Belagavi News In Kannada | News Belgaum

ದೇಶಾಭಿವೃದ್ಧಿಯಲ್ಲಿ “ಜನಸಂಖ್ಯಾ ನಿಯಂತ್ರಣ ನೀತಿ” ಪಾತ್ರ! ಒಂದು ದೇಶದಲ್ಲಿ ವಾಸಿಸುವ ಜನರ ಒಟ್ಟು ಮೊತ್ತವೆ ಆ ದೇಶದ ಜನಸಂಖ್ಯೆ.

ದೇಶಾಭಿವೃದ್ಧಿಯಲ್ಲಿ “ಜನಸಂಖ್ಯಾ ನಿಯಂತ್ರಣ ನೀತಿ” ಪಾತ್ರ!
ಒಂದು ದೇಶದಲ್ಲಿ ವಾಸಿಸುವ ಜನರ ಒಟ್ಟು ಮೊತ್ತವೆ ಆ ದೇಶದ ಜನಸಂಖ್ಯೆ. ಅದುವೆ ಆ ದೇಶದ ಸಂಪತ್ತು. ಅದು ಇತಿಮಿತಿಯಲ್ಲಿದ್ದರೆ ವರದಾನ. ಮಿತಿಮೀರಿದರೆ ಶಾಪವಾಗಿ ಪರಿಣಮಿಸುತ್ತದೆ. ಆದ್ದರಿಂದ ಜನಸಂಖ್ಯೆ ದೇಶದ ನೈಸರ್ಗಿಕ ಸಂಪನ್ಮೂಲಗಳಿಗೆ ಅನುಗುಣವಾಗಿರಬೇಕು. ವಿಶ್ವ ಸಂಸ್ಥೆಯ ಸಮಿಕ್ಷೆಯನ್ವಯ ವಿಶ್ವದ ಜನ ಸಂಖ್ಯೆಯಲ್ಲಿ ಶೇ.17.74 ಭಾಗವನ್ನು ಹೊಂದಿರುವ ಭಾರತವು ಜಗತ್ತಿನ 2ನೇ ಅತೀ ಹೆಚ್ಚು ಜನಸಂಖ್ಯೆ ಇರುವ ದೇಶವಾಗಿದೆ. ಭೌಗೋಳಿಕ ವಿಸ್ತಾರದಲ್ಲಿ ಭಾರತಕ್ಕೆ 7ನೇ ಸ್ಥಾನವಿದೆ. ಆದರೆ ಜನಸಂಖ್ಯೆಯ ಅಭಿವೃದ್ಧಿಯಲ್ಲಿ ಮೊದಲನೆ ಸ್ಥಾನದಲ್ಲಿದೆ. ಭಾರತ ಜನಸಂಖ್ಯೆ ಏರುತ್ತಲೇ ಹೋಗುತ್ತಿದೆ ಎನ್ನುವದಕ್ಕಿಂತ ಸ್ಪೋಟಗೊಳ್ಳುತ್ತಿದೆ ಎಂದರೆ ಸಮರ್ಪಕವಾಗುತ್ತದೆ.
ಜನಸಂಖ್ಯಾ ಸ್ಪೋಟ ದೇಶದ ಹಲವಾರು ಸಮಸ್ಯಗಳಿಗೆ ಕಾರಣವಾಗಿದ್ದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ದೇಶವು ಎದುರಿಸುತ್ತಿರುವ ಹಲವಾರು ಸಮಸ್ಯಗಳಿಗೆ ಜನಸಂಖ್ಯೆಯೇ ಮೂಲಭೂತ ಕಾರಣವಾಗಿದೆ ಎನ್ನಬಹುದು. ಜನಸಂಖ್ಯೆಯನ್ನು ನಿಯಂತ್ರಿಸುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಕ್ಕಳನ್ನು ಹೊಂದುವದು ಹಾಗೂ ಕುಟುಂಬ ನಿರ್ವಹಿಸುವದು ಕೇವಲ ಭಾವನಾತ್ಮಕ ವಿಷಯವಷ್ಟೇ ಅಲ್ಲ. ದೇಶದ ಆರ್ಥಿಕತೆಯ ವಿಷಯವೂ ಹೌದು.


ಭಾರತದಲ್ಲಿ ಜನಸಂಖ್ಯೆ ಪ್ರತಿ ವರ್ಷ ಹೆಚ್ಚಳವಾಗುತ್ತಿದ್ದಲ್ಲಿ ದೇಶದ ಉತ್ಪನ್ನಕ್ಕಿಂತ ಜನಸಂಖ್ಯೆ ಮಿತಿ ಮೀರಿದರೆ ಉತ್ತಮ ಆಹಾರ, ಬಟ್ಟೆ, ಶಿಕ್ಷಣ, ಆರೋಗ್ಯ ನಿಭಾಯಿಸುವದು ಸವಾಲಿನ ಮಾತಾಗಿದೆ. ಮೂಲಸೌಕರ್ಯಗಳನ್ನು ಕಲ್ಪಿಸುವದು ಅಸಾಧ್ಯ. ಹಳ್ಳಿಗಳಲ್ಲಿ ಸಂಪಾದನೆ ಇಲ್ಲದೆ ಜನ ನಗರಗಳಿಗೆ ಉದ್ಯೋಗಕ್ಕಾಗಿ ಬಂದಿಳಿದಾಗ ನಗರದ ಜನಸಂಖ್ಯೆ ಮಿತಿ ಮೀರಿ ಕೊಳಚೆ ಪ್ರದೇಶಗಳು ಹುಟ್ಟುತ್ತವೆ. ಜನಸಂಖ್ಯೆ ಹೆಚ್ಚಳ ಎಂದರೆ ವಾಸಿಸಲು ಹೆಚ್ಚಿನ ಸ್ಥಳಾವಕಾಶದ ಅವಶ್ಯಕತೆ ಇದರ ಪರಿಣಾಮವಾಗಿ ಅರಣ್ಯ ನಾಶವಾಗುತ್ತದೆ. ನಗರಗಳು ಅನೇಕ ಹಸಿರು ವಲಯವನ್ನು ಕಳೆದುಕೊಳ್ಳುತ್ತಿವೆ. ಅರಣ್ಯನಾಶವು ಸಂಪನ್ಮೂಲಗಳ ಅಳಿವಿಗೆ ಕಾರಣವಾಗುತ್ತದೆ. ಜನರು ತಮ್ಮ ಅನುಕೂಲಕ್ಕಾಗಿ ವಾಹನಗಳನ್ನು ಖರೀದಿಸುತ್ತಿದ್ದಾರೆ. ಇದರಿಂದಾಗಿ ಮಾಲಿನ್ಯ ಉಂಟಾಗುತ್ತಿದೆ. ಜನಸಂಖ್ಯಾ ಹೆಚ್ಚಳವು ಕೈಗಾರೀಕರಣಕ್ಕೆ ಕಾರಣವಾಗುತ್ತದೆ. ರಸ್ತೆಗಳಲ್ಲಿ ದಟ್ಟಣೆ ಇದು ಎಲ್ಲಾ ಪ್ರದೇಶಗಳಲ್ಲಿ ಮಾಲಿನ್ಯವನ್ನು ಅಹ್ವಾನಿಸುತ್ತದೆ. ಭಾರತದಂತಹ ದೇಶವು ಈಗ ಮಾಲಿನ್ಯ ಮತ್ತು ಜಾಗತಿಕ ತಾಪಮಾನದ ಬೃಹತ್ ಸಮಸ್ಯೆಗೆ ಸಾಕ್ಷಿಯಾಗಿದೆ. ಭಾರತದಲ್ಲಿ ನಿಜವಾಗಿ ಬೆಳವಣಿಗೆ ಹೊಂದುತ್ತಿರುವದು ಎಂದರೆ ಜನಸಂಖ್ಯೆ ಒಂದೆ ಎಂದರೆ ತಪ್ಪಾಗಲಾರದು.


2024ರ ವೇಳೆಗೆ ಭಾರತವು ಜಗತ್ತಿನ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಜನರು ಮಕ್ಕಳನ್ನು ದೇವರ ಕೊಡುಗೆ ಎಂದು ನಂಬುತ್ತಾರೆ. ಜನನ ನಿಯಂತ್ರಣ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸದೇ ಹೋದರೆ ವಿವಿಧ ರೀತಿಯ ಸಮಸ್ಯಗಳು ಉದ್ಭವವಾಗುವ ಸಂಭವವೆ ಹೆಚ್ಚು. ಇವತ್ತಿಗೂ ನಮ್ಮಲ್ಲಿ ದುಡಿಯುವವರ ಮತ್ತು ತಿನ್ನುವವರ ಅನುಪಾತ ತಾಳೆಯಾಗುತ್ತಿಲ್ಲ. ಗ್ರಾಮೀಣ ಪ್ರದೇಶದ ಹಲವು ಕುಟುಂಬಗಳಿಗೆ ತಿನ್ನಲು ಸರಿಯಾದ ಆಹಾರ ಸಿಗುತ್ತಿಲ್ಲ. ಅನೇಕ ಬಡ ಮಕ್ಕಳು ಆಹಾರ ಸೇವಿಸದೆ ಮಲಗುತ್ತಾರೆ.
ಭಾರತದ ಜನಸಂಖ್ಯೆ ಏರಿಕೆಗೆ ಮುಖ್ಯ ಕಾರಣಗಳನ್ನು ಹುಡುಕುತ್ತಾ ಹೋದಂತೆ ನಾಲ್ಕು ಪ್ರಮುಖ ಅಂಶಗಳನ್ನಗಿ ವಿಂಗಡಿಸಬಹುದಾಗಿದ್ದು, (1) ಮರಣ ಪ್ರಮಾಣದಲ್ಲಿ ಇಳಿಕೆ (2) ಜನನ ಪ್ರಮಾಣದಲ್ಲಿ ಏರಿಕೆ, (3) ಭೌಗೋಳಿಕ ಅಂಶಗಳು (4) ರಾಜಕೀಯ ಅಂಶಗಳು ಸೇರಿವೆ.
ಇಲ್ಲಿಯ ಉಷ್ಣ ಹವಾಮಾನ ಸಂತಾನೋತ್ಪತ್ತಿಗೆ ದೀರ್ಘಕಾಲ ಲಭ್ಯವಾಗಿದ್ದು ಜನರಲ್ಲಿ ಲೈಂಗಿಕ ಶಿಕ್ಷಣದ ಕೊರತೆ ಇದೆ. ಧಾರ್ಮಿಕ ನಂಬಿಕೆ ಮತ್ತು ಮೌಢ್ಯತೆ, ಅನಕ್ಷರತೆ, ಬಡತನ, ಸಾಂಕ್ರಾಮಿಕ ರೋಗಗಳ ಹತೋಟಿ, ಭೀಕರ ಬರಗಾಲ ನಿಯಂತ್ರಣ, ನಿರ್ಮಲೀಕರಣ ಮತ್ತು ಸಾರ್ವಜನಿಕ ಆರೋಗ್ಯ ಸುಧಾರಣೆಯಿಂದ ಕಡಿಮೆಯಾದ ಶಿಶು ಮರಣ ಪ್ರಮಾಣ, ಜೀವಿತಾವಧಿಯ ಹೆಚ್ಚಳ ಈ ಎಲ್ಲ ಕಾರಣಗಳು ಜನಸಂಖ್ಯೆ ಏರಿಕೆಯಲ್ಲಿ ಅಡಕವಾಗಿವೆ ಎನ್ನವಬಹುದಾಗಿದೆ.

ಈ ಹಿನ್ನೆಲೆಯಲ್ಲಿ ಜನಸಂಖ್ಯೆ ನಿಯಂತ್ರಣದ ಕುರಿತು ಸಮಗ್ರ ಹಾಗೂ ಸಮರ್ಪಕ ಚರ್ಚೆಗಳು ನಡೆಯಬೇಕು. ಸುಮ್ಮನೆ ಆಗಾಗ ಜನಸಂಖ್ಯಾ ಸ್ಪೋಟದಿಂದ ದೇಶದ ಪ್ರಗತಿಯಲ್ಲಿ ತೊಂದರೆಯಾಗುತ್ತಿದೆ ಎಂದರೆ ಆಗದು. ಬಲಿಷ್ಠ ಭಾರತಕ್ಕಾಗಿ ಕುಟುಂಬಗಳ ಸ್ವರೂಪ ಯಾವ ರೀತಿ ಇರಬೇಕು ಎಂಬ ಬಗ್ಗೆ ರಚನಾತ್ಮಕ ಚರ್ಚೆಗಳ ಗಂಭೀರ ಅಗತ್ಯವಿದೆ.
ಏಕೆಂದರೆ ಜನಸಂಖ್ಯೆ ನಿಯಂತ್ರಣ ಮಾಡಿದ ದೇಶಗಳ ಪರಿಸ್ಥಿತಿ ಅದೋಗತಿಗೆ ಬಂದು ತಲುಪಿತ್ತಿರುವದನ್ನ ಕಾಣುತ್ತಿದ್ದೇವೆ. ಉದಾಹರಣೆಗೆ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ ಜಾರಿಗೆ ತಂದಿತು. ಇದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಬಂದಿತಾದರೂ ಯುವ ಪೀಳಿಗೆಯ ಸಂಖ್ಯೆ ಕಡಿಮೆಯಾಯಿತು. ಇದರಿಂದಾಗಿ ಚೀನಾ ವಯಸ್ಸಾದವರೇ ಹೆಚ್ಚಾಗಿರುವ ದೇಶವಾಗಿ ಹೊರಹೊಮ್ಮಿದೆ.
ಜಪಾನ್ ಮುಂತಾದ ದೇಶಗಳಲ್ಲಿ ಜನಸಂಖ್ಯೆ ಸ್ಥಗಿತಗೊಂಡು ದೇಶದ ಬೆಳವಣಿಗೆ ಮುಗ್ಗರಿಸಿದೆ. ಜರ್ಮನಿ, ಜಪಾನ ದೇಶಗಳು ಕಡಿಮೆ ಮಕ್ಕಳನ್ನು ಹೊಂದುವ ನೀತಿಗೆ ಹೊಂದಿಕೊಂಡಿವೆ. ಜಪಾನ್ ದೇಶದಲ್ಲಿ ಜನಸಂಖ್ಯಾ ಬೆಳವಣಿಗೆ ನಿಂತ ನಂತರ ಅಲ್ಲಿ ಯುವ ಪೀಳಿಗೆ ಕಡಿಮೆಯಾಗಿದೆ. ಇದು ಆರ್ಥಿಕ ಬೆಳವಣಿಗೆಯ ಮೇಲೆ ಕರಾಳ ಪರಿಣಾಮ ಬೀರುವಲ್ಲಿ ಸಂದೇಹವಿಲ್ಲ. ಇದೇ ಪರಿಣಾಮ ಮುಂಬರುವ ದಿನಗಳಲ್ಲಿ ಚೀನಾ ಮೇಲೆ ಆಗುವದನ್ನ ಅಲ್ಲಗಳೆಯಲಾಗದು.
ಜನಸಂಖ್ಯೆ ನಿಯಂತ್ರಿಸುವದು ಹೇಗೆ ? ಪ್ರಶ್ನೆಗೆ ಸುಲಭದ ಉತ್ತರವಿಲ್ಲವಾದರೂ ಜಪಾನ್ ಜರ್ಮನಿ ಮುಂತಾದ ದೇಶಗಳಲ್ಲಿ ಅಲ್ಲಿನ ಮಹಿಳೆಯರು ವಿಧ್ಯಾವಂತರಾಗಿದ್ದು ಉದ್ಯೋಗಸ್ಥೆಯರಾಗಿದ್ದು ಮಕ್ಕಳನ್ನು ಹೊಂದುವ ಜೀವನ ಪದ್ಧತಿಯನ್ನು ಬದಲಿಸಿತೆನ್ನಬಹುದು.
ಮಹಿಳೆ ಹೆಚ್ಚು ಶಿಕ್ಷಣ ಪಡೆದಷ್ಟು ಹೊಂದುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಎಂಬುದು ಅಧ್ಯಯನಗಳು ತಿಳಿಸುತ್ತವೆ. ಭಾರತ ತರುಣರ ದೇಶ ಹೇರಳ ಮಾನವ ಸಂಪನ್ಮೂಲವಿದ್ದರೂ ಇಚ್ಛಾ ಶಕ್ತಿ, ದುಡಿಯುವ ಮನಸ್ಸು,, ಶಿಸ್ತು, ದುಡಿಯುವ ಗೌರವ ಮತ್ತು ಪ್ರಾಮಾಣಿಕಕತೆಯ ಕೊರತೆ ನಮ್ಮನ್ನು ಕಾಡುವ ಸಮಸ್ಯೆ. ಬಡತನ. ಅನಕ್ಷರತೆ ಮತ್ತು ಮೂಢನಂಬಿಕೆಗಳು ಕಾರಣ ಅತೀ ಸಂತಾನಕ್ಕೆ ಕಾರಣವಾಗುತ್ತಿವೆ. ಈ ನಿಟ್ಟಿನಲ್ಲಿ ಬಡವರಲ್ಲಿ ದುಡಿಯುವ ಛಲ, ಜೀವನದಲ್ಲಿ ಮೆಲೇರುವ ಆಕಾಂಕ್ಷೆ ಪ್ರಬಲವಾವಾಗಿ ಬೇರೂರುವಂತೆ ಮಾಡಬೇಕಾಗಿದೆ.
ಭಾರತ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತಕ್ಕೆ ಭವಿಷ್ಯವಿದೆ ಎಂಬುದನ್ನು ರುಜುವಾತುಪಡಿಸಬೇಕಾದ ಹಲವಾರು ವಾಸ್ತವಾಂಶಗಳಲ್ಲಿ ಜನಸಂಖ್ಯೆಯ ಸ್ಪೋಟಕ್ಕೆ ಕಡಿವಾಣ ಹಾಕುವದು ಮಹತ್ತರ ವಿಚಾರ, ಮಾನವ ಸಂಪನ್ಮೂಲ ಸದ್ಭಳಕೆ, ಉತ್ಪಾದನಾ ಸಾಮಥ್ರ್ಯವನ್ನು ವೃದ್ಧೀಗೊಳಿಸಿ, ಪೃಕೃತಿ ಪೋಷಣೆ, ರಕ್ಷಣೆ ಮತ್ತು ಕಾಳಜಿಯಿಂದ ಜನಸಂಖ್ಯೆ ಏರಿಕೆ ಸಮಸ್ಯಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಸೂಕ್ಷ್ಮವಾಗಿ ಗಮನಿಸಲಾಗಿ ಇತ್ತೀಚೆಗೆ ಭಾರತದಲ್ಲಿಯೂ ಬದಲಾವಣೆಯ ಗಾಳಿ ಬೀಸಿದ್ದು, ಕೆಲ ರಾಜ್ಯಗಳು ಜನಸಂಖ್ಯೆಯ ಸ್ಥಿರತೆಯನ್ನು ಕಾಪಾಡಿಕೊಂಡಿವೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಸೂಚಿಸುತ್ತದೆ. ಜನರಲ್ಲಿ ತಿಳುವಳಿಕೆ ಮುಖ್ಯ, ಕುಟುಂಬ ನಿರ್ವಹಣೆ ಕುರಿತು ಜಾಗೃತರಾಗುತ್ತಿದ್ದು, ಹೀಗೆ ಹಲವಾರು ಕಾರಣಗಳಿಂದ ಜನರು ಹೆಚ್ಚು ಮಕ್ಕಳನ್ನು ಹೊಂದಲು ಬಯಸುತ್ತಿಲ್ಲ. ಇದು ಆರೋಗ್ಯಕರ ಬೆಳವಣಿಗೆಯಾಗಿದೆ.

ಅನಂತ ಪಪ್ಪು