Belagavi News In Kannada | News Belgaum

ಡಾ.ಮಹಾಂತ ಶಿವಯೋಗಿಗಳ ಜನ್ಮದಿನ; ವ್ಯಸನಮುಕ್ತ ದಿನಾಚರಣೆ

ಬೆಳಗಾವಿ : ಯುವಕರು ಯಾವುದೇ ದುಶ್ಚಟಕ್ಕೆ ದಾಸರಾಗದೇ ಆರೋಗ್ಯ ಕಾಪಾಡಿಕೊಳ್ಳಬೇಕು. ಉತ್ತಮ ಆಹಾರ ಸೇವನೆ, ವ್ಯಾಯಾಮಗಳನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ಆರೋಗ್ಯಯುತ ಹಾಗೂ ಸದೃಢವಾಗಿ ಇತರರಿಗೆ ಮಾದರಿ ವ್ಯಕ್ತಿಗಳಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗಂಟಿ ಅವರು ಕರೆ ನೀಡಿದರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ, ಸಮಾಜ ಕಲ್ಯಾಣ, ಶಿಕ್ಷಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಆಶ್ರಯದಲ್ಲಿ ನಗರದ ಕಟ್ಟಿಮನಿ ಸಭಾಂಗಣದಲ್ಲಿ ಸೋಮವಾರ (ಆ.1) ಏರ್ಪಡಿಸಲಾಗಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ವ್ಯಸನಮುಕ್ತ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವ ಪೀಳಿಗೆಯಿಂದ ಮಾತ್ರ ಸಾಧ್ಯ. ಮಕ್ಕಳು ಭವಿಷ್ಯದಲ್ಲಿ ಯಾವುದೇ ದುಶ್ಚಟಕ್ಕೆ ದಾಸರಾಗದೆ, ಉತ್ತಮ ಜೀವನ ನಡೆಸಬೇಕು. ಯುವ ಪೀಳಿಗೆ ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯಯುತ ಜೀವನಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು
ವಿದ್ಯಾರ್ಥಿ ಸಮುದಾಯ ದುಶ್ಚಟಗಳಿಂದ ದೂರವಿರಬೇಕು. ಮದ್ಯವ್ಯಸನಿಗಳಿಗೆ ಇವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಬೇಕು ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಬದ್ಧರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ವೇಳೆ ಉಪನ್ಯಾಸ ನೀಡಿದ ಆರ್.ಪಿ.ಡಿ. ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಚ್.ಬಿ.ಕೋಲಕಾರ ಅವರು ನಾಡು, ಶ್ರೀ ಮಹಾಂತ ಶಿವಯೋಗಿಗಳು ರಾಜ್ಯದ ಮೂಲೆ ಮೂಲೆಗೆ ಸುತ್ತಾಡಿ, ಲೋಕದ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡು ಮಾನಸಿಕ ನೆಮ್ಮದಿ ನೀಡುವ ಆರೋಗ್ಯಕರ ಚಿಂತನೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಮೂಲಕ ಉತ್ತಮ ಜೀವನ ನಡೆಸಲು ಅನೇಕರಿಗೆ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.
ಬಸವ ತತ್ವಗಳ ಪ್ರತಿಪಾದಕರು:
ಲಿಂಗೈಕ್ಯ ಡಾ. ಮಹಾಂತ ಶಿವಯೋಗಿಗಳು ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಬಹಳ ಸೇವೆ ಸಲ್ಲಿಸಿದ್ದಾರೆ. ಬಸವ ಬೆಳಗು ಪತ್ರಿಕೆ ಆರಂಭದ ಮೂಲಕ ಬಸವ ತತ್ವಗಳ ಪ್ರತಿಪಾದಿಸಿದರು. ಅನೇಕರಿಗೆ ಲಿಂಗದೀಕ್ಷೆ ನೀಡಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿ ಅವರು ಎಂದು ಹೇಳಿದರು.
ಸಮಾಜವನ್ನು ವ್ಯಸನಮುಕ್ತಗೊಳಿಸುವಲ್ಲಿ ತಾಯಂದಿರ ಪಾತ್ರ ಮುಖ್ಯವಾಗಿದ್ದು, ಮಕ್ಕಳು ಭವಿಷ್ಯದಲ್ಲಿ ಉನ್ನತ ವ್ಯಕ್ತಿಗಳಾಗಬೇಕು ಎಂಬ ಕನಸು ಹೊತ್ತ ಪಾಲಕರು ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಡಬೇಕು. ಇಂತಹ ಕಾರ್ಯಕ್ಕೆ ತಾಯಂದಿರು ಮನಸ್ಸು ಮಾಡಿದರೆ ಇಡೀ ಸಮುದಾಯವನ್ನು ವ್ಯಸನಮುಕ್ತ ಮಾಡುವ ಮೂಲಕ ಮಹಾಂತ ಶಿವಯೋಗಿಗಳ ಜೋಳಿಗೆಗೆ ಬಲ ತುಂಬಿದಂತಾಗುತ್ತದೆ ಎಂದು ಕೋಲಕಾರ ಅವರು ಉಪನ್ಯಾಸದಲ್ಲಿ ತಿಳಿಸಿದರು.

ದುಶ್ಚಟಗಳಿಂದ ದೂರವಿರಲು ಸಲಹೆ:
ಯುವಕರು ದುಶ್ಚಟಗಳಿಗೆ ದಾಸರಾಗಿ ಮಾರಕ ಕಾಯಿಲೆಗಳಿಗೆ ತುತ್ತಾಗಿ ಸಂಕಟ ಅನುಭವಿಸುವ ಬದಲು ಅವುಗಳಿಂದ ಕಡ್ಡಾಯವಾಗಿ ದೂರವಿದ್ದು, ಇತರರಿಗೆ ಮಾದರಿಯಾಗಬೇಕು. ಮದ್ಯಪಾನಗಳಿಂದ ದೇಶದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಇದನ್ನು ತಪ್ಪಿಸಲು ಸರ್ಕಾರ ಇಂತಹ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೆuಟಿಜeಜಿiಟಿeಜಳ್ಳುತ್ತಿದೆ. ಎಲ್ಲರೂ ಮುನ್ನೆಚ್ಚರಿಕೆ ವಹಿಸಿ ಆರೋಗ್ಯವಂತರಾಗಿ ಬದುಕಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಕೋಣಿ ಅವರು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಅವರು, ಯುವ ಪೀಳಿಗೆಯ ದುಶ್ಚಟಗಳನ್ನು ಬಿಡಿಸಿ ಸದೃಢ ಹಾಗೂ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶ್ರೀ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ನಿಮಿತ್ಯ ಆಗಸ್ಟ್ 1 ರಂದು ರಾಜ್ಯಾದ್ಯಂತ ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.
ಶ್ರೀ ಡಾ. ಮಹಾಂತ ಶಿವಯೋಗಿಗಳು ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವುದರ ಜೊತೆಗೆ ಜನ ಸಾಮಾನ್ಯರ ದುಶ್ಚಟಗಳನ್ನು ದೂರವಾಗಿಸಲು ಮಹಾಂತ ಜೋಳಿಗೆ ಎಂಬ ಚಿಂತನೆ ಜಾರಿಯಿಂದ ಅನೇಕರು ತಮ್ಮ ದುಶ್ಚಟಗಳನ್ನು ಬಿಟ್ಟು ಉತ್ತಮ ಬದುಕನ್ನು ನಡೆಸುತ್ತಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಸರ್ಕಾರ ನಾಡಿನಾದ್ಯಂತ ವ್ಯಸನಮುಕ್ತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿಜ್ಞಾವಿಧಿ ಸ್ವೀಕಾರ:
ಮದ್ಯಪಾನ, ಮಾದಕ ದ್ರವ್ಯ, ತಂಬಾಕು ಸೇವನೆ ಹಾಗೂ ಇತರೆ ದುಶ್ಚಟಗಳಿಂದ ದೂರ ಇರುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಬಿ.ಎನ್ ತುಕ್ಕಾರ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ಮಿಲ್ಲಾನಟ್ಟಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಚಾಂದನಿ ದೇವಡಿ ಹಾಗೂ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕುಮಾರ ಪ್ರತಾಪ ನಿರೂಪಿಸಿದರು, ಅನಂತ ಪಪ್ಪು ವಂದಿಸಿದರು.
ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ:
ಇದಕ್ಕೂ ಮುಂಚೆ ಮದ್ಯಪಾನ, ಮಾದಕ ದ್ರವ್ಯ ಹಾಗೂ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕುರಿತು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವರಾಜ ಕಟ್ಟಿಮನಿ ಸಭಾ ಭವನದವರಗೆ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಜಾಥಾಗೆ ಹಸಿರುನಿಶಾನೆ ತೋರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ, ಬೆಳಗಾವಿ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಬಿ.ಎನ್ ತುಕ್ಕಾರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಚಾಂದನಿ ದೇವಡಿ ಮತ್ತಿತರರು ಉಪಸ್ಥಿತರಿದ್ದರು.
ಸರದಾರ ಪ್ರೌಢಶಾಲೆಯ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಸಂಬಂಧಿಸಿದ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.//////