Belagavi News In Kannada | News Belgaum

ಯೋಗಥಾನ್” ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆ

ಜಿಲ್ಲೆಯಲ್ಲಿ ಆ.12 ರಿಂದ 14 ರವರೆಗೆ "ಯೋಗಥಾನ್" ಕಾರ್ಯಕ್ರಮ

 

ಬೆಳಗಾವಿ, : ಸರ್ಕಾರದ ನಿರ್ದೇಶನದಂತೆ ಆಗಸ್ಟ್ 12 ರಿಂದ 14 ರ ವರೆಗೆ “ಯೋಗಥಾನ್” ಕಾರ್ಯಕ್ರಮ ನಡೆಯಲಿದೆ. ಸುಮಾರು 50 ರಿಂದ 60 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸ್ಥಳವನ್ನು ಮುಂಬರುವ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಸಭಾಂಗಣದಲ್ಲಿ ಬುಧವಾರ (ಜು.06) ನಡೆದ “ಯೋಗಥಾನ್” ಕಾರ್ಯಕ್ರಮ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಯೋಗದಿಂದ ರೋಗ ಮುಕ್ತ, ಯೋಗವನ್ನು ಸಾರಿ ವಿಶ್ವ ದಾಖಲೆ ಮಾಡೋಣ” ಎಂಬ ಘೋಷ ವಾಕ್ಯದೊಂದಿಗೆ ಆಗಸ್ಟ್ 12, 13 ಹಾಗೂ 14 ರಂದು ಬೆಳಗಾವಿ ಸೇರಿದಂತೆ ರಾಜ್ಯದ 20 ಜಿಲ್ಲೆಗಳಲ್ಲಿ “ಯೋಗಥಾನ್” ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಸುವರ್ಣ ವಿಧಾನಸೌಧ ಆವರಣದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು ಆದರೆ ಹೆಚ್ಚು ಸ್ಥಳಾವಕಾಶದ ಅವಶ್ಯವಿದ್ದು, ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸೂಕ್ತ ಸ್ಥಳ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ಯೋಗ, ಆರೋಗ್ಯ ಮತ್ತು ಆಧ್ಯಾತ್ಮಿಕತೆ ಯುವ ಸಬಲೀಕರಣ ಸೆಮಿನಾರ್‌ಗಳು, ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆ ಪ್ರಚಾರಗಳು ಹಾಗೂ ಸ್ಥಳೀಯ ಪ್ರತಿಭೆಗಳು ಭಾಗವಹಿಸಬಹುದು. ವಾಣಿಜ್ಯೋದ್ಯಮ, ಯುವ ಸಂಗೀತ ಉತ್ಸವದ ಪ್ರದರ್ಶನ ಗಳು ನಡೆಯಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಖರ್ಚು ವೆಚ್ಚಗಳ ಪೂರ್ವ ಸಿದ್ಧತೆ:
ಒಟ್ಟು 50 ಸಾವಿರ ಜನರು ಭಾಗವಹಿಸಲು ಸರ್ಕಾರದ ನಿರ್ದೇಶನವಿದ್ದು ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುರಿ ನಿಗದಿ ಪಡಿಸಿ 60 ಸಾವಿರ ಜನರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವಂತಹ ಜನರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಟೀ ಶರ್ಟ್ ವಿತರಣೆ, ಉಪಹಾರ ಮತ್ತು ನೀರಿನ ವ್ಯವಸ್ಥೆ, ಪ್ರಚಾರ ಕಾರ್ಯ ಸೇರಿದಂತೆ ಪ್ರತಿಯೊಂದು ವ್ಯವಸ್ಥೆ ಮಾಡಿಕೊಳ್ಳಬೇಕು.
ಅದೇ ರೀತಿಯಲ್ಲಿ ಬಾರ್ ಕೋಡ್ ಐಡಿ ಕಾರ್ಡ್, 500 ಬಸ್ ಗಳಿಗೆ ಸಾರಿಗೆ ವೆಚ್ಚ, ನೊಂದಣಿ ಕೌಂಟರ್, ಇ ಟಾಯ್ಲೆಟ್ ವ್ಯವಸ್ಥೆ, ಗಿನ್ನಿಸ್ ದಾಖಲೆ ಪ್ರಮಾಣ ಪತ್ರಗಳನ್ನು ಸಿದ್ಧತೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ವಿವಿಧ ಅಭ್ಯರ್ಥಿಗಳ ನೋಂದಣಿ:
ಪೊಲೀಸ್ ಟ್ರೈನಿಂಗ್ ಸೆಂಟರ್ ಪ್ರಶಿಕ್ಷನಾರ್ಥಿಗಳು, ಆರ್ಮಿ, ಕೋಬ್ರಾ ಬೆಟಾಲಿಯನ್, ಬೆಳಗಾವಿ ಹಾಗೂ ಖಾನಾಪುರ ತಾಲೂಕಿನ ಸ್ಥಳೀಯ ಶಾಲಾ ವಿದ್ಯಾರ್ಥಿಗಳು, ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳು, ಎನ್.ಎಸ್.ಎಸ್- ಎನ್.ಸಿ.ಸಿ, ಪೌರ ಕಾರ್ಮಿಕರು, ನಿವೃತ್ತ ಆರ್ಮಿ ಯೋಧರು ಹಾಗೂ ನರೇಗಾ ಕಾರ್ಮಿಕರು ನೋಂದಣಿ ಮೂಲಕ ಭಾಗವಹಿಸಲಿದ್ದಾರೆ. ಪ್ರತಿ 50 ಅಭ್ಯರ್ಥಿಗಳಿಗೆ 1 ಲೀಡರ್ ನೇಮಕ ಮಾಡಲಾಗುವದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್. ಹೆಚ್ ವಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಬಸವರಾಜ ಮಿಲ್ಲಾನಟ್ಟಿ, ಆಯುಷ್ ಅಧಿಕಾರಿ ಶ್ರೀಕಾಂತ ಸುಣಧೋಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ, ಕಾಲೇಜು ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.