Belagavi News In Kannada | News Belgaum

ಒಂದು ದೇವಾಲಯದ ಕಥೆ-ವ್ಯಥೆ

ಒಂದು ದೇವಾಲಯದ ಕಥೆ-ವ್ಯಥೆ

ಇದು ಮೈಸೂರು ಜಿಲ್ಲೆ ಕೆ.ಆರ್.ನಗರ ಸಮೀಪದಲ್ಲಿರುವ ಭೇರ್ಯ ಗ್ರಾಮದ ಪುರಾತನ ಐತಿಹಾಸಿಕ ಶ್ರೀ ಚನ್ನಕೇಶ್ವರ ದೇವಾಲಯದ ದುರಂತ ಕಥೆ..

ಈ ದೇವಾಲಯವು ಮೈಸೂರು-ಹಾಸನ, ಕೆ.ಆರ್.ಪೇಟೆ -ರಾಮನಾಥಪುರ ಮುಖ್ಯ ರಸ್ತೆ ಸಂದಿಸುವ ಭೇರ್ಯ ಗ್ರಾಮದಲ್ಲಿದೆ. ಹಾಲಿ ಸಾಲಿಗ್ರಾಮ ತಾಲ್ಲೂಕಿಗೆ ಸೇರಲ್ಪಟ್ಟಿದೆ.

ಈ ದೇವಾಲಯವನ್ನು ಹೊಯ್ಸಳ ದೊರೆಗಳ (ಚೋಳ ದೊರೆಗಳು ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ) ಸಾಮಂತನಾಗಿದ್ದ ಭೈರ ಎಂಬ ಪಾಳೆಯಗಾರ ನಿರ್ಮಿಸಿದನು ಎಂದು ಹೇಳಲಾಗಿದೆ. ಭೈರ ಎಂಬ ಸಾಮಂತ ರಾಜ ಈ ಗ್ರಾಮ ನಿರ್ಮಿಸಿದ್ದರಿಂದ ಗ್ರಾಮಕ್ಕೆ ಭೇರ್ಯ ಎಂಬ ಹೆಸರು ಬಂದಿತು ಎಂದು ಹೇಳಲಾಗಿದೆ.

ಚನ್ನಕೇಶ್ವರ ದೇವಾಲಯವು ಕಾಲಕ್ರಮೇಣ ಕುಸಿದು ಬೀಳುವ ಹಂತ ತಲುಪಿತು. ಪ್ರಾಣಿಗಳು ದೇವಾಲಯದ ಮೇಲೆ ಏರಿ ಓಡಾಡಲಾರಂಬಿಸಿದವು. ಬಾರೀ ಮಳೆ ಬಿದ್ದ ಸಂದರ್ಭದಲ್ಲಿ ಮಳೆಯ ನೀರು ದೇವಾಲಯದೊಳಕ್ಕೆ ತುಂಬುತ್ತಿತ್ತು.

ಈ ದೇವಾಲಯದ ಅವ್ಯವಸ್ಥೆ ಕುರಿತಂತೆ ತಾಲ್ಲೂಕಿನ ಸಾಹಿತಿಗಳಾದ ಭೇರ್ಯ ರಾಮಕುಮಾರ್ 1985 ರ ದಿನಗಳಲ್ಲಿ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಚಿತ್ರಸಹಿತ ಲೇಖನಗಳನ್ನು ಬರೆದರು. ಸಾಹಿತಿಗಳಾದದಿ.ತೇ.ಸಿ.ವಿಶ್ವೇಶ್ವರಯ್ಯ ಅವರೂ ಸಹ ಹಲವು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದರು.

ನಂತರದ ದಿನಗಳಲ್ಲಿ ಸಾಹಿತಿ ಭೇರ್ಯ ರಾಮಕುಮಾರ್ ಹಾಗೂ ಜಾನಪದ ಕಲಾವಿದ ಹಾಗೂ ಕೆ.ಆರ್.ಪೇಟೆಯ ಆದಿಚುಂಚನಗಿರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ದಿ. ಸಿಂಗನಹಳ್ಳಿ ಸ್ವಾಮಿಗೌಡ ದೇವಾಲಯದ ಜೀರ್ಣೋದ್ದಾರಕ್ಕಾಗಿ ಒತ್ತಾಯಿಸಿ ಅಧಿಕಾರಸ್ಥರಿಗೆ ಪತ್ರ ಬರೆಯುವ ಚಳುವಳಿ ಸುಮಾರು ಹತ್ತು ವರ್ಷಗಳ ಕಾಲ ನಿರಂತರ ನಡೆಸಿದರು.

ಕೊನೆಗೂ ಪ್ರಾಚ್ಯವಸ್ತು ಇಲಾಖೆಯ ಗಮನ ಹರಿಸಿತು. ಅಂದಿನ ಸಂಸದ ಸಿ.ಹೆಚ್.ವಿಜಯಶಂಕರ್, ಶಾಸಕರಾದ ಸಾ.ರಾ.ಮಹೇಶ್, ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಗಮನನೀಡಿದ್ದರ ಫಲವಾಗಿ ಸಂಪೂರ್ಣ ವಿನಾಶದತ್ತ ಸಾಗಿದ್ದ ಶ್ರೀ ಚನ್ನಕೇಶವ ದೇವಾಲಯದ ಜೀರ್ಣೋದ್ದಾರ ಕಾರ್ಯ ಯಶಸ್ವಿಯಾಗಿ ನಡೆಯಿತು. ಹಾಳಾಗಿದ್ದ ಬಳಪದ ಕಲ್ಲುಗಳನ್ನು ಜೋಡಿಸಿ, ಸುಂದರವಾಗಿ ದೇವಾಲಯದ ಜೀರ್ಣೋದ್ದಾರ ಮಾಡಲಾಯಿತು. ದೇವಾಲಯದ ಸುತ್ತಲೂ ತಂತಿಬೇಲಿ ಹಾಕಿ, ಸದರಿ ದೇವಾಲಯವು ಪ್ರಾಚ್ಯವಸ್ತು ಇಲಾಖೆಗೆ ಸೇರಿದೆ. ಈ ಆವರಣಕ್ಕೆ ಅತಿಕ್ರಮ ಪ್ರವೇಶ ಕಾನೂನು ಪ್ರಕಾರ ಅಪರಾಧ ಎಂದು ನಾಮಫಲಕ ಹಾಕಲಾಯಿತು.

ಆದರೆ ಇದೀಗ ಜನರ ಹಾಗೂ ಸ್ಥಳೀಯ ಆಡಳಿತದ ಬೇಜವಬ್ದಾರಿ ಫಲವಾಗಿ ದೇವಾಲಯದ ಆವರಣದಲ್ಲಿ ಹುಲ್ಲು ಬೆಳೆದು ನಿಂತಿದೆ.ದೇವಾಲಯದ ರಕ್ಷಣೆಗೆ ಹಾಕಲಾಗಿದ್ದ ತಂತಿ ಬೇಲಿಯು ಸುತ್ತಲಿನ ಜನರು ತಮ್ಮ ಬಟ್ಟೆ ಒಣಗಿಹಾಕುವ ಸ್ಥಳವಾಗಿದೆ. ದೇವಾಲಯದ ಆವರಣ ಸಂಪೂರ್ಣ ಕಲುಷಿತಗೊಂಡಿದೆ.

ಶ್ರೀ ಚನ್ನಕೇಶ್ವರ ದೇವಾಲಯದ ಅವ್ಯವಸ್ಥೆ ನಿವಾರಣೆಗೆ ಸಾಲಿಗ್ರಾಮ ತಾಲ್ಲೂಕು ತಹಸೀಲ್ದಾರರು ಹಾಗೂ ಜಿಲ್ಲಾ ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು. ಸದರಿ ದೇವಾಲಯಕ್ಕೆ ಆಡಳಿತ ಉಸ್ತುವಾರಿ ಸಮಿತಿ ನೇಮಕ ಮಾಡಬೇಕು. ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿ, ಅಲ್ಲಿ ಪೂಜೆ ನಡೆಯುವ ವ್ಯವಸ್ಥೆ ಮಾಡಬೇಕು.ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಲಿ ಎಂದು ಸಾಹಿತಿ ಡಾ.ಭೇರ್ಯ ರಾಮಕುಮಾರ್ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.