Belagavi News In Kannada | News Belgaum

ಪರಿಸರ ರಕ್ಷಿಸದಿದ್ದರೆ ಭೂಮಿಯ ವಿನಾಶ-ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ

ಪರಿಸರವನ್ನು ರಕ್ಷಿಸದಿದ್ದರೆ ಭೂಮಿಯ ವಿನಾಶವಾಗಲಿದೆ. ಮುಂದಿನ ಪೀಳಿಗೆಯವರು ಉತ್ತಮವಾಗಿ ಬಾಳು ನಡೆಸಬೇಕಾದರೆ ನಾವು ಈಗ ಪರಿಸರ ಸಂರಕ್ಷಣೆ ಮಾಡಬೇಕಾದ್ದು ಅತ್ಯಗತ್ಯ ಎಂದು ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.

ಮೈಸೂರು ಜಿಲ್ಲೆ ಸಾಲಿಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ವತಿಯಿಂದ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು ಪರಿಸರ ವಿನಾಶದಿಂದ ಕೊಡಗಿನಲ್ಲಿ ಅತಿವೃಷ್ಟಿ, ಭೂಕುಸಿತಗಳು ಉಂಟಾಗಿ ಸಾವು-ನೋವುಗಳುಂಟಾಗುತ್ತಿವೆ. ಕಾಡು ಪ್ರಾಣಿಗಳು ಆಹಾರಕ್ಕಾಗಿ ನಾಡಿನೊಳಕ್ಕೆ ಬಂದು ಭೀತಿ ಉಂಟು ಮಾಡುತ್ತಿವೆ. ಪರಿಸರ ನಾಶದಿಂದಾಗಿ ಹೃದಯಾಘಾತ, ಶ್ವಾಸಕೋಶದ ಕ್ಯಾನ್ಸರ್ ಮೊದಲಾದ ಕಾಯಿಲೆಗಳು ಹೆಚ್ಚಳವಾಗುತ್ತಿವೆ.ಭೂಮಿಯು ಶಾಖದ ಉಂಡೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಾನವ ಸಮುದಾಯವು ಒಳಗಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕರ್ತವ್ಯವೆಂದು ಕಣ್ಮುಚ್ಚಿ ಕೂರಬಾರದು. ಪ್ರತಿಯೊಬ್ಬರೂ ತಮ್ಮ, ತಂದೆ-ತಾಯಿಯ , ಹಿರಿಯರ, ಸಹೋದರ-ಸಹೋದರಿಯರ ಜನ್ಮದಿನದಂದು, ಹಿರಿಯರ ಸವಿನೆನಪಿನಲ್ಲಿ ಪ್ರತಿ ವರ್ಷವೂ ಸಸಿಗಳನ್ನು ನೆಡಬೇಕು.ಆ ಮೂಲಕ ಪರಿಸರ ಸಂರಕ್ಷಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತರು ಹಾಗೂ ಲೇಖಕರಾದ ಗುಣಚಂದ್ರಕುಮಾರ್ ಜೈನ್ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ರಾಜ್ಯ ಸರ್ಕಾರವು ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚಿಸುತ್ತಿದೆ.ಅವುಗಳ ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಶ್ರದ್ದೆಯಿಂದ ಅಭ್ಯಾಸ ಮಾಡಿ ಉತ್ತಮ ಜ್ಞಾನ ಪಡೆದುಕೊಳ್ಳಬೇಕು.ಆ ಮೂಲಕ ಉತ್ತಮ ಭವಿಷ್ಯ ಕಟ್ಡಿಕೊಳ್ಳಬೇಕು ಎಂದು ನುಡಿದರು.

ಮುಖ್ಯ ಅತಿಥಿಗಳಾಗಿದ್ದ ಕನ್ನಡ ಪರ ಚಿಂತಕ ಡಾ.ಎಂ.ಆರ್.ವಿನಯ್ ಅವರು ಮಾತನಾಡಿ ವಿದ್ಯಾರ್ಥಿಗಳು ಕಂಪ್ಯೂಟರ್ ತಂತ್ರಜ್ಞಾನ, ಸಾಮಾನ್ಯ ಜ್ಞಾನ, ವ್ಯವಹಾರಿಕ ಆಂಗ್ಲ ಭಾಷೆಯ ಕಲಿಕೆ, ಉತ್ತಮ ನಾಯಕತ್ವದ ಗುಣ ಹಾಗೂ ಸಕಾಲಿಕ ಸ್ಪಂದನಾ ಗುಣವನ್ನು ಗಳಿಸಿದರೆ ಉತ್ತಮ ಹುದ್ದೆ ಪಡೆಯಬಹುದು . ವಿದ್ಯಾರ್ಥಿಗಳು ಶಿಜ್ಣದ ಜೊತೆಜೊತೆಗೆ ಪರಿಸರ ಸಂರಕ್ಷಣೆ, ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು.

‌ಸಾಲಿಗ್ರಾಮಬ್ರಹ್ಮಕುಮಾರಿ ಆಶ್ರಮದ ಮುಖ್ಯಸ್ಥರಾದ ಶಿಲ್ಪ ಸಹೋದರಿ ಅವರು ಮಾತನಾಡಿ
ವಿದ್ಯಾರ್ಥಿಗಳು ಬಾಹ್ಯ ಪರಿಸರದ ಜೊತೆಗೆ ಆಂತರಿಕ ಪರಿಸರವನ್ನೂ ಸಹ ಉತ್ತಮವಾಗಿಟ್ಟು ಕೊಳ್ಳಬೇಕು.ಏಕಾಗ್ರತೆ,ಶ್ರದ್ದೆ,ಜ್ಞಾನ ಪಡೆದು ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಬೇಕು ಎಂದು ನುಡಿದರು.

ಕಾಲೇಜಿನ ಪ್ರಿನ್ಸಿಪಾಲರಾದ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉಪನ್ಯಾಸಕರಾದ ಮಧುಕರ್ ಸ್ವಾಗತಿಸಿದರು.ಅಶೋಕಕುಮಾರ್ ಕಾರ್ಯನಿರ್ವಹಿಸಿದರು.ಡಾ.ವಿಜಯಕುಮಾರ್ ವಂದಿಸಿದರು.ಪರಿಸರ ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು.