Belagavi News In Kannada | News Belgaum

ಡಾ. ಜಯಶ್ರೀ ರವಿ ಹೆಗಡೆಯವರ ಲಯಾಭಿನಯ ತಂಡದಿಂದ ಸಾಂಸ್ಕೃತಿಕ ಉತ್ಸವ

ಡಾ. ಜಯಶ್ರೀ ರವಿ ಹೆಗಡೆಯವರ ಲಯಾಭಿನಯ ತಂಡದಿಂದ ಸಾಂಸ್ಕೃತಿಕ ಉತ್ಸವ

ಅದು ಪುರಂದರ ಮಂಟಪದ ಸಭಾಂಗಣ, ವೇದಿಕೆಗೆ ಶಾಸ್ತ್ರೀಯ ಸಿಂಗರಣ, ಸಭಾಂಗಣದ ತುಂಬೆಲ್ಲ ಬಣ್ಣದ ವಿದ್ಯುದೀಕರಣ,ಎದುರಿಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ, ವೇದಿಕೆಯ ಒಂದು ಬದಿ ನಟರಾಜನಿಗೆ ಪೂಜಾ ನಮನ, ಇನ್ನೊಂದು ಬದಿ ವಿದ್ವಾನ್ ಚೇತನ ನಾಗರಾಜ್ ಗಾಯನ, ವಿದ್ವಾನ್ ಡಾ.ಜಯಶ್ರೀ ರವಿ ಅವರಿಂದ ನಟ್ಟುವಾಂಗ, ವಿದ್ವಾನ್ ಸಾಯುವಂಶಿ- ಮೃದಂಗ, ವಿದ್ವಾನ್ ರಾಕೇಶ್ ದತ್ ಅವರಿಂದ ಕೊಳಲು ವಾದನ, ಸಭಾಂಗಣದ ತುಂಬೆಲ್ಲ ಕಾತರದಿಂದ ಕಾಯುತ್ತಿರುವ ಜನಮನ, ಗಂಧರ್ವ ಲೋಕವೇ ಧರೆಗಿಳಿದಂತೆ ಮಕ್ಕಳಿಂದ ಭರತನಾಟ್ಯ ನರ್ತನ.

ಇದು ‘ಲಯಾಭಿನಯ ಕಲ್ಟರಲ್ ಫೌಂಡೇಷನ್’ ವತಿಯಿಂದ ಜಿಗಣಿಯ ನಿಸರ್ಗ ಬಡಾವಣೆಯ ಪುರಂದರ ಮಂಟಪದಲ್ಲಿ ಹಮ್ಮಿಕೊಂಡಿದ್ದ “ಪ್ರಥಮ ಅಂಕುರ ನಾದ ನೂಪುರ” ಎಂಬ ಸಾಂಸ್ಕೃತಿಕ ಉತ್ಸವದಲ್ಲಿ ಕಂಡು ಬಂದ ದೃಶ್ಯಗಳು. ಪ್ರಥಮ ಅಂಕುರದ (ಜೂನಿಯರ್ ವಿಭಾಗ) ವಿದ್ಯಾರ್ಥಿಗಳಾದ ಸ್ಮೃತಿ ಆಶೀಶ್, ಚಂದ್ರಕಲಾ ಹುಣಶ್ಯಾಳ, ಸನ್ನಿಧಿ ಸದಾಶಿವ, ಅಭಿಷೇಕ್ ಸಕ್ಸೇನಾ, ಅನಿತಾ ಆಚಾರ್, ವೈಷ್ಣವಿ ಯಾದವ್, ಗೌರಿ ಬೆಳ್ಳೂರು, ಸಮೀಕ್ಷಾ ಎಸ್. ಎಚ್.ಹಾಗೂ ನಾದ ನೂಪುರದ ವಿದ್ಯಾರ್ಥಿಗಳಾದ (ಸೀನಿಯರ್ ವಿಭಾಗ) ಶ್ರೀರಕ್ಷಾ ಹೆಗಡೆ, ವರ್ಣಾ ಹೆಗಡೆ, ಅನುಷಾ ಮುಂಡಗನೂರು, ಜೀವಿತ ಎಸ್.,ಸುನಿಧಿ ಎಸ್. ರವರು ತಮ್ಮ ಸೊಗಸಾದ ನೃತ್ಯಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.

ಲಲಿತೋದಯ ವಿಲಾಸ-ಶ್ರೀಚಕ್ರ ಮಾಧುರ್ಯಂ (ಲಲಿತಾ ಸರಸ್ರನಾಮದ ಮೇಲೆ), ಕೀರ್ತನಾರೂಪಿ ಭಗವದ್ಗೀತೆ, ಶ್ರೀಕೃಷ್ಣ ಕರ್ಣಾಮೃತ, ನರಕ ಮೋಕ್ಷ, ಗಣೇಶ-ಸ್ಕಂದ ಕಲಹ ಕರಣ, ಮದನಿಕ ವಿನೋದ-ವಿಷಾದ (ಬೇಲೂರು ಮದನಿಕರ ಮೇಲೆ), ನವರಸ ರಾಮಾಯಣ ಇತ್ಯಾದಿ ನೃತ್ಯ ಕಾರ್ಯಕ್ರಮಗಳನ್ನು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತುತಪಡಿಸಿರುವ ಹೆಗ್ಗಳಿಕೆ, ಲಯಾಭಿನಯ ಕಲ್ಟರಲ್ ಫೌಂಡೇಷನ್ ಸಂಸ್ಥೆಯದ್ದಾಗಿದೆ. ಡಾ.ಜಯಶ್ರೀ ರವಿ ಅವರ ಮಾರ್ಗದರ್ಶನದಲ್ಲಿ ‘ಲಯಾಭಿನಯ’ವು ತರಬೇತಿ, ನೃತ್ಯ ಸಂಯೋಜನೆ ಮತ್ತು ಪ್ರದರ್ಶನಗಳ ಮೂಲಕ ಭಾರತೀಯ ಮೌಲ್ಯಗಳು ಮತ್ತು ದೇಶಭಕ್ತಿಯನ್ನು ಪ್ರಚಾರ ಮಾಡುತ್ತಿದೆ.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಾ ರಾ ಕೃಷ್ಣಮೂರ್ತಿಯವರು ಮಾತನಾಡಿ “ನಮ್ಮ ದೇಶದಲ್ಲಿ ವಿದ್ಯೆಯನ್ನು ದೈವಿಕತೆ ಎಂದು ಕರೆಯುತ್ತಾರೆ. ಇದು ವೇದಗಳಿಂದ ಬಂದದ್ದು. ಶಂಕರಾಚಾರ್ಯರು ಅದನ್ನು ಹೆಕ್ಕಿ ತೆಗೆದು “ಶ್ರೀ ವಿದ್ಯೆ” ಎಂದು ಹೆಸರುಕೊಟ್ಟರು. ನಮ್ಮೆಲ್ಲಾ ವಿದ್ಯೆಗಳು ಶ್ರೀ ವಿದ್ಯೆಗಳೇ. ವಿದ್ಯೆಯು ಮನುಷ್ಯನಲ್ಲಿನ ಪಶುತ್ವವನ್ನು ಕಳೆದು, ಮನುಷ್ಯತ್ವದಿಂದ ದೈವತ್ವದೆಡೆಗೆ ಕೊಂಡೊಯ್ಯುತ್ತದೆ. ನರ ತನ್ನ ಸಾಧನೆಯಿಂದಲೇ ನಾರಾಯಣನಾಗುವ ಪರಿ ಇದು. ವಿದ್ಯೆ, ಸಂಸ್ಕಾರ ಇಲ್ಲದವ ಮಾನವನಿಂದ ದಾನವನಾಗುತ್ತಾನೆ. ಅಂತಹ ವಿದ್ಯೆಯನ್ನು ಪ್ರಚುರಪಡಿಸುತ್ತಿರುವ ಡಾ. ಜಯಶ್ರೀ ರವಿ ಹೆಗಡೆಯವರಿಗೆ ತುಂಬು ಹೃದಯದ ಧನ್ಯವಾದಗಳು”ಎಂದರು.

ಚಂದಾಪುರ ಶಾರದಾಶ್ರಮದ ಮಾತಾಜಿ ಯತೀಶ್ವರಿ ರಮಾಪ್ರಿಯಾಂಬಾ ರವರು ಮಾತನಾಡಿ “ಕಲೆ ಎಂಬುದು ನಮ್ಮನ್ನು ಭಗವಂತನ ಸಾನಿಧ್ಯಕ್ಕೆ ಕರೆದೊಯುತ್ತದೆ. ಎಲ್ಲರಿಗೂ ಬೇಕಾಗಿರುವುದು ನಿತ್ಯ ಸುಖ, ಪರಮ ಶಾಂತಿ, ಆನಂದ. ಅದು ಸಿಗುವುದು ಕಲೋಪಾಸನೆಯ ಮೂಲಕ. ಅಂತಹ ಕಲೆಯನ್ನು ಬೆಳೆಸುತ್ತಿರುವ ಜಯಶ್ರೀ ರವಿ ಹೆಗಡೆಯವರಿಗೆ ದೇವರು ಆಯುರಾರೋಗ್ಯ ಭಾಗ್ಯಗಳನ್ನು ಕೊಟ್ಟು ಕರುಣಿಸಲಿ” ಎಂದರು.

ಲೇಖಕ ಹಾಗೂ ಅಂಕಣಕಾರ ಮಣ್ಣೆ ಮೋಹನ್ ರವರು ಮಾತನಾಡಿ “ಸುಮಾರು 5000 ವರ್ಷಗಳ ಹಿಂದೆ ಭರತಮುನಿಯಿಂದ ರಚಿಸಲ್ಪಟ್ಟ ನಾಟ್ಯಶಾಸ್ತ್ರವನ್ನು ಇಲ್ಲಿಯವರೆಗೂ ನಮಗೆ ತಂದುಕೊಟ್ಟವರು ಯಾರು? ಅದು ನಮ್ಮ ಪೂರ್ವಜರು. ನೆನ್ನೆ ನಡೆದದ್ದು ಇಂದಿಗೆ ಭೂತಕಾಲ, ಇಂದು ನಡೆದದ್ದು ನಾಳೆಗೆ ಭೂತಕಾಲ ಎನ್ನುವ ಕಾಲಘಟ್ಟದಲ್ಲಿ ಬದುಕುತ್ತಿರುವ ನಾವುಗಳು, ನಾಲ್ಕೈದು ಸಾವಿರ ವರ್ಷಗಳ ಹಿಂದಿನ ನೆನಪುಗಳನ್ನು ಇಲ್ಲಿಯವರೆಗೂ ಜತನದಿಂದ ಕಾಪಾಡಿಕೊಂಡು ಬಂದಿರುವುದೇ ಈ ನಾಡಿನ, ಈ ದೇಶದ ಹಾಗೂ ನಮ್ಮೆಲ್ಲರ ಹೆಮ್ಮೆಯಾಗಿದೆ. ಇಂತಹ ಶ್ರೇಷ್ಠ ಸಂಸ್ಕೃತಿ ಮತ್ತು ಪರಂಪರೆಯ ವಾರಸುದಾರರು ನಾವಾಗಿದ್ದೇವೆ.

“ಇದನ್ನು ಇನ್ನೂ ಸಾವಿರಾರು ವರ್ಷಗಳ ಕಾಲ ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಮಕ್ಕಳಿಗೆ ಇಂತಹ ಸಂಸ್ಕೃತಿಯನ್ನು ಕಳಿಸುವುದರ ಮೂಲಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸೋಣ. ಡಾ. ಜಯಶ್ರೀ ರವಿ ಹೆಗಡೆಯವರ ಲಯಾಭಿನಯ ಸಂಸ್ಥೆ ಇಂತಹ ಕೆಲಸವನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಯಶಸ್ವಿಯಾಗಿ ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಚಿಕ್ಕ ಹಳ್ಳಿಯೊಂದರಿಂದ ಬಂದ ಜಯಶ್ರೀ ಅವರು ತಮ್ಮ ಪರಿಶ್ರಮದಿಂದ ಅತ್ಯಂತ ದೊಡ್ಡ ಸಾಧನೆ ಮಾಡಿದ್ದಾರೆ ಅವರು ಎಲ್ಲರಿಗೂ ಸ್ಪೂರ್ತಿಯಾಗಲಿ” ಎಂದು ತಿಳಿಸಿದರು.

ಎಸ್ ಎ ಬಿ ಐ ಸಿ ಹಿರಿಯ ವಿಜ್ಞಾನಿ ಹಾಗೂ ಲಯಾಬಿನಯ ಸಂಸ್ಥೆಯ ಕಾರ್ಯದರ್ಶಿಗಳು ಆದ ಡಾ.ರವಿ ಹೆಗಡೆಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಗುರು ವಿದ್ವಾನ್ ಡಾ. ಜಯಶ್ರೀ ರವಿ ಹೆಗಡೆಯವರು ವಂದನಾರ್ಪಣೆ ನೆರವೇರಿಸಿದರು. ಶೋಭಾ ಸದಾಶಿವ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ಲಯಾಭಿನಯ ಸಂಸ್ಥೆಯ ಮಕ್ಕಳಿಂದ ಗಣೇಶ ವಂದನೆ, ಅಲರಿಪು, ಜತಿಸ್ವರ, ವರ್ಣ, ಪದ, ಶಿವಸ್ತುತಿ, ಜಾವಳಿ, ಅಷ್ಟ ಲಕ್ಷ್ಮಿ ಮತ್ತು ತಿಲ್ಲಾನ ಮತ್ತು ಮಂಗಳ ನೃತ್ಯಗಳು ವೇದಿಕೆಯಲ್ಲಿ ಅನಾವರಣಗೊಂಡವು. ಸಭಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಮಣ್ಣೆ ಮೋಹನ್