Belagavi News In Kannada | News Belgaum

ಕಿತ್ತೂರಿನಲ್ಲಿ “ಅಮೃತ ಭಾರತಿಗೆ ಕನ್ನಡದಾರತಿ”

ಭಾರತ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಅಪಾರ: ಮಹಾಂತೇಶ ದೊಡ್ಡಗೌಡ್ರ

ಬೆಳಗಾವಿ, ಜೂ.25  : ಸ್ವಾತಂತ್ರ್ಯ ಹೋರಾಟಗಾರಾದ ವೀರ ರಾಣಿ ಕಿತ್ತೂರು ಚೆನ್ನಮ್ಮ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಸೇರಿದಂತೆ ದೇಶದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣ ತ್ಯಾಗ, ಬಲಿದಾನಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ನೀಡಿದ್ದಾರೆ. ಭಾರತ ಸ್ವಾತಂತ್ರ್ಯ ಹೋರಾಟಗಾರ ಕೊಡುಗೆ ಅಪಾರವಾಗಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ ಅವರು ತಿಳಿಸಿದರು.
ಚನ್ನಮನ ಕಿತ್ತೂರು ಕೋಟೆ ಆವರಣದಲ್ಲಿ ಶನಿವಾರ(ಜೂ.25)  ನಡೆದ “ಆಝಾದಿ ಕಾ ಅಮೃತ ಮಹೋತ್ಸವ” ಅಂಗವಾಗಿ “ಅಮೃತ ಭಾರತಿಗೆ ಕನ್ನಡದಾರತಿ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಅಮೃತ ಭಾರತಿಗೆ ಕನ್ನಡದಾರತಿ” ಕಾರ್ಯಕ್ರಮ
ರಾಜ್ಯದಲ್ಲಿ ಆಯ್ದ 75 ಸ್ಥಳಗಳಲ್ಲಿ ಹಾಗೂ ಜಿಲ್ಲೆಯ 5 ಸ್ಥಳಗಳಲ್ಲಿ ಏಕ ಕಾಲಕ್ಕೆ ನಡೆಯುತ್ತಿದೆ.  ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ತ್ಯಾಗ, ಬಲಿದಾನಗಳ ಮೂಲಕ ಸ್ವಾತಂತ್ರ್ಯ ನೀಡಿದ ಹೋರಾಟಗಾರ ಸ್ಮರಣೆ ದಿನವಾಗಿ ಆಚರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಿತ್ತೂರು ಕೋಟೆ ಪ್ರತಿರೂಪ ನಿರ್ಮಾಣ:

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಭಾಗಕ್ಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿರುವುದು ಸಂತಸ ತಂದಿದೆ. ಯುವಕರು, ವಿದ್ಯಾರ್ಥಿಗಳು ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು. ಸ್ವಾತಂತ್ರ್ಯದ ಹೋರಾಟಗಾರರನ್ನು  ಸ್ಮರಿಸಿ ಭವಿಷ್ಯದಲ್ಲಿ ಭಾರತಕ್ಕೆ ಕೊಡುಗೆ ನೀಡುವಂತಹ ಮಾದರಿ ವ್ಯಕ್ತಿಗಳಾಗಬೇಕು ಎಂದು ತಿಳಿಸಿದರು.
ಸರ್ಕಾರದ ನಿರ್ದೇಶನದಂತೆ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವ ಮಾದರಿಯ ಆಚರಣೆ ಮಾಡಲಾಗುವುದು. ಕಿತ್ತೂರು ಕೋಟೆ ಪ್ರತಿರೂಪ ನಿರ್ಮಾಣ ಮಾಡಲು ಸರ್ಕಾರದಿಂದ ಈಗಾಗಲೇ ಪ್ರಾಜೆಕ್ಟ್ ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯ ಪೂರ್ವ ಕಿತ್ತೂರು ಕೋಟೆಯ ಅಚ್ಚೆ ಕಿತ್ತೂರು ನಾಡಲ್ಲಿ ಉಳಿಯಲಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡ್ರ ತಿಳಿಸಿದರು.

ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವಕರ ಪಾತ್ರ:

ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ದಿನವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳ ಕಳೆದಿವೆ. ರಾಣಿ ಚೆನ್ನಮ್ಮ, ಸಂಗೋಳ್ಳಿ  ರಾಯಣ್ಣ ಸೇರಿದಂತೆ ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ಸ್ವಾತಂತ್ರ್ಯ ದೊರೆತಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ತಿಳಿಸಿದರು.
ಸ್ವಾತಂತ್ರ್ಯ ಹೋರಾಟದ ವಿಚಾರದಲ್ಲಿ ಕಿತ್ತೂರು ಸಂಸ್ಥಾನ ಮುಂಚೂಣಿಯ ಹೋರಾಟದ ಸಂಸ್ಥಾನವಾಗಿದೆ.
ಪ್ರತಿ ವಿದ್ಯಾರ್ಥಿಗಳು ಕಿತ್ತೂರಿನ ಸ್ವಾತಂತ್ರ್ಯ ಹೋರಾಟಗಾರ ಸ್ಮರಿಸಬೇಕು. ಸ್ವಯಂ ಪ್ರೇರಿತವಾಗಿ ಭವ್ಯ ಭಾರತ ನಿರ್ಮಾಣಕ್ಕೆ ಯುವಕರು, ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು.
ಬ್ರಿಟಿಷರು  ಭಾರತದ ಸ್ವಾಂತಂತ್ರ್ಯ ಹೋರಾಟಗಾರರಿಗೆ ಭಯಾನಕ, ಕ್ರೂರ ಕೃತ್ಯಗಳನ್ನು ಎಸಗಿದ್ದಾರೆ. ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಬಾಲ ಗಂಗಾಧರ ತಿಲಕ, ಮಹಾತ್ಮ ಗಾಂಧಿ, ಸೇರಿದಂತೆ ಅನೇಕ ಹೋರಾಟಗಾರರು ಸ್ವಾತಂತ್ರ್ಯ ಪಡೆಯಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡಿದ್ದಾರೆ. ಅವರ ಚರಿತ್ರೆ, ಸ್ವಾತಂತ್ಯ ಪೂರ್ವ ಇತಿಹಾಸಗಳನ್ನು ಯುವ ಪೀಳಿಗೆ ಓದಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಎಲ್ಲಾ ಕ್ಷೇತ್ರದಲ್ಲಿ ಭಾರತ ಬಲಿಷ್ಠ ಆಗಬೇಕು. ವಿದ್ಯಾರ್ಥಿಗಳ ಕೈಯಲ್ಲಿ ಭಾರತದ ಭವಿಷ್ಯ ಅಡಗಿದೆ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ವ್ಯರ್ಥ ಆಗುವುದಕ್ಕೆ ಬಿಡದೆ ಅವರ ಸ್ಮರಣೆಯ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವಕರು, ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಬೇಕು ಎಂದು ಎನ್.ರವಿಕುಮಾರ ಅವರು ತಿಳಿಸಿದರು.

ಪ್ರತಿಜ್ಞಾ ವಿಧಿ ಸ್ವೀಕಾರ:

ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯ ಕುರಿತು
ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
ಎಲ್.ಇ.ಡಿ ಫಲದ ಮೂಲಕ ಭಾರತ ಸ್ವಾಂತಂತ್ರ್ಯ ಹೋರಾಟಗಾರರ ಸ್ವಾತಂತ್ರ್ಯ ಸಂಗ್ರಾಮದ ಅಹಿಂಸಾ ಚಳುವಳಿ, ಹಾಗೂ ಕ್ರಾಂತಿಕಾರಿ ಹೋರಾಟಗಳ ಕುರಿತು ಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಿಚ್ಚನಿಕೆಯ ಪಂಚಾಕ್ಷರಿ ಸ್ವಾಮೀಜಿ, ಕಿತ್ತೂರು ರಾಜಗುರು ಸಂಸ್ಥಾನದ ಮಡಿವಾಳ ಮಹಾ ಸ್ವಾಮಿಗಳು, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕಿತ್ತೂರು ತಹಶೀಲ್ದಾರ ಸೋಮಪ್ಪ ಹಾಲಗಿ, ಕಿತ್ತೂರ ಪಟ್ಟಣ ಪಂಚಾಯತ ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ಸ್ವಾಗತ ಕೋರಿದರು, ಸುನೀತಾ ದೇಸಾಯಿ ನಿರೂಪಿಸಿ ವಂದಿಸಿದರು.
ಇದಕ್ಕೂ ಮುಂಚೆ ಕಿತ್ತೂರು ಚನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕಿತ್ತೂರು ಚನ್ನಮ್ಮ ವೃತ್ತದಿಂದ ಕೋಟೆ ಆವರಣದವರೆಗೆ ಕುಂಭ ಕಳಶ ಮೆರವಣಿಗೆ, ಡೊಳ್ಳು ಕುಣಿತ, ಹಲಗೆ ಮೇಳ, ಬೊಂಬೆ ಕುಣಿತ ಪ್ರದರ್ಶನ ಸೇರಿದಂತೆ ವಿವಿಧ ಕಲಾ ತಂಡಗಳು, ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಶಿಲಾ ಫಲಕ ಅನಾವರಣ:
ಬಳಿಕ ಕಿತ್ತೂರು ಪಟ್ಟಣ ಪಂಚಾಯತ ಆವರಣದಲ್ಲಿ “ಅಮೃತ ಭಾರತಿಗೆ ಕನ್ನಡದಾರತಿ” ಶಿಲಾ ಫಲಕ ಅನಾವರಣ ಗೊಳಿಸಲಾಯಿತು.
ಈ ಸಂಧರ್ಬದಲ್ಲಿ ಕಿತ್ತೂರು ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕಿತ್ತೂರು ತಹಶೀಲ್ದಾರ ಸೋಮಪ್ಪ ಹಾಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.