Belagavi News In Kannada | News Belgaum

“ಜಗತ್ತಿಗೆ ಕೌಶಲ್ಯ ಸಂಪನ್ಮೂಲ ಕೊಡುವ ಶಕ್ತಿ ಭಾರತಕ್ಕಿದೆ” ಪ್ರೊ. ಡಿ. ಟಿ. ಶಿರ್ಕೆ

ಬೆಳಗಾವಿ : ಹೊಸ ಶಿಕ್ಷಣ ನೀತಿಯ ಮೂಲಕ ಉದ್ಯೋಗಮುಖಿ ಕೌಶಲ್ಯಗಳ ನಿರ್ಮಾಣವಾಗಬೇಕಾಗಿದೆ. ಇದಕ್ಕೆ ಪೂರಕವಾಗಿ ಪಠ್ಯಕ್ರಮ, ಬೋಧನೆ, ತಂತ್ರಜ್ಞಾನ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಥಿತಿಗಳು ಬದಲಾಗಬೇಕಾಗಿವೆ. ನಮ್ಮೊಳಗೆ ಶಕ್ತಿಯಿದೆ. ಇಡೀ ಜಗತ್ತಿಗೆ ಕೌಶಲ್ಯ, ಸಂಪನ್ಮೂಲ ಕೊಡುವ ಶಕ್ತಿ ಭಾರತಕ್ಕಿದೆ. ಇದನ್ನು ಈಡೇರಿಸಿಕೊಳ್ಳಲು ನಾವು ಜಾಗೃತರಾಗಬೇಕಿದೆ ಎಂದು ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಡಿ. ಟಿ. ಶಿರ್ಕೆ ಅವರು ನುಡಿದರು.
ಇಂದು ದಿನಾಂಕ 6 ಅಗಸ್ಟ, 2022 ರಂದು ಜರುಗಿದ ಬೆಳಗಾವಿಯ ಪ್ರತಿಷ್ಠಿತ ಸೌಥ್ ಕೊಂಕಣ ಶಿಕ್ಷಣ ಸಂಸ್ಥೆಯ ಸಂಸ್ಥಾಪÀನಾ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಮುಂದುವರೆದು ಅವರು – ಇಂದು ಬೋಧನಾ ಅಪೇಕ್ಷೆ, ಸಂಶೋಧನಾ ಅಪೇಕ್ಷೆ ಮತ್ತು ಬರೀ ಪದವಿ ನೀಡುವ ಅಪೇಕ್ಷೆ ಇಟ್ಟುಕೊಂಡ ವಿಶ್ವವಿದ್ಯಲಯಗಳು ನಮ್ಮೊಳಗೆ ಇವೆ. ಇವುಗಳು ಕೌಶಲ್ಯಾಭಿವೃದ್ಧಿಯ ಕಡೆಗೆ ಹೆಚ್ಚು ಒತ್ತು ಕೊಟ್ಟು ಉದ್ಯೋಗಮುಖಿ ವಿದ್ಯಾರ್ಥಿ ಸಂಪನ್ಮೂಲಗಳನ್ನು ಹುಟ್ಟುಹಾಕಬೇಕಾಗಿದೆ. ಅದಕ್ಕಾಗಿ ಬಹುಮುಖೀ ಕೌಶಲ್ಯಾಧಾರಿತ ಪಠ್ಯಕ್ರಮ ರೂಪಿಸಿಕೊಂಡು ಮತ್ತು ಬೇಕಾದ ಸಂಸ್ಥೆಗಳೊಂದಿಗೆ ಸಹಯೋಗ ಹೊಂದಿ ಕಾರ್ಯ ಸಾಧಿಸಬೇಕಾಗಿದೆ ಎಂದು ಕರೆ ನೀಡಿದರು. ಗಡಿ ಭಾಗದ ಕರ್ನಾಟಕ, ಮಹಾರಾಷ್ಟ್ರಗಳ ಶೈಕ್ಷಣಿಕ ಸಾಧನೆ ಅಪಾರವಾಗಿದೆ ಎಂದು ಅಣ್ಣಾ ಸಾಹೇಬ ಲಠ್ಠೆ, ಅಪ್ಪಾ ಸಾಹೇಬ ಪವಾರ ಮೊದಲಾದ ಶೈಕ್ಷಣಿಕ ದೃಷ್ಠಾರರ ಜೀವನ ಸಾಧನೆಯನ್ನು ಸ್ಮರಿಸುತ್ತಾ ಎಪ್ಪತ್ತೈದು ಸಂವತ್ಸರಗಳ ಎಸ್. ಕೆ . ಇ ಸಂಸ್ಥೆಯ ಶೈಕ್ಷಣಿಕ ಸಾಧನೆಯನ್ನು ಕೊಂಡಾಡಿದರು.
ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾವಂತವಾಡಿಯ ರಾಜಮಾತಾ ರಾಣಿ ಪಾರ್ವತಿದೇವಿ ಅವರ ಮೊಮ್ಮಗ ಶ್ರೀಮಂತ ಖೇಮರಾಜ ಸಾವಂತ ಭೋಸ್ಲೆ ಅವರು ಜಮಖಂಡಿ, ಸಾಂಗ್ಲಿ, ಕುರಂದವಾಡದ ಸಂಸ್ಥಾನಿಕ ರಾಜರು ಶಿಕ್ಷಣ ಸೇವೆಗೆ ಈ ಬೃಹತ್ತಾದ ಸ್ಥಳವನ್ನು ದಾನ ನೀಡಿದ್ದಾರೆ. ಅವರ ಉಪಕಾರ ದೊಡ್ಡದು. ಅವರ ಆಸೆಯಂತೆ ಈ ಸಂಸ್ಥೆಯು ಕರ್ನಾಟಕ-ಮಹಾರಾಷ್ಟ್ರ ಗಡಿಯ ವಿದ್ಯಾರ್ಥಿಗಳಿಗೆ ನಿರಂತರ ಜ್ಞಾನ ದಾನದ ಕಾರ್ಯ ಮಾಡುತ್ತಿರುವುದು ಹೆಮ್ಮಯ ಸಂಗತಿ ಎಂದರು.
ಸಮಾರಂಭದ ಅಧಕ್ಷತೆ ವಹಿಸಿದ್ದ ಸನ್ಮಾನ್ಯ ಶ್ರೀ. ಕಿರಣ ಠಾಕೂರ ಅವರು – ಇಂದಿನ ವಿದ್ಯಾರ್ಥಿಗಳಿಗೆ ಉದ್ಯೋಗ ಮೂಲ ಶಿಕ್ಷಣ ದೊರಕುತ್ತ ದೇಶದ ನಿರುದ್ಯೋಗ ನಿವಾರಣೆಯಾಗಬೇಕಾಗಿದೆ. ಭಾರತೀಯ ವಿದ್ಯಾರ್ಥಿಗಳು ತಮ್ಮ ಕೌಶಲ ಮತ್ತು ಪ್ರತಿಭಾಶಕ್ತಿಯಿಂದ ಜಗತ್ತಿನ ತುಂಬ ತುಂಬಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಇಂದು ಶಿಕ್ಷಣ ರೂವಾರಿಗಳು, ತಜ್ಞ ನಾಯಕರು ಹುಟ್ಟಬೇಕಾಗಿದೆ ಎಂದು ನುಡಿದರು.
ಆರ್. ಪಿ. ಡಿ ಮಹಾವಿದ್ಯಾಲಯ ಆಯೋಜಿಸಿದ ಈ ಸಮಾರಂಭದಲ್ಲಿ ಕುಮಾರಿ ನೂಪುರ ತಂಡ ಪ್ರಾರ್ಥನೆ ಸಲ್ಲಿಸಿತು. ಪ್ರಾಚಾರ್ಯರಾದ ಡಾ. ಅನುಜಾ ನಾಯಕ ಅವರು ಸ್ವಾಗತಿಸಿದರು. ಶ್ರೀಮತಿ ಲತಾ ಕಿತ್ತೂರ ಅವರು ಸಂಸ್ಥೆಯ ಸಾಧನೆಯನ್ನು ವಿವರಿಸಿದರು. ಪ್ರೊ. ಎಸ್. ಎಸ್. ಶಿಂಧೆ ಅವರು ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಪೂಜಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪ್ರೊ. ಪಿ. ಬಿ. ಜೋಶಿ ವಂದಿಸಿದರು. ಸಮಾರಂಭದಲ್ಲಿ ಪ್ರೊ. ಎಸ್. ವಾಯ್. ಪ್ರಭು, ಎಸ್. ವಿ. ಶಾನಭಾಗ , ಶ್ರೀ. ಸಾವಂತ ಅವರು ಗೌರವ ಅತಿಥಿಗಳಾಗಿ ಹಾಗೂ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಎಸ್. ಕೆ. ಇ ಸಂಸ್ಥೆಯ ಎಲ್ಲ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು//////