Belagavi News In Kannada | News Belgaum

ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ(೪೬) ಅವರು ಹೃದಯಾಘಾತದಿಂದ ಇಂದು ನಿಧನ

 

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ(೪೬) ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.


ಬೆಳಿಗ್ಗೆ ಜಿಮ್‌ಗೆ ಹೊಗಿ ವರ್ಕೌಟ್ ಮಾಡುವಾಗ ಎದೆನೋವು ಕಾಣಿಸಿ ಕೊಂಡು ಕುಸಿದುಬಿದ್ದಿದ್ದರು. ತಕ್ಷಣವೇ ಅವರನ್ನು ನಾಗರಬಾವಿಯ ಯುನಿಟಿ ಲೈಫ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.


ಬೊಮ್ಮಾಯಿ ಅವರು ಗೃಹ ಸಚಿವರಾದಾಗಿಂದ ಅವರ ಮಾಧ್ಯಮ ಸಂಯೋಜಕರಾಗಿ ಗುರುಲಿಂಗ ಸ್ವಾಮಿ ಕೆಲಸ ಮಾಡುತ್ತಿದ್ದರಲ್ಲದೇ ವಿವಿಧ ಸುದ್ದಿವಾಹಿನಿಗಳು ಹಾಗೂ ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡಿದ್ದರು. ಹುಬ್ಬಳ್ಳಿಯಲ್ಲೂ ಅನೇಕ ವರ್ಷ ಕಾರ್ಯ ನಿರ್ವಹಿಸಿದ್ದ ಇವರು ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.


ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಪತ್ರಕರ್ತರನ್ನು  ಅಗಲಿದ್ದಾರೆ. ರಾಮದುರ್ಗ ಮೂಲದ ಗುರುಲಿಂಗಸ್ವಾಮಿ ಕರ್ನಾಟಕ ವಿ.ವಿ.ಯ ೧೯೯೮ರ ಪತ್ರಿಕೋದ್ಯಮ ಬ್ಯಾಚ್ ವಿದ್ಯಾರ್ಥಿಯಾಗಿದ್ದರು.


ಅಂತ್ಯ ಸಂಸ್ಕಾರವು ನಾಳೆ ಬೆಳಿಗ್ಗೆ 10 ಗಂಟೆಗೆ ಬೆಳಗಾವಿ ಜಿಲ್ಲೆಯ ರಾಮದುಗ೯ ಪಟ್ಟಣದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಸಚಿವರಾದ ಮುರಗೇಶ ನಿರಾಣಿ, ಗೋಪಾಲಯ್ಯ, ಆರ್ ಅಶೋಕ, ಮುನಿರತ್ನ, ಡಿ.ಸುಧಾಕರ ಹಾಗೂ ಪತ್ರಕರ್ತರಾದ ಸುಭಾಷ ಹೂಗಾರ, ಸುನೀಲ ಶಿರಸಂಗಿ ಸೇರಿದಂತೆ ಹಿರಿಯ ಪತ್ರಕರ್ತರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.


ಸಿಎಂ ನಮನ: ನಾಗರಬಾವಿಯಲ್ಲಿನ ನಿವಾಸದಲ್ಲಿದ್ದ ಗುರುಲಿಂಗ ಸ್ವಾಮಿಯವರ ಮೃತದೇಹಕ್ಕೆ ಅಂತಿಮ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಳಿಮಠ ಅವರು ನನ್ನ ಎರಡು ದಶಕಗಳ ಸ್ನೇಹಿತ. ಮೂಲತಃ ರಾಮದುರ್ಗದವರಾದ ಕಷ್ಟಪಟ್ಟು ಓದಿ ಪಾಸ್ ಆಗಿ ಮಾಧ್ಯಮ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರು

ನಿನ್ನೆ ಎಂಟು ಗಂಟೆಗೆ ಮನೆಗೆ ಹೋಗ್ತೀನಿ ಅಂದ. ಬೆಳಿಗ್ಗೆ ಎದ್ದು ಇಂತಹ ಸುದ್ದಿ ಬರುತ್ತೆ ಅಂತ ಅನಿಸಿರಲಿಲ್ಲ. ಇದು ದುಃಖಕರ ಸಂಗತಿ ಎಂದರು. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ ಎಂದರು.

ಸಚಿವರಾದ ಆರ್.ಅಶೋಕ,ಮರುಗೇಶ ನಿರಾಣಿ,ಮುನಿರತ್ನ, ಗೋಪಾಲಯ್ಯ ಸಹಿತ ಅನೇಕ ಸಚಿವರು, ಹಿರಿಯ ಪತ್ರಕರ್ತರು ಸೇರಿದಂತೆ ಅನೇಕ ಗಣ್ಯರು ಗೌರವ ನಮನ ಸಲ್ಲಿಸಿದರು.

ಸಂತಾಪ: ಹೊಳಿಮಠ ಅವರ ನಿಧನಕ್ಕೆ ಕರ್ನಾಟಕ ಜರ್ನಲಿಟ್ಸ್ ಯೂನಿಯನ್ ಬೆಳಗಾವಿ ಜಿಲ್ಲಾ   ಯೂನಿಯನಿನ್   ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.