Belagavi News In Kannada | News Belgaum

ನದಿ ತೀರದ ಜನರಿಗೆ ಪ್ರವಾಹದ ಭೀತಿ

ಚಿಕ್ಕೋಡಿ: ನೆರೆಯ ಮಹಾರತಾಷ್ಟ್ರದ ಘಟ್ಟ ಪ್ರದೇಶ ಮತ್ತು ಚಿಕ್ಕೋಡಿ ಉಪವಿಭಾಗದಲ್ಲಿ ಕಳೆದ ಎರಡೂ ದಿನಗಳಿಂದ ಮಳೆ ಸುರಿಯುತ್ತಿದೆ. ಹೀಗಾಗಿ ಕೃಷ್ಣಾ ನದಿ ಸೇರಿದಂತೆ ಉಪನದಿಗಳಿಗೆ ನೀರು ರಭಸದಿಂದ ಹರಿದು ಬರುತ್ತಿದೆ. ಹೀಗಾಗಿ ನದಿ ತೀರದ ಜನರಿಗೆ ಮತ್ತೊಮ್ಮೆ ಪ್ರವಾಹದ ಭೀತಿ ಆತಂಕ ಮೂಡಿಸಿದೆ.
ಮಹಾರಾಷ್ಟ್ರದಿಂದ ರಾಜಾಪೂರ ಬ್ಯಾರೇಜ್ ಮುಖಾಂತರ ಕೃಷ್ಣಾ ನದಿಗೆ 65453 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿ ಸೇರಿದಂತೆ ಉಪನದಿಗಳಾದ ವೇಧಗಂಗಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ 8 ಸೇತುವೆಗಳು ಮುಳುಗಡೆಯಾಗಿವೆ.
ಕೃಷ್ಣಾ ನದಿಗೆ ಯಡೂರ ಬಳಿ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ-ಯಡೂರ, ದೂಧಗಂಗಾ ನದಿಯ ಮಲೊಕವಾಡ-ದತ್ತವಾಡ, ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಜತ್ರಾಟ-ಬೀವಶಿ, ಮಮದಾಪೂರ-ಹುನ್ನರಗಿ, ಕುನ್ನೂರ-ಬಾರವಾಡ ಸೇರಿದಂತೆ ಕೆಳ ಹಂತದ 8 ಸೇತುವೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.
ಮಹಾರಾಷ್ಟ್ರದ ಮಳೆ ವಿವರ: ಕೋಯ್ನಾ-51 ಮಿ.ಮೀ, ವಾರಣಾ-89ಮಿ.ಮೀ, ಕಾಳಮ್ಮಾವಾಡಿ-105 ಮಿ.ಮೀ, ನವಜಾ-34ಮಿ.ಮೀ, ಸಾಂಗಲಿ-1 ಮಿ.ಮೀ, ರಾಧಾನಗರಿ-77 ಮಿ.ಮೀ, ಮಹಾಬಳೇಶ್ವರ-25 ಮಿ.ಮೀ, ಕೊಲ್ಲಾಪೂರ-34 ಮಿ.ಮೀ, ಪಾಟಗಾಂವ-145 ಮಿ.ಮೀಟರ್‍ನಷ್ಟು ಮಳೆಯಾಗಿದೆ.
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಮಳೆ ವಿವರ :  ಚಿಕ್ಕೋಡಿ-14.4 ಮಿ.ಮೀ, ಸದಲಗಾ-28.6 ಮಿ.ಮೀ, ಅಂಕಲಿ-19.4 ಮಿ.ಮೀ, ಜೋಡಟ್ಟಿ-17.2 ಮಿ.ಮೀ, ನಾಗರಮುನ್ನೋಳಿ-18.4 ಮಿ.ಮೀ, ನಿಪ್ಪಾಣಿ(ಪಿಡಬ್ಲುಡಿ)-29ಮಿ.ಮೀ, ನಿಪ್ಪಾಣಿ(ಎಆರ್‍ಎಸ್)-28.6ಮಿ.ಮೀ, ಸೌಂದಲಗಾ-38.2 ಮಿ.ಮೀ, ಗಳತಗಾ-26.2 ಮಿ.ಮೀಟರ್‍ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.