Belagavi News In Kannada | News Belgaum

ಲಿಂಗರಾಜ ಕಾಲೇಜಿನಲ್ಲಿ ಮನಸೂರೆಗೊಂಡ ‘ಕನ್ನಡ ಹಬ್ಬ’

ಕನ್ನಡ ಭಾಷೆ ನಮ್ಮ ಅಸ್ಮಿತೆ ಅದನ್ನು ಪೋಷಿಸಿ ಬೆಳೆಸುವುದು ನಮ್ಮ ಕರ್ತವ್ಯ : ಡಾ.ಎಚ್.ಬಿ.ರಾಜಶೇಖರ

ಬೆಳಗಾವಿ : ಕನ್ನಡ ಭಾಷೆ ನಮ್ಮ ಹೆಮ್ಮೆಯ ಪ್ರತೀಕ. ಶ್ರೇಷ್ಠವಾದ ಪರಂಪರೆ ಹಾಗೂ ಭವ್ಯವಾದ ಸಂಸ್ಕøತಿಯನ್ನು ಹೊಂದಿರುವ ಕನ್ನಡವನ್ನು ಉಳಿಸಿಬೆಳೆಸಬೇಕಾಗಿರುವುದು ಸಮಸ್ತ ಕನ್ನಡಿಗರ ಹೊಣೆಗಾರಿಕೆಯಾಗಿದೆ ಎಂದು ಖ್ಯಾತ ವೈದ್ಯರು ಯುಎಸ್‍ಎಂ-ಕೆಎಲ್‍ಇ ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ.ಎಚ್.ಬಿ.ರಾಜಶೇಖರ ಅವರು ಹೇಳಿದರು.
ಅವರು ಕೆಎಲ್‍ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗವು ಆಯೋಜಿಸಿದ್ದ ಕನ್ನಡ ಬಳಗದ ಉದ್ಘಾಟನೆ ಹಾಗೂ ‘ಕನ್ನಡ ನುಡಿಹಬ್ಬ’ವನ್ನು ಡೊಳ್ಳು ನುಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕನ್ನಡ ಭಾಷೆಗೆ 2000 ಸಾವಿರ ವರ್ಷಗಳ ಭವ್ಯವಾದ ಇತಿಹಾಸವಿದೆ. ಶ್ರೀಮಂತವಾದ ಸಂಸ್ಕøತಿ ಇದೆ ಅದನ್ನು ಪೋಷಿಸಿ ಬೆಳೆಸಬೇಕಾಗಿರುವುದು ಕನ್ನಡಿಗರ ಧರ್ಮ. ಮೆಕಾಲೆ ಶಿಕ್ಷಣ ನೀತಿಯಿಂದ ಭಾರತೀಯ ಬಹುಭಾಷೆಗಳು ತಮ್ಮ ಅಸ್ಥಿತ್ತವನ್ನು ಕಳೆದುಕೊಳ್ಳುವಂತಾಯಿತು. ಇಂಗ್ಲೀಷ್ ಭಾಷೆಯ ವ್ಯಾಮೋಹ ಹಾಗೂ ಒತ್ತಡದಿಂದ ಪ್ರಾಂತೀಯ ಭಾಷೆಗಳು ನಲುಗಿದವು. ಪಾಶ್ಚಾತ್ಯ ಭಾಷೆಯ ನೆರಳಿನಿಂದ ಇಂದಿಗೂ ಹೊರಗೆ ಬರಲಾದ ಸ್ಥಿತಿಯಲ್ಲಿ ನಾವಿದ್ದೇವೆ. ಆರು ಕೋಟಿ ಕನ್ನಡಿಗರು ಮಾತ್ರ ಕನ್ನಡದ ಅಸ್ಮಿತೆಯನ್ನು ಕಾಪಾಡಲು ಸಾಧ್ಯ. ವ್ಯವಹಾರಕ್ಕೆ ನಾವು ಇನ್ನೊಂದು ಭಾಷೆಯನ್ನು ಬಳಸಬೇಕಾಗಿರುವುದು ಅನಿವಾರ್ಯ, ಆದರೆ ನಮ್ಮ ಮಾತೃಭಾಷೆಯ ಮೇಲಿನ ಪ್ರೀತಿ ಗೌರವಾದರಗಳನ್ನು ಕಳೆದುಕೊಳ್ಳಬಾರದು.

ಇಂದಿನ ವಿದ್ಯಾರ್ಥಿಗಳು ಆಸಕ್ತಿಯಿಂದ ಕನ್ನಡದಲ್ಲಿ ಮಾತನಾಡುವ, ಕನ್ನಡ ಪುಸ್ತಕ ಸಂಸ್ಕøತಿಯನ್ನು ವಿಸ್ತರಿಸುವ, ಕನ್ನಡದಲ್ಲಿ ಬರೆಯುವ ಕಾರ್ಯವು ನಿರಂತರವಾಗಿ ಜರುಗಬೇಕಾಗಿದೆ ಅಂದರೆ ಮಾತ್ರ ಕನ್ನಡ ಭಾಷೆಯು ಜೀವಂತವಾಗಿ ಉಳಿಯಬಲ್ಲದು. ನಮ್ಮ ಭಾಷೆ ಉಳಿದರೆ ನಮ್ಮ ಸಂಸ್ಕøತಿಯು ಉಳಿಯುತ್ತದೆ. ಕೆಎಲ್‍ಇ ಸಂಸ್ಥೆಯು ಅವಿರತವಾಗಿ ಗಡಿಭಾಗದಲ್ಲಿ ಕನ್ನಡವನ್ನು ಕಟ್ಟುವ ಬೆಳೆಸುವ ಕಾರ್ಯವನ್ನು ಮಾಡಿದೆ. ಬೆಳಗಾವಿಯಲ್ಲಿ ಕೆಎಲ್‍ಇ ಕನ್ನಡದ ಭದ್ರಕೋಟೆಯನ್ನು ನಿರ್ಮಿಸಿದೆ. ಲಿಂಗರಾಜ ಕಾಲೇಜು ನಮ್ಮ ನಾಡಿನ ಸಾಂಸ್ಕøತಿಕ ಕೇಂದ್ರ, ತನ್ನ ರಚನಾತ್ಮಕ ಹಾಗೂ ಸೃಜನಶೀಲ ಕಾರ್ಯಗಳಿಂದ ಅಸಂಖ್ಯ ಕನ್ನಡದ ಕೆಲಸಗಳನ್ನು ಮಾಡಿದೆ. ಇಲ್ಲಿ ಕಲಿಯುವುದೇ ಭಾಗ್ಯ, ಉತ್ತಮವಾದ ಸಂಸ್ಕøತಿಯನ್ನು ಪಡೆದುಕೊಂಡು ಜೀವನವನ್ನು ರೂಪಿಸಿಕೊಳ್ಳಿ, ಕನ್ನಡ ನಾಡದೇವಿಯ ರಥವನ್ನು ಮುನ್ನಡೆಸಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಸಾಹಿತಿ ಡಾ.ಬಸವರಾಜ ಜಗಜಂಪಿ ಅವರು ಮಾತನಾಡುತ್ತ, ಲಿಂಗರಾಜ ಕಾಲೇಜು ಅನೇಕ ಖ್ಯಾತನಾಮರನ್ನು ನೀಡಿದೆ. ಪ್ರೊ.ಶಿ.ಶಿ.ಬಸವನಾಳ, ಎಸ್.ಸಿ.ನಂದೀಮಠ, ಪ್ರೊ.ಸಂ.ಶಿ.ಭೂಸನೂರಮಠ, ಚಂದ್ರಶೇಖರ ಕಂಬಾರ ಮೊದಲ್ಗೊಂಡು ಅನೇಕರು ಇಲ್ಲಿ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದವರು. ಕನ್ನಡವನ್ನು ಪೋಷಿಸಿ ಬೆಳೆಸಿದವರು. ಅನೇಕ ಐತಿಹಾಸಿಕ ಸಮ್ಮೇಳನಗಳಿಗೆ, ಸಭೆಸಮಾರಂಭಗಳಿಗೆ ಸಾಕ್ಷಿಯಾದ ಅಭಿದಾನ ಲಿಂಗರಾಜ ಕಾಲೇಜಿಗಿದೆ. ಕನ್ನಡ ಭಾಷೆ ಹಾಗೂ ಸಂಸ್ಕøತಿಯನ್ನು ಪೋಷಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಹೊಣೆಗಾರಿಕೆ.

ಕನ್ನಡ ಪ್ರೇಮವು ನಮ್ಮ ಹೃದಯದಿಂದ ಮೂಡಿಬರಬೇಕು ಜಗದೆಳಿಗೆ ಕನ್ನಡದಿಂದಲೇ ಎಂಬ ನುಡಿಯನ್ನು ವರಕವಿ ಬೇಂದ್ರೆಯವರು ಹೇಳಿದಂತೆ ಇಂದು ಕನ್ನಡ ಭಾಷೆ ಜಾಗತಿಕವಾಗಿ ವಿಸ್ತರಿಸಿದೆ. ಜಗತ್ತಿನ ಹಲವಾರು ದೇಶಗಳಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಕನ್ನಡವನ್ನು ಪ್ರವರ್ಧಮಾನಸ್ಥಿತಿಗೆ ತರುವಲ್ಲಿ ನಮ್ಮ ಹಿರಿಯರು ಅವಿರತವಾಗಿ ಶ್ರಮಿಸಿದ್ದಾರೆ. ಅವರೆಲ್ಲರನ್ನು ಸ್ಮರಿಸಲೇಬೇಕು. ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದಲ್ಲಿ ‘ಕರ್ನಾಟಕ’ ಎಂಬ ಹೆಸರು ಮರುನಾಮಕರಣಗೊಂಡು ಐವತ್ತು ವರ್ಷಗಳು ತುಂಬುತ್ತಾ ಬಂದಿರುವ ಸಮಯದಲ್ಲಿ ಲಿಂಗರಾಜ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಬಳಗವನ್ನು ಸ್ಥಾಪಿಸಿರುವುದು ಹೆಮ್ಮೆಯನ್ನುಂಟುಮಾಡಿದೆ. ಸರ್ಕಾರವು ಮಾಡಬೇಕಾದ ಕಾರ್ಯವನ್ನು ಕನ್ನಡಮ್ಮನ ಮಕ್ಕಳಾದ ವಿದ್ಯಾರ್ಥಿಗಳು ಸ್ವಯಂ ಸ್ಫೂರ್ತಿಯಿಂದ ಸೇರಿ ಕನ್ನಡಹಬ್ಬವನ್ನು ಆಯೋಜಿಸಿರುವುದು ಹೆಮ್ಮೆಯನ್ನುಂಟುಮಾಡಿದೆ. ಗಡಿಭಾಗದಲ್ಲಿ ಕನ್ನಡದ ಚಟುವಟಿಕೆಗಳು ನಿತ್ಯವೂ ಮಾರ್ಧನಿಸಬೇಕು. ನಾವು ಕನ್ನಡದಲ್ಲಿ ಮೊದಲು ವ್ಯವಹರಿಸಬೇಕು ಅಂದಾಗ ಕನ್ನಡ ಜೀವಂತವಾಗಿ ಉಳಿಯುತ್ತದೆ ಎಂದು ಹೇಳಿದರು.
ಪ್ರಾಚಾರ್ಯ ಡಾ.ಬಿ.ಎಂ.ತೇಜಸ್ವಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಡಾ.ಎಚ್.ಎಂ.ಚನ್ನಪ್ಪಗೋಳ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಡಾ.ಎಚ್.ಎಸ್.ಮೇಲಿನಮನಿ ವಂದಿಸಿದರು. ಡಾ.ಮಹೇಶ ಗುರನಗೌಡರ, ಡಾ.ರೇಣುಕಾ ಕಠಾರಿ, ಡಾ.ಜಿ.ಎನ್.ಶೀಲಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ವಿಭಾಗವು ಪ್ರಕಟಿಸಿದ ಕನ್ನಡ ಪಠ್ಯಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಕನ್ನಡ ನುಡಿ ಜಾತ್ರೆಯಲ್ಲಿ ಮಿಂದೆದ್ದ ವಿದ್ಯಾರ್ಥಿಗಳು: ಆರಂಭದಲ್ಲಿ ಕನ್ನಡ ಭುವನೇಶ್ವರಿಯ ಭವ್ಯವಾದ ಮೆರವಣಿಗೆ ಜರುಗಿತು. ಕುಂಭ ಹಾಗೂ ಆರತಿಯನ್ನು ಹಿಡಿದು ನೂರಾರು ವಿದ್ಯಾರ್ಥಿನಿಯರು ಹೆಜ್ಜೆಹಾಕಿದರು. ಡೊಳ್ಳು ಕುಣಿತ ಆಕರ್ಷಕವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಿಬ್ಬಂದಿವರ್ಗದವರು ಕನ್ನಡ ಸಂಸ್ಕøತಿಯ ವಿವಿಧ ವೇಷಭೂಷಣಗಳನ್ನು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇಡೀ ಲಿಂಗರಾಜ ಕಾಲೇಜಿನ ಆವರಣ ಭವ್ಯವಾದ ತಳಿರು ತೋರುಣ, ಕನ್ನಡ ಬಾವುಟಗಳು ಹಾಗೂ ಕೆಂಪು ಹಳದಿ ಬಣ್ಣದ ಬಲೂನುಗಳಿಂದ ವರ್ಣರಂಜಿತವಾಗಿತ್ತು. ಕನ್ನಡದ ಹಬ್ಬ ಎಲ್ಲರನ್ನು ಆಕರ್ಷಿಸಿತ್ತು.
ಕನ್ನಡ ಸಂಸ್ಕøತಿಯನ್ನು ಬಿಂಬಿಸುವ ನೃತ್ಯ, ವೇಷಭೂಷಣ, ಅಭಿನಯ, ನಾಟಕಗಳು, ಹಾಡುಗಳು, ಜನಪದನೃತ್ಯಗಳು ಮನಸೂರೆಗೊಂಡವು. ಆಗಮಿಸಿದ ಎಲ್ಲ ವಿದ್ಯಾರ್ಥಿಗಳು ರುಚಿಕರವಾದ ಭೋಜನವನ್ನು ಸವಿದರು. ತದನಂತರದಲ್ಲಿ ಜರುಗಿದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಾದ್ಯಗಳಿಗೆ ಹೆಜ್ಜೆಹಾಕಿದರು. ಕನ್ನಡ ಹಬ್ಬದ ನಿಮಿತ್ತ ಕೆಎಲ್‍ಇ ಪ್ರಸಾರಾಂಗವು ಪುಸ್ತಕ ಪ್ರದರ್ಶನವನ್ನು ಏರ್ಪಡಿಸಿತ್ತು.///////