Belagavi News In Kannada | News Belgaum

ಹಿಮಾಚಲ ಪ್ರದೇಶದಲ್ಲಿ ಪ್ರವಾಹ: 22 ಸಾವು, ಐವರು ನಾಪತ್ತೆ

ಹಿಮಾಚಲ ಪ್ರದೇಶ:  ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರವಾಹದಿಂದಾಗಿ 22 ಜನರು ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆಯನ್ನು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ತಿಳಿಸಿದ್ದಾರೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ನದಿಗಳು ಉಕ್ಕಿ ಹರಿಯುತ್ತಿದ್ದು, ಭೂಕುಸಿತ ಉಂಟಾಗುತ್ತಿದೆ.

ಮಂಡಿ, ಕಂಗ್ರಾ, ಚಂಬಾ ಜಿಲ್ಲೆಗಳಲ್ಲಿ ಪ್ರವಾಹದ ಪರಿಣಾಮ ಹೆಚ್ಚಾಗಿದ್ದು, ರಾಜ್ಯದಲ್ಲಿ ಈವರೆಗೆ ಹವಾಮಾನ ಬದಲಾವಣೆಯಿಂದ 36 ಅಪಘಾತಗಳು ಸಂಭವಿಸಿರುವುದಾಗಿ ಸುದೇಶ್ ಕುಮಾರ್ ತಿಳಿಸಿದರು. ಮನಾಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯದ 743 ರಸ್ತೆಗಳು ಹಾಳಾಗಿದ್ದು, ಶಿಮ್ಲಾ-ಚಂಡೀಗಢ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಒಟ್ಟು ಸಾವಿನ ಸಂಖ್ಯೆಯಲ್ಲಿ ಮಂಡಿ ಜಿಲ್ಲೆಯೊಂದರಲ್ಲೇ 13 ಮಂದಿ ಸಾವನ್ನಪ್ಪಿದ್ದು, ಭಾರೀ ಪ್ರವಾಹದ ಜೊತೆಗೆ ಭೂಕುಸಿತದಿಂದ ಜಿಲ್ಲೆ ತತ್ತರಿಸಿದೆ ಎಂದು ಜಿಲ್ಲಾಧಿಕಾರಿ ಅರಿಂದಮ್ ಚೈದರಿ ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರತೆಗೆದು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.///////