Belagavi News In Kannada | News Belgaum

ಕನ್ನಡದಲ್ಲಿ ಬರೆದ ಚೆಕ್​ ಅಮಾನ್ಯ ಮಾಡಿದ ಎಸ್​ಬಿಐಗೆ 85,177 ರೂ ದಂಡ ವಿಧಿಸಿದ ಕೋರ್ಟ್

ಧಾರವಾಡ: ಕನ್ನಡದಲ್ಲಿ ಬೆಲೆ ನಮೂದು ಮಾಡಿದ್ದ ಕಾರಣಕ್ಕೆ ಚೆಕ್​ ಅನ್ನು ಅಮಾನ್ಯ ಮಾಡಿದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಕ್ರಮಕ್ಕೆ ಭಾರಿ ಅಸಮಾಧಾನ ವ್ಯಕ್ತಪಡಿಸಿರುವ ಧಾರವಾಡದ ಗ್ರಾಹಕರ ಕೋರ್ಟ್​, ಬ್ಯಾಂಕ್​ಗೆ ದಂಡ ವಿಧಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ವಾದಿರಾಜಾಚಾರ್ಯ ಇನಾಮದಾರ ಅವರು ಎಸ್​ಬಿಐ ವಿರುದ್ಧ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಬ್ಯಾಂಕ್​ಗೆ ಆಯೋಗವು 85,177 ರೂಪಾಯಿಗಳ ದಂಡ ವಿಧಿಸಿದೆ.
ವಾದಿರಾಜಾಚಾರ್ಯ ಅವರು, ಎಸ್‌ಬಿಐ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದಾರೆ. ಚೆಕ್ ಮೂಲಕ ಇವರು ವಿದ್ಯುತ್ ಬಿಲ್ ಪಾವತಿ ಮಾಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ 6000 ರೂ. ಬಿಲ್​ ಕಟ್ಟಬೇಕಿತ್ತು. 6000 ಎಂದು ಅವರು ಕನ್ನಡದಲ್ಲಿ ಬರೆದಿದ್ದರು. ಇದು ಇಂಗ್ಲಿಷ್​ನಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಬ್ಯಾಂಕ್​ ಚೆಕ್​ ಅನ್ನು ಅಮಾನ್ಯ ಮಾಡಿದ್ದರಿಂದ ವಿದ್ಯುತ್​ ಬಿಲ್ ಕಟ್ಟಲು ವಾದಿರಾಜಾಚಾರ್ಯ ಅವರಿಗೆ ಸಾಧ್ಯವಾಗಲಿಲ್ಲ. ಬಿಲ್​ ಕಟ್ಟಿಲ್ಲ ಎನ್ನುವ ಕಾರಣಕ್ಕೆ ಅವರ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಲಾಯಿತು.
ಇದರಿಂದ ಆಕ್ರೋಶಗೊಂಡ ವಾದಿರಾಜಾಚಾರ್ಯ ಅವರು, ಈ ಕ್ರಮ ಪ್ರಶ್ನಿಸಿ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು. ‘ನನ್ನ ಖಾತೆಯಲ್ಲಿ 9 ಲಕ್ಷ ರೂ.ಕ್ಕಿಂತ ಹೆಚ್ಚು ಹಣ ಇದೆ. ಆದರೂ ಕನ್ನಡದಲ್ಲಿ ಬರೆದೆ ಎನ್ನುವ ಕಾರಣಕ್ಕೆ 6 ಸಾವಿರ ರೂಪಾಯಿ ಚೆಕ್​ ಅಮಾನ್ಯ ಮಾಡಲಾಗಿದೆ. ಈ ಮೂಲಕ ಬ್ಯಾಂಕ್​ ಸೇವಾ ನ್ಯೂನ್ಯತೆ ಎಸಗಿದೆ’ ಎಂದು ಅವರು ದೂರಿದ್ದರು.
ಎಸ್​ಬಿಐ ಕ್ರಮವನ್ನು ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ , ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಗಂಭೀರವಾಗಿ ಪರಿಗಣಿಸಿದರು. ಈ ಹಿನ್ನೆಲೆಯಲ್ಲಿ ದೂರುದಾರರಿಗೆ ಪರಿಹಾರ ಮತ್ತು ದಂಡ ರೂಪದಲ್ಲಿ ಒಟ್ಟು 85,177 ರೂಪಾಯಿಗಳನ್ನು ಪಾವತಿಸುವಂತೆ ಆದೇಶಿಸಿದ್ದಾರೆ.
‘ನಾನು ಇಂಗ್ಲಿಷ್​ ಉಪನ್ಯಾಸಕನಾಗಿದ್ದರೂ ಎಲ್ಲ ವ್ಯವಹಾರಕ್ಕೂ ಕನ್ನಡ ಬಳಕೆ ಮಾಡುತ್ತಿದ್ದೇನೆ. ಈ ಘಟನೆಯಿಂದ ನನಗೆ ತುಂಬಾ ನೋವಾಗಿತ್ತು. ಇದೀಗ ಕರ್ನಾಟಕದಲ್ಲಿಯೇ ಕನ್ನಡವನ್ನು ಕಡೆಗಣನೆ ಮಾಡುತ್ತಿರುವವರಿಗೆ ಕೋರ್ಟ್​ ತಕ್ಕ ಶಿಕ್ಷೆ ನೀಡಿದೆ’ ಎಂದು ವಾದಿರಾಜಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
‘ಬ್ಯಾಂಕ್​ಗಳಲ್ಲಿ ತ್ರಿಭಾಷಾ ನೀತಿಯಡಿಯಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಯನ್ನು ಎತ್ತಿಹಿಡಿಯುವುದರಿಂದ ಈ ಆದೇಶ ಮಹತ್ವದ್ದು ಎನಿಸಿದೆ. ಈ ಆದೇಶ ಒಂದು ನಿದರ್ಶನವಾಗಬೇಕು. ಪಿಎಸ್​ಯು ಮತ್ತು ಕೇಂದ್ರ ಕಚೇರಿಗಳು ಪ್ರಾದೇಶಿಕ ಭಾಷೆಗಳನ್ನು ಗೌರವಿಸುವುದಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್​ನಾಗಭೂಷಣ ಹೇಳಿದ್ದಾರೆ./////