Belagavi News In Kannada | News Belgaum

ಹಿರಿಯ ನಾಗರಿಕರಿಗೆ ಸರ್ಕಾರಿ ಸೌಲಭ್ಯ ಒದಗಿಸಿ: ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ

ಬೆಳಗಾವಿ :  ಹಿರಿಯ ನಾಗರಿಕರಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಸಿಗಬೇಕಾದ ಸೌಲತ್ತುಗಳ ಕುರಿತಾಗಿ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳ ಜೊತೆಗೆ ಚರ್ಚಿಸಲಾಗಿದೆ. ಅರ್ಹ ಹಿರಿಯ ನಾಗರಿಕಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬೆಳಗಾವಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಅವರು ತಿಳಿಸಿದರು.

ಬೆಳಗಾವಿ ಉಪ ವಿಭಾಗಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಸೆ.12) ಉಪವಿಭಾಗ ಮಟ್ಟದ ಹಿರಿಯ ನಾಗರಿಕರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕರ ನೆರವಿಗೆ ನಿಲ್ಲಿರಿ:

ಸಾರಿಗೆ ಸೇವೆ, ಬ್ಯಾಂಕ್ ಸೇವೆ, ಪಿಂಚಣಿ ತೊಡಕು, ಕೌಟುಂಬಿಕ ದೌರ್ಜನ್ಯ, ಮನೆ ಮತ್ತು ಜಮೀನು ವ್ಯಾಜ್ಯ ಕುರಿತಂತೆ ಹಿರಿಯ ನಾಗರಿಕರಿಗೆ ದೊರಕಬೇಕಾದ ಕಾನೂನು ರೀತಿಯ ನ್ಯಾಯ ಹಾಗೂ ಸೌಲಭ್ಯಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಿದ ವಿಭಾಗಾಧಿಕಾರಿ ಅವರು, ಅಧಿಕಾರಿಗಳಿಗೆ ಸೂಕ್ತ ಸಲಹೆಗಳ ಮೂಲಕ ಹಿರಿಯ ನಾಗರಿಕರ ನೆರವಿಗೆ ನಿಲ್ಲುವಂತೆ ಸೂಚಿಸಿದರು.

ಅಹವಾಲು ಸ್ವೀಕಾರ; ಮಾರ್ಗದರ್ಶನ:

ಬೈಲಹೊಂಗಲ ವಿಭಾಗ ವ್ಯಾಪ್ತಿಯ ಕೆಲವು ಹಿರಿಯ ನಾಗರಿಕರು ಕೂಡ ಸಭೆಗೆ ವೃದ್ಧಾಪ್ಯ ವೇತನ ಕುರಿತು ತಮಗಾಗುತ್ತಿರುವ ಸಮಸ್ಯೆಗಳನ್ನು ಸಭೆಯಲ್ಲಿ ನಿವೇದಿಸಿಕೊಂಡರು. ಈ ವೇಳೆ ಅವರಿಗೆ ಸೂಕ್ತ ಸಲಹೆ ನೀಡುವ ಮೂಲಕ ಅವರ ವಿಭಾಗ ವ್ಯಾಪ್ತಿಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.

ಅಧಿಕಾರಿಗಳೊಂದಿಗೆ ಚರ್ಚೆ:
ಬೆಳಗಾವಿ ಉಪ ವಿಭಾಗ ವ್ಯಾಪ್ತಿಯ ಬ್ಯಾಂಕ್ ಅಧಿಕಾರಿಗಳು, ಸಾರಿಗೆ ಅಧಿಕಾರಿಗಳು ಹಾಗೂ ಇತರ ಇಲಾಖೆ ಅಧಿಕಾರಿಗಳೊಂದಿಗೆ ಉಪವಿಭಾಗಾಧಿಕಾರ ರವೀಂದ್ರ ಕರಲಿಂಗಣ್ಣವರ ಅವರು ಸುದೀರ್ಘವಾಗಿ ಚರ್ಚಿಸಿದರು. ತಮ್ಮ ಪಿಂಚಣಿ ಪಡೆದುಕೊಳ್ಳಲು ಬ್ಯಾಂಕ್ ಅಧಿಕಾರಿಗಳು ಹಿರಿಯ ನಾಗರಿಕರನ್ನು ಸುಖಾ ಸುಮ್ಮನೆ ಅಲೆದಾಡಿಸದೇ ಅವರ ಅಗತ್ಯ ದಾಖಲಾತಿ ಪರಿಶೀಲನೆಗಾಗಿ ಇ- ಜನ್ಮ ತಂತ್ರಾಂಶ ಅನುಕೂಲಕರವಾಗಿದ್ದು ಆ ಮೂಲಕ ಪರಿಶೀಲಿಸಿ ಸೂಕ್ತವಾಗಿ ಮಾರ್ಗದರ್ಶನ ನೀಡಿ ಎಂದು ತಿಳಿಸಿದರು.

ಇತ್ತೀಚಿಗೆ ಮನೆಗಳಲ್ಲಿ ಹಿರಿಯ ನಾಗರಿಕರೆ ಜಮೀನು, ಮನೆ ಸಂಬಂಧವಾಗಿ ದೌರ್ಜನ್ಯ, ಹಿಂಸೆ ನೀಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಈ ರೀತಿಯ ಬೆಳವಣಿಗೆಯನ್ನು ತಡೆಗಟ್ಟಬೇಕಾಗಿದೆ ಸಂಧ್ಯಾ ಕಾಲದಲ್ಲಿ ಹಿರಿಯ ನಾಗರಿಕರ ನೆಮ್ಮದಿ ಬದುಕಿಗೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಮುತುವರ್ಜಿಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ನಾಮದೇವ ಬಿಲ್ಕರ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸುಧೀಂದ್ರ ಕುಲಕರ್ಣಿ, ಎನ್‍ಡಬ್ಲ್ಯುಕೆಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಇತರ ಅಧಿಕಾರಿಗಳು ಹಾಗೂ ಹಿರಿಯ ನಾಗರಿಕರು ಉಪಸ್ಥಿತಿರಿದ್ದರು./////