Belagavi News In Kannada | News Belgaum

ಸಮಾಜ ಸೇವೆ ಜೀವನದ ಒಂದು ಭಾಗವಾಗಲಿ- ಗಣಪತರಾಜ ಚೌಧರಿ

ಬೆಳಗಾವಿ: ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸಬಹುದು. ಆದರೆ ಗಳಿಸಿದ ಹಣವನ್ನು ಕೂಡಿಸಿಡುವ ಬದಲು ದಾನ ಧರ್ಮದಲ್ಲಿ ತೊಡಗಿಸಿ ಸಮಾಜ ಸೇವೆಗೆ ಮುಂದಾಗಬೇಕು. ಸಮಾಜಸೇವೆ ಜೀವನದ ಒಂದು ಭಾಗವಾಗಬೇಕೆಂದು ಜೈನ ಇಂಟರ್‍ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ ಅಪೆಕ್ಸ ಚೇರಮನ್ ಗಣಪತರಾಜ ಚೌಧರಿ ಅವರು ಇಂದಿಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಶನಿವಾರದಂದು ಉದ್ಯಮಬಾಗದಲ್ಲಿ ನೂತನವಾಗಿ ನಿರ್ಮಿಸಲಾದ ಜಿತೋ ಗೋಪಾಲ ಜಿನಗೌಡ ವಿದ್ಯಾರ್ಥಿನಿ ವಸತಿ ನಿಲಯ ಮತ್ತು ಜಿತೋ ಬೆಳಗಾವಿ ವಿಭಾಗದ ಕಾರ್ಯಾಲಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಜನ್ಮದಲ್ಲಿ ಮಾಡಿದ ಪುಣ್ಯದ ಫಲವಾಗಿ ಇಂದು ನಾವೆಲ್ಲರೂ ಉತ್ತಮ ಜೀವನ ನಡೆಸುತ್ತಿದ್ದೇವೆ. ಮುಂದಿನ ಜನ್ಮದಲ್ಲಿಯೂ ಸಹ ಉತ್ತಮ ಜೀವನ ಪಡೆಯಬೇಕಾದರೆ ಈ ಜನ್ಮದಲ್ಲಿಯೂ ಸಹ ದಾನ ಧರ್ಮಗಳನ್ನು ಮಾಡಬೇಕೆಂದು ಅವರು ತಿಳಿಸಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಮಾತನಾಡಿ, ಜಿತೋ ಸಂಸ್ಥೆಯು ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಳುತ್ತ ತನ್ನ ಸಮಾಜ ಸೇವೆಯನ್ನು ಮಾಡುತ್ತ ಬಂದಿದೆ. ಇದೀಗ ವಿದ್ಯಾರ್ಥಿನಿ ನಿಲಯವನ್ನು ಪ್ರಾರಂಭಿಸಿದೆ. ಇದೇ ಮಾದರಿಯಲ್ಲಿ ಹೊಸ ಯೋಜನೆಯನ್ನು ಹಾಕಿಕೊಂಡಲ್ಲಿ ಅವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದೆಂದು ಅವರು ತಿಳಿಸಿದರು.
ಸಮಾರಂಭದ ಇನ್ನೋರ್ವ ಅತಿಥಿ ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾತನಾಡಿ, ಜಿತೋ ಸಂಸ್ಥೆಯು ಸಮಾಜ ಸೇವೆಗೆ ಒಂದು ಮಾದರಿಯಾದ ಸಂಸ್ಥೆಯಾಗಿದೆ. ಈ ಸಂಸ್ಥೆಯ ಸದಸ್ಯರು ಯಾವುದೇ ಫಲಾಪೇಕ್ಷೆವಿಲ್ಲದೇ ಕೆಲಸ ಮಾಡುತ್ತಿರುವುದರಿಂದ ಇಂದು ಈ ಸಂಸ್ಥೆಯು ಹೆಮ್ಮರವಾಗಿ ಬೆಳೆಯುವುದಲ್ಲದೇ ಜೈನ ಸಮಾಜದ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದೆ. ಸಂಸ್ಥೆಯು ಇದೆ ರೀತಿ ತನ್ನ ಕಾರ್ಯವನ್ನು ಮುಂದುವರೆಸಲಿ ಎಂದು ಅವರು ಹಾರೈಸಿದರು.
ಸಮಾರಂಭದಲ್ಲಿ ರಾಷ್ಟ್ರೀಯ ಅಲ್ಪ ಸಂಖ್ಯಾತ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ, ಜಿತೋ ವಸತಿ ನಿಲಯದ ದಾತಾರ ಗೋಪಾಲ ಜಿನಗೌಡ,ಜಿತೋ ಕೆಕೆಜಿ ವಲಯದ ಚೇರಮನ್ ನರೇಂದ್ರಸಿಂಗ ಸಾಮರ, ಅಪೇಕ್ಸ್ ನಿರ್ದೇಶಕ ಸತೀಶ ಮೆಹತಾ, ಜಿತೋ ಅಪೆಕ್ಸ ಅಧ್ಯಕ್ಷ ಅಭಯ ಶ್ರೀಮಲ್ ಮೊದಲಾದವರು ಮಾತನಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಮಾರಂಭದಲ್ಲಿ ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಪುಷ್ಪಕ ಹನಮಣ್ಣವರ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮನೋಜ ಸಂಚೇತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಕೆಜಿ ವಲಯದ ಕಾರ್ಯದರ್ಶಿ ವಿಕ್ರಮ ಜೈನ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ದಾನ ನೀಡಿದ ಗೋಪಾಲ ಜಿನಗೌಡ ಪರಿವಾರದವನ್ನು, ಭೂಮಿ ದಾನ ಮಾಡಿದ ಶಾಂತಿ ಫೋಮ್ಯಾಕ್ ಸಂಸ್ಥೆಯ ನಿರ್ದೇಶಕರಾದ ಶಾಂತಿಲಾಲಜಿ ಪೋರವಾಲ,ಸಂತೋಷ ಪೋರವಾಲ, ಸರ್ವೆಶ ಪೋರವಾಲ , ಹಾಗೂ ಜಿತೋ ಕಾರ್ಯಾಲಯಕ್ಕೆ ದಾನ ನೀಡಿದ ಮನೋಜ ಸಂಚೇತಿ ಪರಿವಾರದವನ್ನು ಮತ್ತು ಇತರೆ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಾರಂಭಕ್ಕೆ ವಿವಿಧ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರುಮ ಗಣ್ಯರು ಆಗಮಿಸಿದ್ದರು./////