಿಐ ಹಟ್ಟಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು ಎಂದು ವಿವರಿಸಿದರು.

ಪೊಲೀಸರು ಹಾಗೂ ಕಾರ್ಯಾಚರಣೆ ರಚಿಸಿದ್ದ ತಂಡದ ಎಲ್ಲ ಪೊಲೀಸ್ ಸಿಬ್ಬಂದಿ ಪ್ರಯತ್ನದಿಂದ ಕಳ್ಳತನದಲ್ಲಿ ಭಾಗಿಯಾದ ನಾಲ್ಕು ಜನರನ್ನು ಬಂಧಿಸಲಾಗಿದೆ. ಒಬ್ಬನನ್ನು ಆದಷ್ಟು ಬೇಗ ಬಂಧಿಸಲಾಗುವುದು. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ ಎಂದರು./////