Belagavi News In Kannada | News Belgaum

ಮಧ್ಯಪ್ರದೇಶ ಪಾಲಿಕೆ ಚುನಾವಣೆ: ಕಮಲ ವಿಲ ವಿಲ, ಕೈ ಕಿಲಕಿಲ

ಭೋಪಾಲ್: ಮಧ್ಯಪ್ರದೇಶದಲ್ಲಿ 2014ರಲ್ಲಿ ನಡೆದ ಮೇಯರ್ ಚುನಾವಣೆಗಳಲ್ಲಿ ಎಲ್ಲ 16 ಸ್ಥಾನಗಳಲ್ಲಿ ಪ್ರಾಬಲ್ಯ ಮೆರೆದಿದ್ದ ಬಿಜೆಪಿ ಈ ಬಾರಿ ಕೇವಲ ಒಂಬತ್ತು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಐದು ಕಡೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಆಮ್ ಆದ್ಮಿ ಪಾರ್ಟಿ ಒಂದು ಕಡೆ ಗೆದ್ದಿದೆ.

ಕಂಠಿ ಮಹಾನಗರಪಾಲಿಕೆಯ ಮೇಯರ್ ಹುದ್ದೆ ಬಿಜೆಪಿಯ ಬಂಡುಕೋರ ಅಭ್ಯರ್ಥಿಯ ಪಾಲಾಗಿದೆ ಎಂದು ವರದಿ ಮಾಡಿದೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಅವರ ಲೋಕಸಭಾ ಕ್ಷೇತ್ರ ಹಾಗೂ ರಾಜ್ಯ ಬಿಜೆಪಿ ಮುಖ್ಯಸ್ಥ ವಿ.ಡಿ.ಶರ್ಮಾ ಅವರ ತವರು ಜಿಲ್ಲೆ ಮೊರೇನಾದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಇದು ಕಳೆದ ಎರಡು ದಶಕದಲ್ಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಅತ್ಯಂತ ಕಳಪೆ ಸಾಧನೆಯಾಗಿದೆ. 1999 ಮತ್ತು 2004ರಲ್ಲಿ ಕಾಂಗ್ರೆಸ್ ಕೇವಲ ಎರಡು ಕಡೆ ಗೆಲುವು ಸಾಧಿಸಿತ್ತು. 2009ರಲ್ಲಿ ಮೂರು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಅಮ್ ಆದ್ಮಿ ಪಕ್ಷ ಸಿಂಗ್ರೌಲಿ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಅಸಾದುದ್ದೀನ್ ಉವೈಸಿಯವರ ಎಐಎಂಐಎಂ ಕೂಡಾ ಗಣನೀಯ ಸಾಧನೆ ಮಾಡಿದೆ. ಬುರ್ಹಾನ್‍ಪುರದಲ್ಲಿ ಎಐಎಂಐಎಂ ಮೇಯರ್ ಅಭ್ಯರ್ಥಿ 10 ಸಾವಿರ ಮತಗಳನ್ನು ಪಡೆದು, ಕಾಂಗ್ರೆಸ್ ಅಭ್ಯರ್ಥಿ ಶಹನಾಝ್ ಇಸ್ಮಾಯಿಲ್, ಬಿಜೆಪಿಯ ಮಾಧುರಿ ಪಟೇಲ್ ವಿರುದ್ಧ ಅಲ್ಪ ಅಂತರದ (388 ಮತ) ಸೋಲು ಅನುಭವಿಸಲು ಕಾರಣರಾದರು.

ಮೊದಲ ಹಂತದಲ್ಲಿ ನಡೆದ 11 ಮೇಯರ್ ಹುದ್ದೆಯ ಚುನಾವಣೆಗಳಲ್ಲಿ ಕಾಂಗ್ರೆಸ್ ಮೂರು ಕಡೆ ಗೆಲುವು ಸಾಧಿಸಿತ್ತು. ಬಿಜೆಪಿ ಏಳರಲ್ಲಿ ಜಯ ಸಾಧಿಸಿತ್ತು. ಎರಡನೇ ಹಂತದಲ್ಲಿ ಕಾಂಗ್ರೆಸ್ ಪಕ್ಷ ಮೊರೇನಾ ಹಾಗೂ ರೇವಾ ಪಾಲಿಕೆಗಳನ್ನು ಬಿಜೆಪಿಯಿಂದ ವಶಪಡಿಸಿಕೊಂಡಿದೆ./////