Belagavi News In Kannada | News Belgaum

ಕೇಂದ್ರ ಕಾರಾಗೃಹದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ”

ಕೇಂದ್ರ ಕಾರಾಗೃಹದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ”

ಇತ್ತೀಚೆಗೆ ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಮುಖ್ಯ ಅಧೀಕ್ಷಕರಾದ ಶ್ರೀ ಕೃಷ್ಣಕುಮಾರ ಇವರ ಮಾರ್ಗದರ್ಶನದಲ್ಲಿ “ವಿಶ್ವ ಸಾಕ್ಷರತಾ ದಿನಾಚರಣೆ” ಕಾರ್ಯಕ್ರಮ ಜರುಗಿತು. ಸದರಿ ಕಾರ್ಯಕ್ರಮವು ಜಿಲ್ಲಾ ಲೋಕ ಶಿಕ್ಷಣ ಸಮೀತಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಭಾರಿ ಪ್ರಾಚಾರ್ಯರಾದ ಶ್ರೀ ಎಸ್.ಪಿ.ದಾಸಪ್ಪನವರ, ಹಿರಿಯ ಉಪನ್ಯಾಸಕರಾದ ಶ್ರೀ ಎನ್.ಆರ್.ಪಾಟೀಲ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಎ.ಎಮ್.ಜಯಶ್ರೀ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಮಹಾದೇವ ಮೇದಾರ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಸಹಾಯಕ ಅಧೀಕ್ಷಕರಾದ ಶ್ರೀ ಶಹಾಬುದ್ದೀನ ಕೆ. ವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಎಸ್.ಪಿ.ದಾಸಪ್ಪನವರ ಮಾತನಾಡಿ ಕಲಿಕೆಗೆ ಯಾವುದೇ ವಯಸ್ಸಿನ ನಿರ್ಬಂಧವಿರುವುದಿಲ್ಲ. ಕಲಿಕೆಯು ನಮ್ಮಲ್ಲಿರುವ ಜ್ಞಾನವನ್ನು ಹೆಚ್ಚಿಸುತ್ತದೆ. ತಾವೆಲ್ಲ ಆಕಸ್ಮಿಕ ಘಟನೆಯ ನಿಮಿತ್ಯ ಜೈಲಿಗೆ ಬಂದಿರಬಹುದು, ಕಾರಣ ಇಲ್ಲಿರುವ ಸಮಯದ ಸದುಪಯೋಗ ಪಡಿಸಿಕೊಂಡು ಅಕ್ಷರಸ್ಥರಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟ ಕಾರಾಗೃಹ ಇಲಾಖೆಯ ಕಾರ್ಯ ಸ್ತುತ್ಯಾರ್ಹ ಎಂದು ಹೇಳಿದರು. ತಾವು ಬಿಡುಗಡೆ ಹೊಂದಿದ ನಂತರ ತಮ್ಮ ಕುಟುಂಬದಲ್ಲಿರುವ ಹಾಗೂ ಸಮಾಜದಲ್ಲಿರುವ ಇತರ ಅನಕ್ಷರಸ್ಥರಿಗೆ ಅಕ್ಷರ ಅಭ್ಯಾಸ ಮಾಡಿಸಿ ಸಾಕ್ಷರರನ್ನಾಗಿಸಬೇಕು ಎಂದು ತಿಳಿಸಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಎ.ಎಮ್. ಜಯಶ್ರೀ ಮಾತನಾಡಿ “ವಿಶ್ವ ಸಾಕ್ಷರತಾ ದಿನಾಚರಣೆ” ಅರ್ಥ ಹಾಗೂ ಇತಿಹಾಸದ ಕುರಿತು ಮಾಹಿತಿ ನೀಡಿದರು. ಲೋಕ ಶಿಕ್ಷಣ ನಿರ್ದೇಶನಾಲಯದ ಮಾರ್ಗದರ್ಶನದಲ್ಲಿ ನವೆಂಬರ್ 2021 ರಿಂದ ಮೇ 2022 ವರೆಗೆ ಕೇಂದ್ರ ಕಾರಾಗೃಹದ ಅಧಿಕಾರಿಗಳ ಸಹಕಾರದೊಂದಿಗೆ “ಕಲಿಕೆಯಿಂದ ಬದಲಾವಣೆ” ಎಂಬ ಶೀರ್ಷಿಕೆಯಡಿ ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ 20 ಜನ ವಿದ್ಯಾವಂತ ಬಂಧಿಗಳಿಗೆ ಇಲಾಖೆ ವತಿಯಿಂದ ತರಬೇತಿ ನೀಡಿ ಕಾರಾಗೃಹದ ಶಿಕ್ಷಕರ ಮಾರ್ಗದರ್ಶನದಲ್ಲಿ ಅನಕ್ಷರಸ್ಥ ನಿವಾಸಿಗಳನ್ನು ಸಾಕ್ಷರರನ್ನಾಗಿಸುವ ಯೋಜನೆ ತುಂಬಾ ಉತ್ತಮ ರೀತಿಯಲ್ಲಿ ಯಶಸ್ವಿಯಾಗಿದೆ. ಹಾಗೂ ಇಲಾಖೆ ವತಿಯಿಂದ ಕಲಿಕಾ ಸಾಮಗ್ರಿಗಳಾದ ಪೆನ್ನು, ಪೆನ್ಸಿಲ್, ನೋಟಬುಕ್ ಹಾಗೂ ಪುಸ್ತಕಗಳನ್ನು ಉಚಿತವಾಗಿ ನೀಡಲಾಗಿದೆ ಹಾಗೂ ಸದರಿ ಕಾರ್ಯಕ್ರಮದಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸಿದ ವಿದ್ಯಾವಂತ ಬಂಧಿಗಳಿಗೆ ಇಲಾಖೆಯ ವತಿಯಿಂದ ರೂ. 25000/- ಗಳ ಗೌರವಧನ ನೀಡಲಾಗಿದೆ. ಕಾರ್ಯಕ್ರಮ ಯಶಸ್ವಿಗೆ ಸಹಕಾರ ನೀಡಿದ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಶ್ರೀ ಕೃಷ್ಣಕುಮಾರ ಹಾಗೂ ಎಲ್ಲ ಸಿಬ್ಬಂದಿಯವರಿಗೆ ಧನ್ಯವಾದ ತಿಳಿಸಿದರು.

ಶ್ರೀ ಎನ್.ಆರ್.ಪಾಟೀಲ ಮಾತನಾಡಿ ಕಾರಾಗೃಹದಲ್ಲಿ ತಾವು ಅನುಭವಿಸುತ್ತಿರುವ ಶಿಕ್ಷೆ ಕೇವಲ ತಾತ್ಕಾಲೀಕವಾದದ್ದು, ಮುಂದಿನ ದಿನಗಳಲ್ಲಿ ತಾವೆಲ್ಲ ಇಲ್ಲಿಂದ ಬಿಡುಗಡೆಯಾಗಿ ಹೋಗಲೇ ಬೇಕು. ಕಾರಣ ಇಲ್ಲಿರುವ ಸಮಯದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ಶ್ರೀ ಶಹಾಬುದ್ದೀನ ಕೆ. ಮಾತನಾಡಿ “ವಿದ್ಯೆಯೇ ಬಾಳಿನ ಬೆಳಕು” ಎಂಬ ನಾಣ್ಣುಡಿಯಂತೆ ತಾವೆಲ್ಲ ನಿಷ್ಠೆಯಿಂದ ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಕ್ಷರಸ್ಥರಾಗಿರುವಿರಿ. ಇದು ತಮ್ಮ ಜೀವನಕ್ಕೆ ದಾರಿ ದೀಪವಾಗಲಿ. ಹಾಗೂ ಸಾಕ್ಷರತಾ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಸರ್ವರಿಗೂ ಧನ್ಯವಾದ ತಿಳಿಸಿದರು.

ಕಾರಾಗೃಹದಲ್ಲಿ ಆರಂಭಿಸಲಾದ 6 ತಿಂಗಳ ಸಾಕ್ಷರತಾ ಕಾರ್ಯಕ್ರಮದಲ್ಲಿ ಒಟ್ಟು 212 ಜನ ನಿವಾಸಿಗಳು ಪ್ರವೇಶ ಪಡೆದಿದ್ದು ಅದರಲ್ಲಿ 187 ಜನ (170 ಗಂಡು+17 ಹೆಣ್ಣು) ನಿವಾಸಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಯಲ್ಲಿ ಪಾಸಾದ ಹಾಗೂ ಬೋಧಕರಾಗಿ ಕಾರ್ಯನಿರ್ವಹಿಸಿದ ನಿವಾಸಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ವೇದಿಕೆಯಲ್ಲಿ ಶ್ರೀ ಬಿ.ಎಂ.ಪಾಟೀಲ, ಶ್ರೀ ಎಚ್.ಎಸ್.ಭಜಂತ್ರಿ, ಶ್ರೀ ಸುಭಾಷ ವಾಗುಕರ ಹಾಗೂ ಶ್ರೀಮತಿ ಎಸ್.ಎಂ. ಕೋಲ್ಕಾರ ಹಾಗೂ ಜೈಲರಾದ ಶ್ರೀ ಭಂಡಾರಿ ಉಪಸ್ಥಿತರಿದ್ದರು. ಉಪಾಧ್ಯಾಯರಾದ ಶ್ರೀ ಶಶಿಕಾಂತ ಯಾದಗುಡೆ, ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.