Belagavi News In Kannada | News Belgaum

ಕಾಂಗ್ರೆಸ್ ಅಭಿವೃದ್ಧಿ ಪರವಾಗಿರುವ ಪಕ್ಷ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಬೆಳಗಾವಿ: ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಪರವಾಗಿರುವ ಪಕ್ಷ, ದೇಶದ ಅಖಂಡತೆಯನ್ನು ಕಾಪಾಡಿರುವಂತ ಪಕ್ಷವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಖಾನಾಪುರ್ ಪಟ್ಟಣದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ‌ ಹಾಗೂ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಮೊದಲು ಬೆಳಗಾವಿ ಭಾಷೆ ರಾಜಕಾರಣವಾಗಿತ್ತು. ಆದರೆ ಈಗ ಶಾಸಕಿ ಅಂಜಲಿ ನಿಂಬಾಳ್ಕರ್ ಅಭಿವೃದ್ಧಿ ಕಾರ್ಯದಿಂದಾಗಿ ಕ್ಷೇತ್ರದಲ್ಲಿ ಜನ ಅಭಿವೃದ್ಧಿ ಪರವಾಗಿ ನಿಂತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಮೂರು ಪಕ್ಷಗಳಿಂದ ಕಾರ್ಯಕರ್ತರು ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದರು.

ಸಮಾನತೆ, ಐಕ್ಯತೆ ಮತ್ತು ಅಭಿವೃದ್ಧಿ  ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಾಗಿದ್ದು ಈ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯತೆ ಇದೆ. ಕಾಂಗ್ರೆಸ್ ಪಕ್ಷದ ಶಕ್ತಿಯಾಗಿ ನಿಲ್ಲುವ ಮೂಲಕ 2023 ರಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ತಿಳಿ ಹೇಳಿದರು.
ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಮಾತನಾಡಿ, ನನ್ನ ಕ್ಷೇತ್ರ ಯಾವುದೇ ಭಾಷೆ ಮತ್ತು ಜಾತಿ ರಾಜಕಾರಣ ಮಾಡಿಲ್ಲ. ನನಗೆ ಕನ್ನಡ ಮತ್ತು ಮರಾಠಿ ಜನರ ಅಪಾರ ಪ್ರೀತಿ ನನಗೆ ಸಿಕ್ಕಿದೆ. ಅವರ ಆಶೀರ್ವಾದದಿಂದಾಗಿ ನಾನು ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಾಡಲು ಸಾಧ್ಯವಾಗಿದೆ. 100 ಹಾಸಿಗೆಗಳ ಆಸ್ಪತ್ರೆ ಆಗಿರಬಹುದು ಬಸ್ ನಿಲ್ದಾಣವಾಗಿರಬಹುದು ಕೋವಿಡ್ ಸಮಯದಲ್ಲಿ ನನ್ನ ಕ್ಷೇತ್ರ ಕಡಿಮೆ ಹಾನಿ ಉಂಟಾಗಿದ್ದು ನನಗೆ ಸಮಾಧಾನ ತಂದಿದೆ ಎಂದರು.

ಕಾಂಗ್ರೆಸ್ ಪಕ್ಷದಿಂದಲೇ ದೇಶದ ಅಭಿವೃದ್ಧಿ ಮತ್ತು ರಾಜ್ಯದ ಅಭಿವೃದ್ಧಿ ಆಗಲು ಸಾಧ್ಯ ಎಂದು ನನ್ನ ವಿಶ್ವಾಸವಾಗಿದೆ. ಈ ಸಂದರ್ಭದಲ್ಲಿ ಅನೇಕ ವಿರೋಧ ಪಕ್ಷಗಳು ಕಾಂಗ್ರೆಸ್ ಪಕ್ಷದ ಕೊಡುಗೆಗಳ ಬಗ್ಗೆ ಪ್ರಶ್ನೆಯನ್ನು ಮಾಡುತ್ತಾರೆ. ಆ ಕೊಡುಗೆಯಲ್ಲಿಯೇ ಪ್ರಧಾನ ಮಂತ್ರಿಗಳು ಮತ್ತು ಗೃಹ ಮಂತ್ರಿಗಳು ಕಾಂಗ್ರೆಸ್ ಕಟ್ಟಿರುವ ಆಸ್ಪತ್ರೆಗಳು ಮತ್ತು ಶಾಲೆಗಳಲ್ಲಿ ತಮ್ಮ ಆರೋಗ್ಯ ಮತ್ತು ಶಿಕ್ಷಣವನ್ನು ಪಡೆದಿದ್ದಾರೆ. ಇದನ್ನು ನಾನು ಅವರಿಗೆ ನೆನಪಿಸಲು ಇಚ್ಛೆಪಡುತ್ತೇನೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ಸಂದರ್ಭದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನೂರಾರು ಬಿಜೆಪಿ ಕಾರ್ಯಕರ್ತರನ್ನು  ಪಕ್ಷದ ಶಾಲು ಹಾಕುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಅನೇಕ ಕಾಂಗ್ರೆಸ್‌ ಮುಖಂಡರು ಸೇರಿದಂತೆ ಕಾರ್ಯಕರ್ತರು ಇದ್ದರು.