Belagavi News In Kannada | News Belgaum

ಮೋಟಾರ ಸೈಕಲ್ ಮೇಲೆ ಯಾರೋ ಎಂಟು ಜನರು ಬಂದು ಮೋಟಾರ ಸೈಕಲಕ್ಕೆ ಅಡ್ಡಗಟ್ಟಿ ನಿಲ್ಲಿಸಿದ್ದಾರೆ.ನಂತರ ಅಣ್ಣ-ತಮ್ಮಂದಿರ ಮೇಲೆ ರಾಡಿನಿಂದ ಹಲ್ಲೆ

ಘಟಪ್ರಭಾ:  ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಲೋಳಸೂರ ಸರಹದ್ದಿಯಲ್ಲಿ ಬರುವ ಗೋಕಾಕ – ಘಟಪ್ರಭಾ (ಕರೆವ್ವ ಗುಡಿ ಹತ್ತಿರ) ರಸ್ತೆಯಲ್ಲಿ 500 ಗ್ರಾಂ (ಅರ್ಧ ಕೆ.ಜಿ) ಬಂಗಾರದ ಆಭರಣಗಳನ್ನು ಹಾಗೂ 2,80,000 ರೂಪಾಯಿಯನ್ನು ಯಾರೋ ದುಷ್ಕರ್ಮಿಗಳು
ದೋಚಿಕೊಂಡು ಪರಾರಿಯಾದ ಘಟನೆ ನಿನ್ನೆ ರಾತ್ರಿ 8:30 ಕ್ಕೆ ನಡೆದಿದೆ.ನಿನ್ನೆ ಎಂದಿನಂತೆ ಗೋಕಾಕದಲ್ಲಿ ಇರುವ ತಮ್ಮ ಬಂಗಾರದ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ತಾಲೂಕಿನ ಶಿಂಧಿಕುರಬೇಟ ಗ್ರಾಮದ ಅಣ್ಣ ತಮ್ಮಂದಿರರಾದ ಸಂಜೀವ ಸದಾನಂದ ಪೋತದಾರ ಹಾಗೂ ರವೀಂದ್ರ ಸದಾನಂದ ಪೋತದಾರ ಅವರು ಬೈಕ್‌ ಮೇಲೆ ತಮ್ಮೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಇವರಿಬ್ಬರೂ ವ್ಯಾಪಾರ ಮಾಡಿಕೊಂಡು ತಮ್ಮ ಬ್ಯಾಗಿನಲ್ಲಿ 500 ಗ್ರಾಂ. ಬಂಗಾರದ ಆಭರಣಗಳನ್ನು ಹಾಗೂ 2,80,000 ರೂಪಾಯಿಯನ್ನು ತೆಗೆದುಕೊಂಡು ತಮ್ಮ ಮೋಟಾರ ಸೈಕಲ್ ಮೇಲೆ ಬರುತ್ತಿದ್ದಾರೆ. ಈ ವೇಳೆ ಲೋಳಸೂರ ಗ್ರಾಮದ ಹತ್ತಿರ ಬರುತ್ತಿದ್ದಂತೆಯೇ ರಾತ್ರಿ 8-30 ರ ಸುಮಾರಿಗೆ ಗೋಕಾಕ ಕಡೆಯಿಂದ ನಾಲ್ಕು ಮೋಟಾರ ಸೈಕಲ್ ಮೇಲೆ ಯಾರೋ ಎಂಟು ಜನರು ಬಂದು ಮೋಟಾರ ಸೈಕಲಕ್ಕೆ ಅಡ್ಡಗಟ್ಟಿ ನಿಲ್ಲಿಸಿದ್ದಾರೆ.ನಂತರ ಅಣ್ಣ-ತಮ್ಮಂದಿರ ಮೇಲೆ ರಾಡಿನಿಂದ ಹಲ್ಲೆ ಮಾಡಿ ಬಂಗಾರ ಇದ್ದ ಬ್ಯಾಗ ಹಾಗೂ ಹಣ ತೆಗೆದುಕೊಂಡು ಪರಾರಿಯಾಗಿದ್ದು, ಗಾಯಾಳುಗಳು ಘಟಪ್ರಭಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ. ಘಟನಾ ಸ್ಥಳಕ್ಕೆ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಸಂಜೀವ ಪಾಟೀಲ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಾನಿಂಗ ನಂದಗಾವ ಮತ್ತು ಚಿಕ್ಕೋಡಿ ಡಿಎಸ್ಪಿ ಬಸವರಾಜ ಯಲಿಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಘಟಪ್ರಭಾ ಪಿಐ ಶ್ರೀಶೈಲ ಬ್ಯಾಕೋಡ ಹಾಗೂ ಸಿಬ್ಬಂದಿ ಇದ್ದರು.