Belagavi News In Kannada | News Belgaum

ಕೇಂದ್ರ ಕಾರಾಗೃಹದಲ್ಲಿ ಪೇಂಟಿಂಗ ತರಬೇತಿಯ ಸಮಾರೋಪ ಕಾರ್ಯಕ್ರಮ

ಬೆಳಗಾವಿ : ಇತ್ತೀಚಿಗೆ ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಮುಖ್ಯ ಅಧೀಕ್ಷಕರಾದ ಶ್ರೀ ಕೃಷ್ಣಕುಮಾರ ಇವರ ಮಾರ್ಗದರ್ಶನದಲ್ಲಿ ಪೇಂಟಿಂಗ ತರಬೇತಿಯ ಸಮಾರೋಪ ಸಮಾರಂಭ ಜರುಗಿತು. ಸದರಿ ಕಾರ್ಯಕ್ರಮವು ಏಷಿಯನ್ ಪೇಂಟ್ಸ ಕಲರ್ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ತಾಂತ್ರಿಕ ಅಧಿಕಾರಿ ಶ್ರೀ ಸುನೀಲ ಪೂಜಾರ ಹಾಗೂ ತರಬೇತುದಾರ ಶ್ರೀ ಲಕ್ಷ್ಮಣ ಕಾಂಬಳೆ ಆಗಮಿಸಿದರು. ಅಧ್ಯಕ್ಷತೆಯನ್ನು ಶ್ರೀ ಶಹಾಬುದ್ಧಿನ ಕೆ. ವಹಿಸಿದರು.
ಶ್ರೀ ಸುನೀಲ ಪೂಜಾರ ಮಾತನಾಡಿ ಏಷಿಯನ್ ಪೇಂಟ್ಸ್ ಸಂಸ್ಥೆಯು ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಬಂಧಿಗಳಿಗಾಗಿ ಪೇಂಟಿಂಗ್ ತರಬೇತಿಯನ್ನು ಉಚಿತವಾಗಿ ಆಯೋಜಿಸಲಾಗುತ್ತಿದ್ದು ಇದರಲ್ಲಿ ಬಂಧಿಗಳು ತುಂಬಾ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಈ ತರಬೇತಿ ಪಡೆದು ಬಿಡುಗಡೆ ನಂತರ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲೀ ಎಂಬುದು ಏಷಿಯನ್ ಪೇಂಟ್ಸ ಸಂಸ್ಥೆಯ ಉದ್ದೇಶವಾಗಿದೆ. ಕಾರಣ ಈ ಕಾರಾಗೃಹದಲ್ಲಿ 2ನೇ ಬಾರಿ ಪೇಂಟಿಂಗ್ ತರಬೇತಿಯನ್ನು ಆಯೋಜಿಸಲಾಗುತ್ತಿದ್ದು ಇದರ ಯಶಸ್ವಿಗೆ ಕಾರಣದಾರ ಮುಖ್ಯ ಅಧೀಕ್ಷಕರು ಶ್ರೀ ಕೃಷ್ಣಕುಮಾರ ಹಾಗೂ ಸಿಬ್ಬಂದಿಯವರಿಗೆ ಧನ್ಯವಾದ ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಶ್ರೀ ಶಹಾಬುದ್ದೀನ ಕೆ. ಮಾತನಾಡಿ ತಾವೆಲ್ಲ ಕಾರಾಗೃಹದಲ್ಲಿ ಆಯೋಜಿಸಲಾಗುವ ವಿವಿಧ ತರಬೇತಿಗಳಲ್ಲಿ ನಿಷ್ಠೆಯಿಂದ ಭಾಗವಹಿಸಿಬೇಕು. ಕಾರಾಗೃಹ ಒಂದು ಶಾಲೆಯಿದ್ದಂತೆ ಇಲ್ಲಿ ಅನೇಕ ವಿಷಯಗಳನ್ನು ತಮಗಾಗಿ ಕಲಿಸಲಾಗುತ್ತಿದೆ. ಕಾರಣ ತಾವೆಲ್ಲ ಇದರ ಸದುಪಯೋಗ ಪಡಿಸಿಕೊಳ್ಳಬೇಕು. ತಾವು ಜೈಲಿನ ಹೊರಗಡೆ ಇದ್ದಾಗ ಕೆಲಸದ ಒತ್ತಡದಲ್ಲಿ ಇಂತಹ ತರಬೇತಿಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇವು ತಮ್ಮನ್ನ ಆರ್ಥಿಕವಾಗಿ ಸಬಲರಾಗಿಸುತ್ತವೆ. ಹಾಗೂ ತರಬೇತಿ ಆಯೋಜಿಸಿದ ಏಷಿಯನ್ ಪೇಂಟ್ಸ್‍ಗೆ ಧನ್ಯವಾದ ತಿಳಿಸಿದರು.
ಉಪಾಧ್ಯಾಯರಾದ ಶ್ರೀ ಎಸ್.ಎಸ್. ಯಾದಗುಡೆ ಮಾತನಾಡಿ ಈ ಸಂಸ್ಥೆಯ ಮುಖ್ಯ ಅಧೀಕ್ಷಕರಾದ ಶ್ರೀ ಕೃಷ್ಣಕುಮಾರ ಇವರು ಕಳೆದ 03 ವರ್ಷಗಳಲ್ಲಿ ಬಂಧಿಗಳಿಗೆ ಸುಮಾರು 08 ಕೌಶಲ್ಯ ಅಭಿವೃದ್ದಿ ತರಬೇತಿಗಳನ್ನು, ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಹಾಗೂ ಯೋಗ ತರಬೇತಿಗಳನ್ನು ನಿವಾಸಿಗಳಿಗಾಗಿ ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನು ಅನೇಕ ಅನೇಕ ತರಬೇತಿಗಳನ್ನು ಹಮ್ಮಿಕೊಳ್ಳಲಿದ್ದು ಇವುಗಳ ಸದುಪಯೋಗ ಪಡೆದು ಬಿಡುಗಡೆ ಹೊಂದಿ ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು. ಸದರಿ ತರಬೇತಿ 07 ದಿನಗಳವರೆಗೆ ಇದರಲ್ಲಿ ಒಟ್ಟು 34 ಜನ ಬಂಧಿಗಳು ಭಾಗವಹಿಸಿದರು. ತರಬೇತಿಯಲ್ಲಿ ಪಾಲ್ಗೊಂಡ ಎಲ್ಲ ಬಂಧಿಗಳಿಗೆ ಏಷಿಯನ್ ಪೇಂಟ್ಸ ವತಿಯಿಂದ ಬ್ಯಾಗ, ಕ್ಯಾಪ್, ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ನಿವಾಸಿಗಳಾದ ರಂಜಿತ ಹಾಗೂ ಮೋಜಿಸ್ ವಿನುಕೊಂಡ ತರಬೇತಿ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಏಷಿಯನ್ ಪೇಂಟ್ಸ್ ನ ರೋಹಿತ ಪಾಟೀಲ, ರೋಹನ ಪಾಟೀಲ ಹಾಗೂ ಪಶು ಪರಿವೀಕ್ಷಕರಾದ ಶ್ರೀ ಎಮ್.ಎಸ್. ಹಿರೇಮಠ ಉಪಸ್ಥಿತರಿದ್ದರು.//////