Belagavi News In Kannada | News Belgaum

ಅಭಿವೃದ್ಧಿ ಕಾರ್ಯಗಳ ಬಲದಿಂದ ಬಿಜೆಪಿಗೆ 150ಕ್ಕೂ ಹೆಚ್ಚು ಶಾಸಕ ಸ್ಥಾನ-ನಳಿನ್‍ಕುಮಾರ್ ಕಟೀಲ್

ಬೆಂಗಳೂರು: ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ಖಚಿತ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರ ಅಭಿವೃದ್ಧಿ ಕಾರ್ಯಗಳು ಇದಕ್ಕೆ ಪೂರಕ ಎನಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ರಾಜ್ಯ ಬಿಜೆಪಿ ಸರ್ಕಾರದ 3 ವರ್ಷಗಳ ಸಾಧನೆಯ ಸಂಬಂಧ ಇಂದು ದೊಡ್ಡಬಳ್ಳಾಪುರದ ಬಳಿ “ಜನಸ್ಪಂದನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಪರಿವರ್ತನೆಯ ಯುಗ ಆರಂಭವಾಗಿದೆ. ವಿದ್ಯಾನಿಧಿಯನ್ನು ಬೊಮ್ಮಾಯಿಯವರ ಆರಂಭಿಸಿದ್ದಾರೆ. ಕಿಸಾನ್ ಸಮ್ಮಾನ್‍ಗೆ ಹೆಚ್ಚುವರಿ ಮೊತ್ತ ಸೇರಿಸಿ ಕೊಡಲಾಗುತ್ತಿದೆ ಎಂದರಲ್ಲದೆ, ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಎಂದು ಟೀಕಿಸಿದರು.
ಸೋನಿಯಾ ಗಾಂಧಿ, ರಾಹುಲ್, ಡಿ.ಕೆ.ಶಿವಕುಮಾರ್ ಸೇರಿ ಎಲ್ಲರೂ ಜಾಮೀನಿನಡಿ ಇದ್ದಾರೆ. ಭ್ರಷ್ಟಾಚಾರಿಗಳ ಪಕ್ಷ ಕಾಂಗ್ರೆಸ್ ಎಂದು ಆರೋಪಿಸಿದರು. ಸಿದ್ದರಾಮಯ್ಯರ ಕಾಲದಲ್ಲಿ ಅತಿಹೆಚ್ಚು ಭ್ರಷ್ಟಾಚಾರ ಹಗರಣ ಆಗಿದೆ. 24 ಹಿಂದೂ ಕಾರ್ಯಕರ್ತರ ಹತ್ಯೆ ಆಗಿದ್ದು, ಗೋಹತ್ಯೆ ನಿರಂತರವಾಗಿತ್ತು. ಆದರೆ, ಗೋಹತ್ಯಾ ನಿಷೇಧ, ಮತಾಂತರ ನಿಷೇಧವನ್ನು ಬಿಜೆಪಿ ಸರಕಾರ ಜಾರಿಗೊಳಿಸಿದೆ ಎಂದು ತಿಳಿಸಿದರು.
ಸಿದ್ದರಾಮಣ್ಣನದು ಹಿಂದೂ ವಿರೋಧಿ ನಿಲುವು. ಬಿಜೆಪಿ ರೈತರ ಪರ ಇರುವ ಪಕ್ಷ. ಅಭಿವೃದ್ಧಿಗೆ ಹೆಸರಾಗಿ ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಇದ್ದಾರೆ. ಬಿಜೆಪಿ ಸಶಕ್ತವಾಗುತ್ತಿದೆ. ಮುಂದಿನ ಬಾರಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ ನಿರ್ವಹಣೆಯನ್ನು ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಸಮರ್ಥವಾಗಿ ಮಾಡಿದೆ. 60 ವರ್ಷ ಆಡಳಿತ ಮಾಡಿದ್ದ ಕಾಂಗ್ರೆಸ್ ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿತ್ತು. ಮೋದಿಯವರ ಸರಕಾರವು ದೇಶದ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಿದೆ ಎಂದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಜನರ ವಿಶ್ವಾಸ ಮತ್ತು ಬೆಂಬಲಕ್ಕೆ ಚಿರಋಣಿ ಎಂದರು. 2019ರಲ್ಲಿ ಕಾಂಗ್ರೆಸ್‍ನ ಕುತಂತ್ರ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲಾಯಿತು. ಜೆಡಿಎಸ್ ಜೊತೆ ಅನೈತಿಕವಾಗಿ ಕೈ ಜೋಡಿಸಿದರು. ಕೇವಲ ಅಧಿಕಾರಕ್ಕಾಗಿ ಏನೆಲ್ಲ ಮಾಡಲು ಸಿದ್ಧ ಎಂಬುದು ಆಗ ಗೊತ್ತಾಯಿತು. 17 ಜನ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಎದುರಿಸಿದರು. ಅವರೆಲ್ಲರೂ ವೀರರು ಎಂದರು.
ಯಡಿಯೂರಪ್ಪ ಅವರ ನಾಯಕತ್ವವು ಸಮರ್ಥವಾಗಿ ಕೋವಿಡ್ ಎದುರಿಸಿದೆ. ಜನರ ಪ್ರಾಣ ಉಳಿಸುವ ಕೆಲಸ ಮಾಡಿದೆ. ನರೇಂದ್ರ ಮೋದಿಜಿ ಅವರು 1 ಲಕ್ಷ ಕೋಟಿಗಿಂತ ಹೆಚ್ಚು ಅನುದಾನ ನೀಡಿದ್ದಾರೆ. 130 ಕೋಟಿಗೂ ಹೆಚ್ಚು ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ಕೊಡಲಾಗಿದೆ. ಕಾಂಗ್ರೆಸ್ ಮಾತಿನಲ್ಲಿ ಮಾತ್ರ ಜನಸೇವೆ ಮಾಡುತ್ತದೆ. ಮೋದಿಯವರು ಕೊಟ್ಟ ಅಕ್ಕಿಯನ್ನು ತಮ್ಮ ಪಕ್ಷದ ಸರಕಾರದ ಹೆಸರಿನಲ್ಲಿ ಸಿದ್ದರಾಮಯ್ಯ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಅನ್ನಭಾಗ್ಯದ ಅವ್ಯವಹಾರ ತನಿಖೆ ಮಾಡುತ್ತಿದ್ದ ಅಧಿಕಾರಿಯ ಸಂಶಯಾಸ್ಪದ ಸಾವು ಆಗಿದೆ. ಮರಳಿನಲ್ಲೂ ಅವ್ಯವಹಾರ ನಡೆಯಿತು. 36 ಸಾವಿರ ಬೋರ್‍ವೆಲ್ ವಿಚಾರ, ಎಸ್‍ಸಿ ಎಸ್‍ಟಿ ತಲೆದಿಂಬು, ಹಾಸಿಗೆ, ಬಿಡಿಎ ನಿವೇಶನ, ಲ್ಯಾಪ್‍ಟಾಪ್ ನೀಡಿಕೆಯಲ್ಲೂ ಹಗರಣಗಳು ಆಗಿವೆ. ಕಾಂಗ್ರೆಸ್‍ನದು ನಿರಂತರ ಭ್ರಷ್ಟಾಚಾರದ ಸರಕಾರ ಎಂದು ಆರೋಪಿಸಿದರು.
ಪೊಲೀಸ್ ನೇಮಕಾತಿ ವಿಚಾರದಲ್ಲೂ ಹಗರಣ ನಡೆದಿದ್ದು ಕ್ರಮ ತೆಗೆದುಕೊಂಡಿಲ್ಲ. ಶಿಕ್ಷಕರ ನೇಮಕದಲ್ಲೂ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ದುಷ್ಟ ನಾಟಕ ಇನ್ನು ಮುಂದೆ ಕರ್ನಾಟಕದಲ್ಲಿ ನಡೆಯದು ಎಂಬ ಸಂಕಲ್ಪವನ್ನು ಜನರು ಮಾಡಿದ್ದಾರೆ ಎಂದು ನುಡಿದರು.
ರೈತರ ಮಕ್ಕಳಿಗೆ ವಿದ್ಯಾನಿಧಿ ಕೊಡಲಾಗುತ್ತಿದೆ. 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗುತ್ತಿದೆ. 21ನೇ ಶತಮಾನ ಜ್ಞಾನದ ಶತಮಾನ ಆಗಿದೆ. ಕೃಷಿಗೆ ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದೇವೆ. ಹಾಲು ಉತ್ಪಾದಕರಿಗೆ ಬ್ಯಾಂಕ್ ತೆರೆಯುತ್ತಿದ್ದೇವೆ. ಸಮಾಜ ಕಲ್ಯಾಣದಲ್ಲಿ ಹಾಸ್ಟೆಲ್‍ಗಳನ್ನು ತೆರೆದಿದ್ದು, ಸ್ಕಾಲರ್‍ಶಿಪ್ ಕೊಡಲಾಗುತ್ತಿದೆ. ಎಸ್‍ಟಿ, ಎಸ್‍ಸಿಗಳಿಗೆ ಉಚಿತವಾಗಿ 75 ಯೂನಿಟ್ ವಿದ್ಯುತ್ ಕೊಡಲಾಗುತ್ತಿದೆ ಎಂದು ವಿವರ ನೀಡಿದರು.
ಸಮಾಜದ ಎಲ್ಲ ವರ್ಗದ ಸಾಮಥ್ರ್ಯ ಹೆಚ್ಚಳ, ನೀರಾವರಿಗೆ ಆದ್ಯತೆ ಕೊಡಲಾಗಿದೆ. ಎತ್ತಿನಹೊಳೆ ಯೋಜನೆ ನಾವೇ ಆರಂಭಿಸಿದ್ದೇವೆ. 3 ಸಾವಿರ ಕೋಟಿಯನ್ನು ನೀಡಿ, ಇದೇ ವರ್ಷ ಇಲ್ಲಿಗೆ ಎತ್ತಿನಹೊಳೆ ನೀರನ್ನು ಹರಿಸಲಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕೈಗಾರಿಕಾ ಟೌನ್‍ಶಿಪ್, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿಯನ್ನು ಸೆಟಲೈಟ್ ಟೌನ್ ಆಗಿ ಅಭಿವೃದ್ಧಿ ಮಾಡಲಿದ್ದೇವೆ ಎಂದು ತಿಳಿಸಿದರು.
ಹೊಸ ಶಿಕ್ಷಣ ನೀತಿ, ಕೈಗಾರಿಕಾ ನೀತಿ, ಉದ್ಯೋಗ ನೀಡಿಕೆ ನೀತಿ ನಮ್ಮದು. ಸರ್ವತೋಮುಖ ಅಭಿವೃದ್ಧಿಗೆ ಬದ್ಧತೆ ನಮ್ಮದು. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದ ಅವರು, ಅಧಿಕಾರ ಪಡೆಯುವ ಕಾಂಗ್ರೆಸ್ ಕನಸು ಕೇವಲ ಕನಸಾಗಿಯೇ ಉಳಿಯಲಿದೆ. ಭ್ರಷ್ಟ ಕಾಂಗ್ರೆಸ್‍ಗೆ ಮತ್ತೆ ಅವಕಾಶ ಇಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಜನಶಕ್ತಿ ಇದನ್ನು ತೀರ್ಮಾನ ಮಾಡಲಿದೆ. ಭ್ರಷ್ಟ ಹಣ ಪ್ರಯೋಜನಕ್ಕೆ ಬರುವುದಿಲ್ಲ. ನಿಮ್ಮ ಬಂಡವಾಳÀ ಪ್ರಯೋಜನ ಪಡೆಯದು. ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಹಗರಣಗಳನ್ನು ಜನರ ಮುಂದಿಡುತ್ತೇವೆ ಎಂದು ಎಚ್ಚರಿಸಿದರು.
2023ರಲ್ಲಿ ಮತ್ತೆ ಕಮಲ ಅರಳಲಿದೆ. ಸಮೃದ್ಧ ನಾಡಿನ ಕನಸು ನನಸಾಗಲಿದೆ ಎಂದರು. ಡಬಲ್ ಎಂಜಿನ್ ಸರಕಾರದ ಲಾಭ ಜನರಿಗೆ ಸಿಗಲಿದೆ ಎಂದು ವಿಶ್ವಾಸದಿಂದ ನುಡಿದರು. ಜನಸ್ಪಂದನೆ ವಿಜಯೋತ್ಸವದ ಮೂಲಕ ಕೊನೆಯಾಗಲಿದೆ ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಧ್ವಜ ಅರಳುವ ಸಂದೇಶವನ್ನು ಈ ಸಮಾವೇಶ ನೀಡಿದೆ ಎಂದರು. ಈ ಸಮಾವೇಶ ಯಶಸ್ಸಿಗೆ ಶ್ರಮಿಸಿದ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಮತ್ತು ಕಾರ್ಯಕರ್ತರನ್ನು ಅವರು ಅಭಿನಂದಿಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಡಾ. ಸುಧಾಕರ್ ಅವರ ಪರಿಶ್ರಮದಿಂದ ಈ ಭಾಗದಲ್ಲಿ ಹೆಚ್ಚು ಶಾಸಕರು ಗೆಲ್ಲಲಿದ್ದಾರೆ. ಪಕ್ಷವು 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಗರಿಷ್ಠ ಸವಲತ್ತುಗಳನ್ನು ಜನರಿಗೆ ನೀಡಿದೆ. ಕಿಸಾನ್ ಸಮ್ಮಾನ್ ಅಡಿಯಲ್ಲಿ ಒಟ್ಟು 10 ಸಾವಿರವನ್ನು ನೀಡಲಾಗುತ್ತಿದೆ. ರಾಹುಲ್ ಗಾಂಧಿ ಅವರ ಮನೆತನದ ಮೂರು ಜನರು ಪ್ರಧಾನಿಗಳಾದರೂ ಬಡತನ ನಿವಾರಣೆ ಆಗಿಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಪ್ರಧಾನಿಯವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಅವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು. ಕಾಂಗ್ರೆಸ್ಸಿಗರ ಅಧಿಕಾರದ ಕನಸು ನನಸಾಗದು ಎಂದು ಎಚ್ಚರಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ; ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಗಳಿಸಲಿದೆ ಎಂದು ತಿಳಿಸಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸಲು ಮನವಿ ಮಾಡಿದರು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಅವರು ಮಾತನಾಡಿ, ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ನಮ್ಮದಾಗಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಅಸಮರ್ಪಕ ಆಡಳಿತವನ್ನು ಜನತೆ ಪ್ರಶ್ನಿಸಬೇಕು. ಕರ್ನಾಟಕದ ಬಗ್ಗೆ ಪಕ್ಷಪಾತದ ಧೋರಣೆಯನ್ನು ಜನರು ಪ್ರಶ್ನಿಸಬೇಕು ಎಂದರಲ್ಲದೆ, ಮೋದಿ ಮತ್ತು ಬಿಜೆಪಿ ಸರಕಾರವು ಕರ್ನಾಟಕಕ್ಕೆ ಗರಿಷ್ಠ ಅನುದಾನ ನೀಡಿದೆ ಎಂದು ವಿವರಿಸಿದರು.
ರಸ್ತೆ ಮತ್ತು ಹೆದ್ದಾರಿ ನಿರ್ಮಾಣಕ್ಕೆ ಗರಿಷ್ಠ ಅನುದಾನವನ್ನು ಬಿಜೆಪಿಯ ಕೇಂದ್ರ ಸರಕಾರ ನೀಡಿದೆ. ಕೇಂದ್ರದ ವಿವಿಧ ಯೋಜನೆಗಳಡಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಅನನ್ಯ ಎಂದು ಅವರು ವಿವರ ಕೊಟ್ಟರು. ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ರೈಲ್ವೆ ಇಲಾಖೆಯೂ ಕರ್ನಾಟಕವನ್ನು ಕಡೆಗಣಿಸಿತ್ತು. ಆದರೆ, ಬಿಜೆಪಿ ಗರಿಷ್ಠ ಅನುದಾನವನ್ನು ನೀಡಿದೆ ಎಂದರು.
ಕರ್ನಾಟಕಕ್ಕೆ ಗರಿಷ್ಠ ಎಫ್‍ಡಿಐ ಲಭಿಸಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು. ಕರ್ನಾಟಕ ಸೆಮಿ ಕಂಡಕ್ಟರ್ ಹಬ್ ಆಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ರಾಹುಲ್ ಗಾಂಧಿ ಭಾರತ್ ಜೋಡೋ ಮಾತನಾಡುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಹೋರಾಟಗಾರರನ್ನು ಕಡೆಗಣಿಸಿತ್ತು ಎಂದು ಟೀಕಿಸಿದರು.
ಪ್ರಧಾನಿಯವರು ರಾಜಪಥ ಹೆಸರನ್ನು ಕರ್ತವ್ಯಪಥ ಎಂದು ಬದಲಿಸಿದ್ದಾರೆ. ಆದರೆ, ಗಾಂಧಿ ಕುಟುಂಬವು ಗುಲಾಮತನದ ಸಂಕೇತವನ್ನೇ ಇಟ್ಟುಕೊಂಡಿತ್ತು ಎಂದು ಆಕ್ಷೇಪ ಸೂಚಿಸಿದರು. ಕೋವಿಡ್ ಲಸಿಕೆ ಉಚಿತವಾಗಿ ನೀಡಿದ ವಿಚಾರವನ್ನೂ ಅವರು ವಿವರಿಸಿದರು. ಆದರೆ, ಗಾಂಧಿ ಕುಟುಂಬವು ಜನರಿಗೆ ಲಸಿಕೆ ಪಡೆಯದಂತೆ ತಿಳಿಸುವ ಷಡ್ಯಂತ್ರ ಮಾಡಿತ್ತು ಎಂದು ಟೀಕಿಸಿದರು. ಭಾರತ ಇಬ್ಬಾಗ ಮಾಡುವ ಘೋಷಣೆ ಕೂಗಿದ ವ್ಯಕ್ತಿಗಳನ್ನು ಜೊತೆಗೂಡಿಸಿಕೊಂಡು ರಾಹುಲ್ ಅವರು ತಮ್ಮ ಯಾತ್ರೆ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದು ರಾಷ್ಟ್ರದ್ರೋಹ ಎಂದು ತಿಳಿಸಿದರು. ರಾಹುಲ್ ಗಾಂಧಿ ಕುಟುಂಬವು ಅಧಿಕಾರದಾಹವನ್ನು ಹೊಂದಿದೆ ಎಂದು ಟೀಕಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್ ಚಮಚಾಗಳು ಅವಮಾನ ಮಾಡಿದ್ದರು ಎಂದು ಅವರು ನುಡಿದರು. ಕಾಂಗ್ರೆಸ್ ಪಕ್ಷದ ಚಿಂತನೆಯನ್ನು ಇಲ್ಲಿನ ಜನರು ಪ್ರಶ್ನಿಸಬೇಕು ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗ ಕೆರೆ ತುಂಬುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಹಾಗೂ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕೆರೆ ಖಾಲಿ ಬೀಳುತ್ತದೆ. ಬಿಜೆಪಿ ಕಾಲ್ಗುಣ ಒಳ್ಳೆಯದಿದೆ. ಈ ಬಾರಿ ಇಲ್ಲಿನ 18 ಶಾಸಕರ ಸ್ಥಾನದಲ್ಲಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸ್ಸಿದ್ಧ. ಇದನ್ನು ಯಾರೂ ತಪ್ಪಿಸಲು ಅಸಾಧ್ಯ ಎಂದರು. ನರೇಂದ್ರ ಮೋದಿಯವರ ಸರಕಾರದ ಸಾಧನೆಗಳನ್ನು ವಿವರಿಸಿದರು. ಭಾರತೀಯರನ್ನು ಜೋಡಿಸುವ ಕಾರ್ಯವನ್ನು ಮೋದಿಯವರು ಮಾಡಿದರು. ತುಕಡೇ ಗ್ಯಾಂಗಿನ ಮುಖಂಡರು ಮತ್ತು ಅವರಿಗೆ ಆಶ್ರಯ ಕೊಡುವ ಕಾಂಗ್ರೆಸ್ ಪಕ್ಷದವರು ಭಾರತ್ ಜೋಡೋ ನಾಟಕ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಬಾಲ ಬಿಚ್ಚುವವರಿಗೆ ನಾವೂ ಬುಲ್‍ಡೋಜರ್ ಟ್ರೀಟ್‍ಮೆಂಟ್ ಕೊಡಬೇಕಾಗುತ್ತದೆ ಎಂದರಲ್ಲದೆ, ಅರ್ಕಾವತಿ ರೀಡೂ ಪಿತಾಮಹ ಯಾರೆಂದು ಸಿದ್ದರಾಮಯ್ಯ ಉತ್ತರ ಕೊಡುವರೇ? ಸೋಲಾರ್ ಅಲಾಟ್‍ಮೆಂಟ್ ಖದೀಮ ಯಾರೆಂದು ಉತ್ತರಿಸಿ ಎಂದು ಆಗ್ರಹಿಸಿದರು. ಕಲ್ಲಿದ್ದಲು ಹಗರಣ ಮಾಡಿದವರು ಯಾರು, ರೀಡೂ ಹಗರಣ ಮಾಡಿದವರು ಯಾರೆಂದು ಶೀಘ್ರವೇ ಬಯಲಿಗೆ ಬರಲಿದೆ ಎಂದು ತಿಳಿಸಿದರು. ಸರ್ವತೋಮುಖ ಅಭಿವೃದ್ಧಿಗೆ ಬದ್ಧತೆಯೊಂದಿಗೆ ಬಿಜೆಪಿ ಸರಕಾರ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಸಚಿವ ಡಾ. ಸುಧಾಕರ್ ಅವರು ಪ್ರಾಸ್ತಾವಿಕ ಮಾತನಾಡಿ, ಇದು ವ್ಯಕ್ತಿಯ ವೈಭವೀಕರಣ ಕಾರ್ಯಕ್ರಮ ಅಲ್ಲ. ನಮ್ಮ ಸರಕಾರದ ಮೂರು ವರ್ಷಗಳ ಸಾರ್ಥಕ ಸೇವೆ ಮತ್ತು ಸಬಲೀಕರಣದ ಅನಾವರಣ ಇಲ್ಲಿ ನಡೆದಿದೆ ಎಂದು ತಿಳಿಸಿದರು. ರೈತರ ಮಕ್ಕಳಿಗೆ ವಿದ್ಯಾಸಿರಿ ಯೋಜನೆಯನ್ನು ಬೊಮ್ಮಾಯಿಯವರ ಸರಕಾರ ಜಾರಿಗೊಳಿಸಿದೆ. ರಾಜ್ಯದಲ್ಲಿ 12 ಕೋಟಿ ಕೋವಿಡ್ ಲಸಿಕೆ ಕೊಡಲಾಗಿದೆ. ವಿವಿಧ ಯೋಜನೆಗಳ ಮೂಲಕ ಮಾಡಿದ ಸಾಧನೆಯನ್ನು ಇಲ್ಲಿ ತಿಳಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಅಮೃತ ಮಹೋತ್ಸವದಡಿ ಮಾಡಿದ ಸಾಧನೆಯನ್ನೂ ಅವರು ತಿಳಿಸಿದರು. 75 ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ರಾಜ್ಯ ಸರಕಾರ ಮಾಡಿದೆ. 3 ಕೋಟಿ ಮನೆಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಇದು ಜನರ ಉತ್ಸವ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಖಾಲಿ ಇಲ್ಲದ ಸಿಎಂ ಕುರ್ಚಿಗಾಗಿ ಕಚ್ಚಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ್ದು ಡಬಲ್ ಡೋರ್ ಉಳ್ಳ ಬಸ್ ವ್ಯವಸ್ಥೆ. ಯಾರು ಹತ್ತುತ್ತಾರೋ ಯಾರು ಇಳಿಯುತ್ತಾರೋ ಗೊತ್ತಾಗದು ಎಂದು ಟೀಕಿಸಿದರು. ಎತ್ತಿನಹೊಳೆ ಪ್ರಮುಖ ಯೋಜನೆ ರೂಪಿಸಿದ ಕೀರ್ತಿ ನಮ್ಮ ನಾಯಕರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಬೆಂಗಳೂರಿಗೆ ಪರ್ಯಾಯವಾಗಿ ಸ್ಯಾಟಲೈಟ್ ಟೌನ್‍ಗಳನ್ನು ರೂಪಿಸಲು ಮನವಿ ಮಾಡಿದರು. ‘ಬಾನಿಗೊಂದು ಎಲ್ಲೆ ಎಲ್ಲಿದೆ, ಏಕೇ ಕನಸು ಕಾಡುವೆ’ ಎಂಬ ಹಾಡನ್ನು ನೆನಪಿಸಿ “ಕಾಂಗ್ರೆಸ್ಸಿಗರು ನೆನೆಸಿದಂತೆ ರಾಜ್ಯದಲ್ಲಿ ಏನೂ ಆಗದು” ಎಂದು ತಿಳಿಸಿದರು.
ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ದೇಶವನ್ನು ಇಬ್ಭಾಗ ಮಾಡಿದ ಕಾಂಗ್ರೆಸ್ ಪಕ್ಷದವರು ಮತ್ತು ರಾಹುಲ್ ಗಾಂಧಿ ಅವರ ಮನೆತನದವರು ತಮ್ಮ ಕೃತ್ಯಕ್ಕೆ ಉತ್ತರ ಹೇಳಬೇಕು ಎಂದು ಆಗ್ರಹಿಸಿದರು. ಮತಬ್ಯಾಂಕ್ ರಾಜಕಾರಣಕ್ಕಾಗಿ ಜನರಿಗೆ ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್‍ನವರು ಬಡವರು, ದೀನದಲಿತರ ಬಗ್ಗೆ ಕಳಕಳಿ ಹೊಂದಿಲ್ಲ. ಬಡವರ ಬಗ್ಗೆ ಅವರದು ಮೊಸಳೆ ಕಣ್ಣೀರು ಅಷ್ಟೇ. ಸಿದ್ದರಾಮಯ್ಯನವರೂ ಸಿಎಂ ಆಗಿದ್ದರೂ ಜನರಿಗೆ ಉತ್ತಮ ಕೆಲಸಗಳನ್ನು ಮಾಡಿಲ್ಲ ಎಂದು ಆಕ್ಷೇಪಿಸಿದರು. ಆದರೆ, ಬಡವರ ಪರವಾಗಿ ಬಿಜೆಪಿ ಸರಕಾರ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು. ನಮ್ಮ ಪಕ್ಷ ಸಾಮಾಜಿಕ ನ್ಯಾಯಕ್ಕಾಗಿ ಬದ್ಧತೆ ಹೊಂದಿದೆ ಎಂದರು.
ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ಮಂಗಳೂರಿನ ಪ್ರಧಾನಿಯವರು ಪಾಲ್ಗೊಂಡ ಸಮಾವೇಶದ ಮಾದರಿಯಲ್ಲೇ ಇದೊಂದು ದೊಡ್ಡ ಸಮಾವೇಶ. ಆದರೆ, ಕಾಂಗ್ರೆಸ್ ಪಕ್ಷದವರಿಂದ ಮೊಸರಿನಲ್ಲಿ ಕಲ್ಲು ಹುಡುಕುವ ಕಾರ್ಯ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಪಕ್ಷವು ದೇಶ, ರಾಜ್ಯ ಮತ್ತು ಧರ್ಮ- ಜಾತಿಗಳನ್ನು ಒಡೆಯುವ ಕೆಲಸವನ್ನೇ ಮಾಡಿದೆ. ಈಗ ಭಾರತ್ ಜೋಡೋ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದರು. ಕಾಂಗ್ರೆಸ್ಸಿಗರು ಪಕ್ಷವನ್ನು ಮೊದಲು ಜೋಡಿಸಬೇಕು. ಪ್ರಧಾನಿಯವರನ್ನು ಟೀಕಿಸುವುದು ಸರ್ವಥಾ ಸಲ್ಲದು ಎಂದು ಆಕ್ಷೇಪಿಸಿದರು. ಪಕ್ಷವು ಅನೇಕ ಸುಧಾರಣೆಗಳನ್ನು ಜಾರಿಗೊಳಿಸಿದೆ ಎಂದು ಅವರು ತಿಳಿಸಿದರು.
ಸಚಿವ ಬಿ.ಸಿ.ಪಾಟೀಲ್ ಅವರು ಮಾತನಾಡಿ, ಇದು ಅಸೆಂಬ್ಲಿ ಚುನಾವಣೆಗೆ ಬಿಜೆಪಿಯ ರಣಕಹಳೆ ಇದು ಎಂದರು. ಕೃಷಿ ಸಚಿವಾಲಯವು ಮಾಡಿದ ಸಾಧನೆಯನ್ನು ಅವರು ವಿವರಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ರಾಜ್ಯ ಸಹ ಪ್ರಭಾರಿ ಶ್ರೀಮತಿ ಡಿ.ಕೆ.ಅರುಣಾ, ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ನಾರಾಯಣಸ್ವಾಮಿ, ರಾಜ್ಯದ ಸಚಿವರಾದ ಅರಗ ಜ್ಞಾನೇಂದ್ರ, ಡಾ|| ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್, ಎನ್.ಮುನಿರತ್ನ, ರಾಜ್ಯದ ಸಚಿವರು, ಸಂಸದರು, ಶಾಸಕರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಮಾಜಿ ಸಚಿವರು, ಪಕ್ಷದ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು ಮತ್ತು ಮುಖಂಡರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಡಿಲಕ್ಷ್ಮೀನಾರಾಯಣ, ಮುಖಂಡ ಅನಿಲ್‍ಕುಮಾರ್ ಅವರು ಬಿಜೆಪಿ ಸೇರಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಸ್ವಾಗತಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಅವರು ಕಾರ್ಯಕ್ರಮ ನಿರೂಪಿಸಿದರು. ಕೋಲಾರ ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್ ಅವರು ವಂದಿಸಿದರು. ಸಚಿವ ಉಮೇಶ್ ಕತ್ತಿ ಅವರ ನಿಧನ ಮತ್ತು ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆ ಸಂಬಂಧ ಶ್ರದ್ಧಾಂಜಲಿ ಸಲ್ಲಿಸಲಾಯಿತು.