Belagavi News In Kannada | News Belgaum

ಅಗ್ನಿಪಥ ವಿರೋಧಿಸಿ ಹುಕ್ಕೇರಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ಹುಕ್ಕೇರಿ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ಪಟ್ಟಣದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಯೋಜನೆ ಹಿಂಪಡೆಯದೇ ಇದ್ದಲ್ಲಿ ಇನ್ನಷ್ಟು ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಿಜೆಪಿಯ ದುರುದ್ದೇಶ ಹಾಗೂ ಯೋಜನೆಗಳ ಹಿಂದಿನ ಮರ್ಮವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಪ್ರತಿಯೊಂದರಲ್ಲಿ ರಾಜಕೀಯ ಷಡ್ಯಂತ್ರ ನಡೆಸಲಾಗುತ್ತಿದ್ದು ಆ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. 8 ವರ್ಷದ ಹಿಂದೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಕಪ್ಪು ಹಣವನ್ನೂ ವಾಪಸ್ ತಂದು ಬಡವರಿಗೆ ನೀಡುತ್ತೇವೆ ಅಂತ ಸುಳ್ಳುಗಳ ಮೇಲೆ ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದೆ. ಇದೀಗ ಉದ್ಯೋಗ ಸೃಷ್ಟಿ ಹೆಸರಿನಲ್ಲಿ ಅಗ್ನಿಪಥ ಯೋಜನೆ ತಂದು ಸೇನೆಯಲ್ಲಿ ಯುವಕರನ್ನು ಬಲಿಪಶು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಅಧಿಕಾರಕ್ಕೆ ಬಂದ ಬಿಜೆಪಿ ಈಗ ಎಲ್ಲಾ ಖಾಸಗೀಕರಣ ಮಾಡುವ ಮೂಲಕ ಜಾರಿಕೊಂಡಿದೆ. ಜೊತೆಗೆ ಅಗ್ನಿಪಥ ಜಾರಿಗೆ ತಂದು ಯುವಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಸಿಕೊಂಡು ನಂತರ ನಾಲ್ಕು ವರ್ಷದ ನಂತರ ಅವರನ್ನು ನಿವೃತ್ತಿಗೊಳಿಸಿ ಪಿಂಚಣಿಯೂ ಇಲ್ಲದೆ ಕಾರ್ಯ ನೇಮಕಾತಿಯೂ ಮಾಡಿಕೊಳ್ಳದೆ ಅವರನ್ನು ಅತಂತ್ರರನ್ನಾಗಿಸುವ ಯೋಜನೆ ಮಾಡಿದೆ. ಇದನ್ನು ಕಾಂಗ್ರೆಸ್ ವಿರೋಧಿಸುತ್ತಿದ್ದು ಅವರನ್ನು ಕಾಯಂಗೊಳಿಸುವಂತಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ ರವದಿ, ಸಂತೋಷ ಮುಡಸಿ, ಮುಖಂಡರಾದ ಜೀತು ಮರಡಿ, ದಿಲೀಪ ಹೊಸಮನಿ, ಚಂದು ಗಂಗನ್ನವರ, ಕೆಂಪಣ್ಣಾ ಶಿರಹಟ್ಟಿ, ಸಲೀಮ್ ಕಳಾವಂತ, ಕಬೀರ ಮಲೀಕ್, ಬಸವರಾಜ ಪಾಟೀಲ, ಭೀಮಗೌಡ ಅಮ್ಮಣಗಿ, ಶಾನೂರ ತಹಸೀಲ್ದಾರ, ರೇಖಾ ಚಿಕ್ಕೋಡಿ, ವಿಜಯ ಮಾಳಗೆ ಮತ್ತಿತರರು ಉಪಸ್ಥಿತರಿದ್ದರು.//////