Belagavi News In Kannada | News Belgaum

ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸಿದ ಸಚಿವ ಕಾರಜೋಳ

 

ಬೆಳಗಾವಿ, ಆ.10: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸುವುದು ನಮ್ಮ ಪುಣ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.
ಭಾರತ ಬಿಟ್ಟು ತೊಲಗಿ(ಕ್ವಿಟ್ ಇಂಡಿಯಾ) ಚಳವಳಿಗೆ 80 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸ್ವಾತಂತ್ರ್ಯ ಯೋಧರ ಮನೆಗಳಿಗೆ ಬುಧವಾರ(ಆ.10) ತೆರಳಿ ಅವರನ್ನು ಸರಕಾರದ ವತಿಯಿಂದ ಸನ್ಮಾನಿಸಿದ ನಂತರ ಅವರು ಮಾತನಾಡಿದರು.
ಮೊದಲಿಗೆ ಇಲ್ಲಿನ ಕುವೆಂಪು ನಗರದಲ್ಲಿರುವ ವಿಠ್ಠಲ ಯಾಳಗಿ(96) ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಿದರು.
ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯ ಯೋಧರನ್ನು ಅವರ ಮನೆಗಳಲ್ಲಿಯೇ ಸನ್ಮಾನಿಸುವ ಮೂಲಕ ಅವರನ್ನು ಗೌರವಿಸಬೇಕು ಎಂಬುದು ಪ್ರಧಾನಮಂತ್ರಿಗಳ ಆಶಯವಾಗಿದೆ. ಅದರಂತೆ ದೇಶಾದ್ಯಂತ ಸ್ವಾತಂತ್ರ್ಯ ಯೋಧರನ್ನು ಗೌರವಿಸಲಾಗುತ್ತಿದೆ. ಇದೊಂದು ಅಪರೂಪದ ಅವಕಾಶ ಎಂದರು.
ಹರಿಜನರಿಗೆ ಶಿಕ್ಷಣ, ವಸತಿನಿಲಯ ಗಾಂಧೀಜಿ ಷರತ್ತು:
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಯೋಧರಾದ ವಿಠ್ಠಲ ಯಾಳಗಿ ಅವರೊಂದಿಗೆ ಸ್ವಾತಂತ್ರ್ಯ ಸಂಗ್ರಾಮದ ದಿನಗಳ ಕುರಿತು ಚರ್ಚಿಸಿದ ಸಚಿವ ಗೋವಿಂದ ಕಾರಜೋಳ ಅವರು, ಹರಿಜನ ಮಕ್ಕಳಿಗೆ ವಸತಿನಿಲಯ, ಹೆಣ್ಣುಮಕ್ಕಳಿಗೆ ವಸತಿನಿಲಯ, ಶಿಕ್ಷಣ ಒದಗಿಸುವ ಷರತ್ತು ವಿಧಿಸಿಯೇ ಮಹಾತ್ಮಾ ಗಾಂಧೀಜಿ ಗ್ರಾಮಗಳಿಗೆ ಬರುತ್ತಿದ್ದರು. ಆದ್ದರಿಂದ ಬಹುತೇಕ ಕಡೆಗಳಲ್ಲಿ ಹರಿಜನರಿಗೆ ಶಿಕ್ಷಣ ಲಭಿಸುವಂತಾಗಿದೆ” ಎಂದು ಹೇಳಿದರು.
ನಗರದ ಸಾರ್ವಜನಿಕ ವೃತ್ತಗಳಿಗೆ ಸ್ವಾತಂತ್ರ್ಯ ಯೋಧರ ಹೆಸರು- ಸಚಿವರ ಭರವಸೆ:
ಬೆಳಗಾವಿ ನಗರದ ಸಾರ್ವಜನಿಕ ವೃತ್ತಕ್ಕೆ ಸ್ವಾತಂತ್ರ್ಯ ಯೋಧರ ಹೆಸರು ಇಡಲು ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಅವರು ಭರವಸೆಯನ್ನು ನೀಡಿದರು.
ಅನೇಕ ಸ್ವಾತಂತ್ರ್ಯ ಯೋಧರು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಕೂಡ ಭಾಗವಹಿಸಿದ್ದಾರೆ. ಅದು ನಮ್ಮೆಲ್ಲರಿಗೂ ಹೆಮ್ನೆಯ ವಿಷಯವಾಗಿದೆ ಎಂದು ಹೇಳಿದರು.
ಇದೇ ವೇಳೆ ಹೋರಾಟದ ದಿನಗಳನ್ನು ಮೆಲುಕುಹಾಕಿದ ವಿಠ್ಠಲ ಯಾಳಗಿ ಅವರು, ತಮ್ಮ ಮನೆಯಲ್ಲಿ 16 ಸದಸ್ಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು.
ಗಂಗಾಧರ ರಾವ್ ದೇಶಪಾಂಡೆ ಹಾಗೂ ಬಾಲಗಂಗಾಧರ್ ಟಿಳಕ ಮತ್ತಿತರ ಅನುಯಾಯಿಗಳು ನಾವು ಎಂದು ಹೋರಾಟದ ವಿವಿಧ ಮಜಲುಗಳನ್ನು ಮೆಲಕುಹಾಕಿದರು.
ಬಾಲಗಂಗಾಧರ್ ಟಿಳಕ ಅವರೊಂದಿಗೆ ತಮ್ಮ ಚಿಕ್ಕಪ್ಪ ಮತ್ತಿತರರು ಇರುವ ಭಾವಚಿತ್ರಗಳನ್ನು ಸಚಿವರಿಗೆ ತೋರಿಸಿದರು.
ಗೋವಾ ಸತ್ಯಾಗ್ರಹ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಯಾಳಗಿ ಕುಟುಂಬದ 16 ಸದಸ್ಯರು ಸಕ್ರೀಯವಾಗಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಇದಾದ ಬಳಿಕ ರಾಣಿ ಚೆನ್ನಮ್ಮ ನಗರದಲ್ಲಿ ಇರುವ ಇನ್ನೋರ್ವ ಸ್ವಾತಂತ್ರ್ಯ ಯೋಧರಾದ ರಾಜೇಂದ್ರ ಕಲಘಟಗಿ ಅವರನ್ನು ಸಚಿವ ಗೋವಿಂದ ಕಾರಜೋಳ ಅವರು ಸನ್ಮಾನಿಸಿದರು.
ರಾಜೇಂದ್ರ ಕಲಘಟಗಿ ಅವರು ತಮ್ಮ 102 ವಯಸ್ಸಿನಲ್ಲಿಯೂ ಲವಲವಿಕೆಯಿಂದ ಇರುವುದಕ್ಕೆ ಸಚಿವರು ಅತೀವ ಸಂತಸ ವ್ಯಕ್ತಪಡಿಸಿದರು.
ಪ್ರತಿದಿನ ನಸುಕಿನಜಾವ 4 ಗಂಟೆಗೆ ಎದ್ದು 1000 ಕಪಾಲಬಾತಿ ಮಾಡುತ್ತೇನೆ. ನಿಯಮಿತವಾಗಿ ವಾಕಿಂಗ್ ಮಾಡುವುದಲ್ಲದೇ ಜೋಳದ ರೊಟ್ಟಿ, ಚಪಾತಿ ಊಟ, ಹಾಲು ಸೇವನೆ ಮಾಡುತ್ತೇನೆ.
ಸಿಹಿ ತಿನ್ನಲ್ಲ; ಕರಿದ ಪದಾರ್ಥಗಳನ್ನು ಮುಟ್ಟಲ್ಲ ಎಂದು ರಾಜೇಂದ್ರ ಕಲಘಟಗಿ ತಮ್ಮ ಆರೋಗ್ಯದ ಗುಟ್ಟು ಬಿಟ್ಟುಕೊಟ್ಟರು.


ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೆÇಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ.ಸಂಜೀವ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಸೈನಿಕ ಭವನದ ಪದಾಧಿಕಾರಿಗಳು ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.