Belagavi News In Kannada | News Belgaum

ನೆನಪಿರಲಿ ಸಂಭವಾಮೀ ಯುಗೇ ಯುಗೇ….

*ನೆನಪಿರಲಿ ಸಂಭವಾಮೀ ಯುಗೇ ಯುಗೇ….*

ದೋಸ್ತ ಈ ಸಂತ್ಯಾ ಅದಾನಲಾ ಮಗಾ ಎಷ್ಟ ಮೆರಿಯಾಕತ್ತಾನ ಅಂತೀ…ಅವನವ್ವನ ನಾಕೈದ ವರ್ಷದ ಹಿಂದ ಇಲ್ಲೆ ಜುಬ್ಲಿ ಸರ್ಕಲ್ ದಾಗ ದೋಸ್ತ ಇಪ್ಪತ್ತ ರೂಪಾಯಿ ಕೊಡ್ಲೆ ಪ್ಲೀಜ್ ಊರಿಗ್ ಹೋಗಾಕ ಬಸ್ ಚಾರ್ಜ್ ಇಲ್ಲ ಅಂತ ಬೆನ್ನಬಿದ್ದಿದ್ದ….ಎಪ್ಪಾ ಎನ್ ಕೇಳಿ ಅವ್ನ ಕಥಿ ನನ್ನೂ ಅರಿಬಿ ಹಾಕೊತಿದ್ಲೆ ಕಾಲೇಜ್ ಹೋಗಾಗ ಎರಡ ಜೋಡ್ ಅರಬಿ ಬಿಟ್ರ ಕಾಲಾಗ್ ಚಪ್ಪಲ್ಲೂ ಇರಲಿಲ್ಲ ಅಂವಂಗ್ ನನ್ನು ಹಳಿ ಚಪ್ಪಲ್ ಹಾಕೋತಿದ್ಲೇಪಾ…ಈಗ ನೋಡಿ ಹೆಂಗ್ ಆಗ್ಯಾನ??

ಸಾರ್ ಅದೇನ್ ಕೇಳ್ತೀರಾ ಕಳ್ಳಮಂಜನ ಕೈ ಕರಾಮತ್ತೆ ಅಂತಾದ್ದು ಮೆಜೆಸ್ಟಿಕ್ ಅಲ್ಲಿ ಒಂದ್ ಪ್ಯಾಕೆಟ್ ಹೊಡದ್ರೆ ವಾರ ಪೂರ್ತಿ ಎಂಜಾಯ್ ಮಾಡ್ತಾನೆ.ಒಂದೊಮ್ಮೆ ಲಕ್ಕು ಕೈ ಕೊಡ್ತಾ ಸಿಕ್ಕಬಿದ್ದು ಒದೆ ತಿಂದು ತಿಂಗಳು ಪೂರ್ತಿ ಆಸ್ಪತ್ರೆಯಲ್ಲಿ ನರಳಾಡ್ತಾ ಇರ್ತಾನೆ ಅವನಿಗೆನ್ ಸಾರ್ ಕಷ್ಟ ಪಟ್ಟು ದುಡದ್ರೆ ತಾನೆ ದುಡ್ಡಿನ ಬೆಲೆ ಗೊತ್ತಾಗೋದು ಕಂಡೋರ ದುಡ್ಡು ಅಲ್ವಾ ಸಾರ್ ಜಾತ್ರೆ ಮಾಡ್ತಾನೆ ಇರ್ತಾನೆ.

ಬಾಸ್ ನೋಡಿದ್ರಾ ಬಾಸ್‌….ನಮ್ ಕಂಪನಿ ಷೇರ್ ಬಗ್ಗೆ ಅಪಪ್ರಚಾರ ಮಾಡ್ತಿದ್ದ ಪಕ್ಕದ ಕಂಪನಿ ಓನರ್ ಓಡೋದ್ರಂತೆ ಪಾಪಾ ಕಂಡೊರ್ಗೆಲ್ಲ ಕೆಟ್ಟದ್ ಮಾಡಿದ್ರೆ ಇನ್ನೇನ್ ತಾನೆ ಆಗುತ್ತೆ?? ಹೀಗೆ ಒಂದಲ್ಲ ಒಂದು ಕಡೆ ಒಂದಷ್ಟು ಪ್ಲ್ಯಾಶ್ ಬ್ಯಾಕುಗಳು ಆಗಾಗ ಅಲ್ಲಲ್ಲಿ ಕೇಳಿ ಬರುತ್ತಲೇ ಇರುತ್ತವೆ.
ಒಂದಾನೊಂದು ಕಾಲದಲ್ಲಿ ಹಣಬಲ,ಜನಬಲದಿಂದ ಮೆರೆದವರು ಕೂಡ ಕಾಲ ಕ್ರಮೇಣ ಮೂಲೆಗುಂಪಾಗುತ್ತ ಹೋದರೆ ಪೋಲಿ ಅಲೆಯುತ್ತಿದ್ದವರು,ಖಾಲಿ ಜೇಬಿನ ಫಕೀರ ಅನ್ನಿಸಿಕೊಂಡವರ ಅದೃಷ್ಟ ಎನ್ನುವದು ಖುಲಾಯಿಸುತ್ತ ಹೋಗಿ ಲಕ್ಷ ಕೋಟಿಯ ಬೆಲೆ ಬಾಳುವ ಬಂಗಲೆ ಕಾರುಗಳಿಗೆ ಅಂಥವರೇ ಮಾಲೀಕರಾಗುತ್ತ ಹೋಗಿರುತ್ತಾರೆ.ಬದಲಾವಣೆ ಜಗದ ನಿಯಮ ಅನ್ನುವದು ಅದೆಷ್ಟು ನಿಜವೋ ನಮ್ಮ ಸ್ಥಿತಿ-ಗತಿಗಳ ಬದಲಾವಣೆ ಕೂಡ ಅಷ್ಟೇ ನಿಜ.ಆದರೆ ಜಗತ್ತಿನ ಯಾವ ಬದಲಾವಣೆಯೂ ಕೂಡ ದಿಢೀರಣೆ ಸಂಭವಿಸುವಂತದ್ದಲ್ಲ.ಯಾವ ಕೋಟ್ಯಾಧೀಶನೂ ಕೂಡ ಇದ್ದಕ್ಕಿದ್ದಂತೆ ಬೀದಿಗೆ ಬೀಳುವದಿಲ್ಲ ಯಾವ ಸಾಮಾನ್ಯ ವ್ಯಕ್ತಿಯೂ ಕೂಡ ಒಂದೇ ದಿನದಲ್ಲಿ ಕೋಟ್ಯಾಧೀಶನೂ ಆಗುವದಿಲ್ಲ.ವಸಂತ ಮಾಸದಲ್ಲಿ ಮಾವು ಚಿಗುರುವದನ್ನ ನಾವು ನೋಡುತ್ತೇವೆ ಅಷ್ಟೇ..ಆದರೆ ಅದಕ್ಕೂ ಮೊದಲು ಎಲೆ ಉದುರುವ ಕಾಲವನ್ನು ಅದು ನಿಧಾನಕ್ಕೆ ಸಾಗಿ ಬಂದದ್ದು ನಮ್ಮ ಗಮನಕ್ಕೆ ಬರುವದೇ ಇಲ್ಲ.ವ್ಯಕ್ತಿಯೊಬ್ಬ ತನ್ನ ಸತತ ಪರಿಶ್ರಮದಿಂದ, ತಾಳ್ಮೆಯಿಂದ, ಮತ್ತು ತನ್ನದೇ ಆದ ವ್ಯವಹಾರಿಕ ಬುದ್ಧಿಯಿಂದ ನಿಧಾನಕ್ಕೆ ಹಣವನ್ನು ಹೊಂದಿಸುತ್ತ ರೂಪಾಯಿಗೆ ರೂಪಾಯಿ ಕೂಡಿಸಿ ತನ್ನ ಗುರಿಯತ್ತ ಒಂದೊಂದೇ ಮೆಟ್ಟಿಲು ಏರುತ್ತ ಹೋಗುವದಕ್ಕೆ ಸಮಯ ಸಾಥ್ ನೀಡಬೇಕಷ್ಟೇ.ಅಂದ ಹಾಗೆ ಜನರು ನಿಮ್ಮನ್ನು ಗುರುತಿಸುವದು ನೀವು ಬೆಳೆದು ನಿಂತಾಗ ಮಾತ್ರ.ಭತ್ತವನ್ನು ನಾಟಿ ಮಾಡಿ ಕೋಯ್ಲು ಮಾಡುವ ನಡುವಿನ ಅವಧಿ ಬಹಳ ಜನರ ಗಮನಕ್ಕೆ ಯಾವತ್ತಿಗೂ ಬರುವದಿಲ್ಲವಾದರೂ ಕಟಾವು ಮಾಡಿ ರಾಶಿ ಭತ್ತವನ್ನ ನೋಡಿ ಎಲ್ಲರ ಕಣ್ಣುಗಳು ಮಾತ್ರ ಖಂಡಿತವಾಗಿ ಅರಳುತ್ತವೆ. ಮತ್ತೊಬ್ಬರ ಮೇಲೆ ನಿಯಮಗಳನ್ನು ಹೇರುವದಕ್ಕೂ ಮತ್ತು ಸ್ವಂತಕ್ಕೆ ನಾವೇ ನಿಯಮಗಳನ್ನು ಪಾಲಿಸುವದಕ್ಕೂ ಬಹಳ ವ್ಯತ್ಯಾಸಗಳು ಆಗುತ್ತ ಹೋಗುತ್ತವೆ.ಮತ್ತೊಬ್ಬರ ವಿಷಯದಲ್ಲಿ ನ್ಯಾಯಾಧೀಶರಂತೆ ವರ್ತಿಸುವ ನಾವು ನಮ್ಮ ವಿಷಯಗಳಲ್ಲಿ ನ್ಯಾಯವಾದಿಗಳಾಗಿ ಬಿಡುತ್ತೇವೆ ಅನ್ನುವದು ನಮಗೆಲ್ಲ ನೆನಪಿರಬೇಕು.ಇನ್ನೊಬ್ಬರ ಏಳಿಗೆ ಕಂಡು ಕರುಬುವ ಮತ್ತೊಬ್ಬರ ಅಧಃಪತನ ಕಂಡು ಸಂಭ್ರಮಿಸುತ್ತ ಆಡಿಕೊಳ್ಳುವದರಲ್ಲೆ ಕಾಲಹಣ ಮಾಡುವ ಬದಲು ನಮ್ಮ ಗುರಿಯತ್ತ ಸಾಗಲು ನಾವೆಷ್ಟು ಪರಿಶ್ರಮ ಪಡುತ್ತಿದ್ದೇವೆ ಅನ್ನುವದರತ್ತ ಗಮನ ಹರಿಸಿದ್ದೇ ಆದರೆ ನಮ್ಮ ಸಮಯ ಕೂಡ ನಿಧಾನಕ್ಕೆ ಬದಲಾಗುತ್ತ ಹೋಗುತ್ತೆ. ನಾವೂ ಕೂಡ ಆರ್ಥಿಕ ಸಭಲತೆಯನ್ನ ಸಾಧಿಸುತ್ತ,ಗೆಲುವಿನ ಕಡೆಗೆ ನಿಧಾನಕ್ಕೆ ಸಾಗಿ ಬಿಡಬಹುದು.ಸೋತವರ ತಪ್ಪುಗಳನ್ನು ಗಮನಿಸಿ ನಮ್ಮಿಂದ ಅಂತಹ ತಪ್ಪುಗಳಾಗದಂತೆ ನೋಡಿಕೊಳ್ಳುವದರ ಜೊತೆಗೆ ಗೆದ್ದವರ ಗೆಲುವಿನ ಹಿಂದಿನ ಕಾರಣಗಳನ್ನ ಲೆಕ್ಕ ಹಾಕಿ ಅವುಗಳನ್ನ ಪಾಲಿಸುವದರ ಜೊತೆಗೆ ನಮ್ಮ ಬದುಕನ್ನ ನಾವೇ ಕಟ್ಟಿಕೊಳ್ಳಬೇಕು.ಇನ್ನುಳಿದಂತೆ ಹಜಾರೋ ಲೋಗ ಕಹೆಂಗೆ ಲೋಗೋಂ..ಕಾ ಕಾಮ ಹೇ ಕೆಹೆನಾ…ಅನ್ನುವದನ್ನ ಯಾವತ್ತಿಗೂ ಮರೆಯೋ ಹಾಗಿಲ್ಲ. ನಮ್ಮ ಬದುಕಿಗೆ ಯಾವುದು ಹೊಂದಿಕೊಳ್ಳುತ್ತದೆಯೊ ನಮ್ಮ ಮನಸ್ಸಿಗೆ ಯಾವುದು ಹಿತವೆನ್ನಿಸುತ್ತದೆಯೋ,ನಮ್ಮ ಕಾಯಕ್ಕೆ ಯಾವುದು ಮೆರಗು ತರುತ್ತದೆಯೋ ನಾಲ್ಕು ಜನರ ನಡುವೆ ಯಾವುದು ಸರಿ ಅನ್ನಿಸಿಕೊಳ್ಳುತ್ತದೆಯೋ ಅದರತ್ತ ನಾವು ಕಾಯಾ ವಾಚಾ ಮನಸಾ ನಮ್ಮನ್ನು ನಾವೇ ಒಡ್ಡಿಕೊಳ್ಳುತ್ತ ಹೊರಟು ಬಿಡಬೇಕು.ಯಾಕೆಂದರೆ ಸಂಭವಾಮೀ ಯುಗೇ ಯುಗೇ…ಅಷ್ಟೇ.

*ದೀಪಕ ಶಿಂಧೇ*
9482766018