Belagavi News In Kannada | News Belgaum

ಆಸ್ಟ್ರೇಲಿಯಾದ ಶಾಲೆಯೊಂದರಲ್ಲಿ ಕನ್ನಡ ಡಿಂಡಿಮ: ಕನ್ನಡಿಗರೊಂದಿಗೆ ಸಭೆ ನಡೆಸಿದ ಸಚಿವ ಜ್ಯೋಶಿ

ಪರ್ಥ್: ಆಸ್ಟ್ರೇಲಿಯಾದ ಪರ್ಥನಲ್ಲಿರುವ ನಮ್ಮ ಕನ್ನಡಿಗರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದು ಅತ್ಯಂತ ಆತ್ಮೀಯ ಕ್ಷಣ ಎಂದು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಶ್ರೀ ಪ್ರಲ್ಹಾದ ಜೋಶಿಯವರು ಹೇಳಿದ್ದಾರೆ.

ವೆಸ್ಟರ್ನ್ ಆಸ್ಟ್ರೇಲಿಯಾ ಕನ್ನಡ ಸಂಘದವರು ಕನ್ನಡ ಶಾಲೆಗಳನ್ನು ನಡೆಸುತ್ತಿದ್ದು, ರಾಜ್ಯೋತ್ಸವ, ಯುಗಾದಿ, ಸ್ವಾತಂತ್ರ್ಯೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿರುವ ನಮ್ಮ ಕನ್ನಡಿಗರ ಕನ್ನಡ ಪ್ರೇಮ ನಿಜಕ್ಕೂ ಮೆಚ್ಚುವಂತದ್ದು. ಮಾತ್ರವಲ್ಲ, ಇತರರಿಗೂ ಮಾದರಿ ಎಂದು ಪ್ರಲ್ಹಾದ ಜೋಶಿಯವರು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿ ಎಲ್ಲ ಕಾರ್ಯಕ್ರಮಗಳು ಅತ್ಯಂತ ಕನ್ನಡಮಯವಾಗಿದ್ದು, ಕನ್ನಡನಾಡಿನಲ್ಲಿ ನಡೆದಂತೆ ಆಸ್ಟ್ರೇಲಿಯಾದಲ್ಲೂ ಕನ್ನಡ ಕಾರ್ಯಕ್ರಮಗಳ ನಡೆಸುತ್ತಿರುವದು ಹೆಮ್ಮೆಯ ವಿಷಯ.
ಕನ್ನಡ ನಾಡಲ್ಲಿ ಕನ್ನಡ ಕಲಿಸೋದಕ್ಕೆ ರಾಜ್ಯ ಸರಕಾರ ಕಡ್ಡಾಯ ನೀತಿ ಜಾರಿಗೆ ತರಬೇಕಾಗದ ಸ್ಥಿತಿ ಇರುವಾಗ ಆಸ್ಟ್ರೇಲಿಯಾದ ಶಾಲೆಯೊಂದರಲ್ಲಿ ಕನ್ನಡ ಬೋಧನೆ ನಡೆಯುತ್ತಿದೆ. ದ್ವೀಪ ರಾಷ್ಟ್ರದಲ್ಲಿ ಕನ್ನಡದ ಕಲರವ ಕೇಳಿ ಬರುತ್ತಿದೆ ಎಂಬುದು ನಿಜಕ್ಕೂ ಅಭಿಮಾನಪಡುವಂತಹ ವಿಷಯ. ಬಹುತೇಕ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿಯೂ ಕನ್ನಡ ಸಂಘಟನೆಗಳಿವೆ. ಕನ್ನಡದ ಸಂಸ್ಕೃತಿಯನ್ನು ವಿದೇಶಗಳಲ್ಲಿಯೂ ಪಸರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಈ ಶಾಲೆ ಕನ್ನಡ ಬೋಧನೆಯನ್ನು ಮಾಡುತ್ತಿದೆ. ಆಸ್ಟ್ರೇಲಿಯಾದಲ್ಲಿ ಬಹು ಸಂಖ್ಯೆಯಲ್ಲಿ ಕನ್ನಡಿಗರಿದ್ದು, ಕನ್ನಡ ಸೇವೆ ಮಾಡುತ್ತಿದ್ದಾರೆ ಎಂದೂ ಸಚಿವ ಪ್ರಲ್ಹಾದ ಜೋಶಿಯವರು ಹೇಳಿದ್ದಾರೆ.

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡಿಗನಾಗಿರು ಎಂಬ ಕವಿವಾಣಿಯಂತೆ ನಮ್ಮ ಕನ್ನಡಿಗರು ಪ್ರಪಂಚದ ವಿವಿಧ ದೇಶಗಳಲ್ಲಿ ಇದ್ದರೂ ನಮ್ಮ ಕನ್ನಡದ ಸ್ವಾಭಿಮಾನಕ್ಕೆ ದಕ್ಕೆಯಾಗದಂತೆ ಇತರೆ ರಾಷ್ಟ್ರಗಳಲ್ಲಿರುವ ಕನ್ನಡಿಗರ ರಕ್ಷಣೆಗೆ ನಿಂತಿರುವುದು ಶ್ಲ್ಯಾಘನೀಯ, ಇದೇ ರೀತಿ ತಮ್ಮ ಕನ್ನಡ ಸೇವೆ ಮುಂದುವರೆಯಲಿ ಎಂದೂ ಸಚಿವ ಜೋಶಿಯವರು ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿರುವ ಕನ್ನಡಿಗರಿಗೆ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಕನ್ನಡ ಸಂಘದ ಅಧ್ಯಕ್ಷರು ಮತ್ತು ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.//////