Belagavi News In Kannada | News Belgaum

ರಾಜ್ಯದಲ್ಲಿ ಸಿಎಂ ಬದಲಾವಣೆ ಫಿಕ್ಸ್: ಎಂಎಲ್‍ಸಿ ನಾಗರಾಜ್ ಯಾದವ್

ಬೆಳಗಾವಿ: ಬೊಮ್ಮಾಯಿ ನಾಯಕತ್ವದ ಬಗ್ಗೆ ಬಿಜೆಪಿಯ ಸಚಿವರು, ಶಾಸಕರಿಗೆ ನಂಬಿಕೆ ಇಲ್ಲ. ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಉದ್ದೇಶದಿಂದಲೇ ಬೆಂಗಳೂರಿಗೆ ಕೇಂದ್ರ ಸಚಿವ ಅಮಿತ್ ಷಾ ಬಂದಿದ್ದರು ಎಂದು ಕಾಂಗ್ರೆಸ್ ಎಂಎಲ್‍ಸಿ ನಾಗರಾಜ್ ಯಾದವ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಇರುವ ಬೊಮ್ಮಾಯಿ ನೇತೃತ್ವವನ್ನು ಅವರ ಸರ್ಕಾರದ ಕ್ಯಾಬಿನೇಟ್‍ನ ಸಚಿವರೇ ಒಪ್ಪಿಕೊಳ್ಳುತ್ತಿಲ್ಲ. ಸುಮ್ಮನೇ ಟಿವಿ ಮುಂದೆ ಬಂದು ಬೊಮ್ಮಾಯಿಗೆ ನಾವು ಬೆಂಬಲಿಸುತ್ತೇವೆ ಎಂದು ಆತ್ಮವಂಚನೆಯ ಮಾತುಗಳನ್ನಾಡುತ್ತಿದ್ದಾರೆ. ಖಂಡಿತವಾಗಲೂ ರಾಜ್ಯದಲ್ಲಿ ಬಿಜೆಪಿಗೆ ವಿರೋಧಿ ಅಲೆಯಿದೆ. ಭ್ರಷ್ಟಾಚಾರದ ಬಗ್ಗೆ ಜನರಿಗೆ ಬಹಳಷ್ಟು ಕೋಪವಿದೆ. ಹೀಗಾಗಿ ಬೊಮ್ಮಾಯಿ ಸರ್ಕಾರವನ್ನು ಜನರು ಕೂಡ ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಕಿಡಿಕಾರಿದರು.

ಇನ್ನು ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ ನಂತರ ಹಿಂದೂ ಕಾರ್ಯಕರ್ತರೇ ಬಿಜೆಪಿ ರಾಜ್ಯಾಧ್ಯಕ್ಷರ ಕಾರನ್ನೇ ಎತ್ತಿ ಹಾಕುವ ನಡುವಳಿಕೆ ನೋಡಿದಾಗ, ಇದನ್ನು ಡ್ಯಾಮೇಜ್ ಕಂಟ್ರೋಲ್ ಮಾಡಲು ಅಮಿತ್ ಷಾ ಬೆಂಗಳೂರಿಗೆ ಬಂದಾಗ ಮಾಜಿ ಸಿಎಂ ಯಡಿಯೂರಪ್ಪ ಅವರ ಜೊತೆಗೆ ಪ್ರತ್ಯೇಕ ಸಭೆ ಮಾಡಿದ್ದಾರೆ. ಯಾವಾಗ ಚುನಾವಣೆಗಳು ಹತ್ತಿರ ಬರುತ್ತವೆಯೋ ಆಗ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವುದು ಬಿಜೆಪಿಯ ರಣನೀತಿಯಾಗಿದೆ. ಕಾರಣ ಎಂದರೆ ಬಿಜೆಪಿ ವಿರೋಧಿ ಅಲೆ ತಡೆಗಟ್ಟಲು ರಾಜಕೀಯದಲ್ಲಿ ಹೊಸ ನಾಯಕತ್ವ ಕೊಟ್ಟು ಜನರನ್ನು ಮರಳು ಮಾಡಲು ಮುಂದಾಗಿರುವುದು ಬಿಜೆಪಿಯ ಒಂದು ತಂತ್ರಗಾರಿಕೆ ಎಂದರು.

ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಅವರ ಮೇಲೆ ಬಿಜೆಪಿಯ ಶಾಸಕರಿಗೆ ನಂಬಿಕೆ ಇಲ್ಲದಿರುವುದು ಹಾಗೂ ಮಾಸ್ ಲೀಡರ್‍ಶಿಪ್ ಇಲ್ಲದಿರುವ ಕಾರಣ. ನಮ್ಮಲ್ಲಿರುವ ಘಟಾನುಘಟಿ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಇವರಿಗೆ ತಕ್ಕ ನಾಯಕರ ಕೊರತೆ ಇರುವ ಹಿನ್ನೆಲೆ ನಾಯಕತ್ವ ಬದಲಾವಣೆ ಮಾಡುವ ಉದ್ದೇಶದಿಂದಲೇ ಅಮಿತ್ ಷಾ ಬೆಂಗಳೂರಿಗೆ ಬಂದು ಯಡಿಯೂರಪ್ಪ ಜೊತೆಗೆ ಪ್ರತ್ಯೇಕ ಸಭೆ ಮಾಡಿದ್ದರು ಎಂದು ನಾಗರಾಜ್ ಯಾದವ್ ಹೊಸ ಬಾಂಬ್ ಸಿಡಿಸಿದರು.

ಇನ್ನು ಗುಜರಾತ್‍ನಲ್ಲಿ ಇಡೀ ಕ್ಯಾಬಿನೇಟ್‍ನ್ನೇ ಚೇಂಜ್ ಮಾಡಿದ್ದರು. ಇನ್ನು ಮಧ್ಯಪ್ರದೇಶದಲ್ಲಿ ಶಿವರಾಜ್‍ಸಿಂಗ್ ಚವ್ಹಾಣ ಅವರನ್ನು ಬದಲಾಯಿಸಿ ಯುವ ಮುಖಕ್ಕೆ ಮಣೆ ಹಾಕುವ ಪ್ರಯತ್ನ ಮಾಡಿದ್ದಾರೆ. ಅದೇ ರೀತಿ ತ್ರಿಪುರಾದಲ್ಲಿಯೂ ಅದೇ ರೀತಿ ಬದಲಾವಣೆ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಿ ಹೊಸ ನಾಯಕತ್ವಕ್ಕೆ ಅವಕಾಶ ಕೊಡುವುದು ಬಿಜೆಪಿ ರಣತಂತ್ರವಾಗಿದೆ. ಅದೇ ರೀತಿ ರಾಜ್ಯದಲ್ಲಿಯೂ ಬೊಮ್ಮಾಯಿ ತಮ್ಮ ಅವಧಿ ಪೂರ್ಣಗೊಳಿಸುವುದಿಲ್ಲ ಎಂದು ನಾಗರಾಜ್ ಯಾದವ್ ಭವಿಷ್ಯ ನುಡಿದರು.//////