Belagavi News In Kannada | News Belgaum

ಜ್ಞಾನಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ವತಿಯಿಂದ ಅದ್ದೂರಿ “ಕರುನಾಡು ಕವಿ -ಕಲಾವಿದರ ಸಮ್ಮೇಳನ 2022”

"ನಮ್ಮ ಶ್ರೀಮಂತ ಪರಂಪರೆಯನ್ನು ಕವಿ- ಕಲಾವಿದ-ಸಾಧಕರುಗಳು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು

ಬೆಂಗಳೂರು: ಗಾಂಧಿ ಭವನದ ಇಡೀ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಸಭಾಂಗಣದ ಹೊರಗಡೆಯೂ ಅಪಾರ ಜನಸ್ತೋಮ. ನಾಡಿನ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಸಾಧಕರ ಸಂಭ್ರಮ ಮುಗಿಲು ಮುಟ್ಟಿತ್ತು. ನಮ್ಮ ಜೀವಮಾನದಲ್ಲಿ ವೇದಿಕೆಯನ್ನೇರಿ ಪ್ರಶಸ್ತಿಗಳನ್ನು ಸ್ವೀಕರಿಸುತ್ತೇವೆಂದು ಕನಸು ಮನಸ್ಸಿನಲ್ಲಿಯೂ ಎಣಿಸಿರದ ಮುಗ್ಧ ಮನೋಭಾವ. ರೈತರು, ವೈದ್ಯರು, ಕವಿಗಳು, ಕಲಾವಿದರು, ಪರಿಸರವಾದಿಗಳು, ಪತ್ರಕರ್ತರು, ಶೈಕ್ಷಣಿಕ ಸಾಧಕರು –ಹೀಗೆ ಹತ್ತು ಹಲವಾರು ರಂಗಗಳಲ್ಲಿ ಸಾಧನೆಗೈದ ಸಾಧಕರ ಸಮ್ಮಿಲನ ಅಲ್ಲಿತ್ತು.

ಇದು ಬೆಂಗಳೂರಿನ ಗಾಂಧಿ ಭವನದಲ್ಲಿ “ಜ್ಞಾನಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ, ಬೆಂಗಳೂರು” ಹಾಗೂ “ಕರುನಾಡು ಹಣತೆ ಕವಿಬಳಗ ಮತ್ತು ಸಾಂಸ್ಕೃತಿಕ ಘಟಕ”, ಚಿತ್ರದುರ್ಗದ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ “ಕರುನಾಡು ಕವಿ -ಕಲಾವಿದರ ಸಮ್ಮೇಳನ 2022″ರ ದೃಶ್ಯ ವೈಭವ.

“ಕೊರೊನಾ ಸಂದರ್ಭದಲ್ಲಿ ಸಾವಿರಾರು ಜನ ವಲಸೆ ಕಾರ್ಮಿಕರು ಊಟವಿಲ್ಲದೆ ನರಳಿದರು. ಅಂತಹ ಸಂದರ್ಭದಲ್ಲಿ ಅವರ ಕೈ ಹಿಡಿಯದ ಜನಪ್ರತಿನಿಧಿಗಳು ಮತ್ತು ಸರ್ಕಾರ, ಕವಿ- ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆ ಎಂಬುದು ಸುಳ್ಳು. ಹಾಗಾಗಿ ನಾಡಿನ ಸಂಘ- ಸಂಸ್ಥೆಗಳು ಮತ್ತು ಸಮಾಜ ಸೇವಕರೇ ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾದರೆ ಈ ನಾಡು ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗುತ್ತದೆ” ಎಂದು ಸಮಾಜ ಸೇವಕ ಜಗದೀಶ್ ಚೌಧರಿ ಅವರು ತಿಳಿಸಿದರು.

“ಕರುನಾಡು ಕವಿ- ಕಲಾವಿದರ ಸಮ್ಮೇಳನ 2022” ಅನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. “ಸಮಾಜದ ಸಂಕಷ್ಟ ಸಮಯದಲ್ಲಿ ರಾಜಕಾರಣಿಗಳನ್ನೊಳಗೊಂಡು ಎಲ್ಲರೂ, ಪಕ್ಷದ ಸಿದ್ಧಾಂತಗಳಿಂದ ಹೊರಬಂದು ಸಮಾಜಸೇವೆಯಲ್ಲಿ ತೊಡಗುವುವುದು ನಿಜವಾದ ಮಾನವೀಯತೆ” ಎಂದು ಧಾರ್ಮಿಕವಾಗಿ ನುಡಿದರು. ತಮ್ಮ ಭಾಷಣದುದ್ದಕ್ಕೂ ವ್ಯವಸ್ಥೆಯೊಳಗಿನ ಅವ್ಯವಸ್ಥೆಯನ್ನು ಕಟುವಾಗಿ ಖಂಡಿಸಿದರು. “ನಾನು ಸದಾ ಇಂತಹ ಸಾಧಕರ ಜೊತೆ ನಿಂತು ಪ್ರೋತ್ಸಾಹಿಸುತ್ತೇನೆ” ಎಂದು ಭರವಸೆ ನೀಡಿದರು.

 

“ಬೆಳಗಾವಿ ವರದಿ” ದಿನಪತ್ರಿಕೆಯ ಸಂಪಾದಕರಾದ ಬಿ ಜಿ ಸತೀಶ್ ಅವರಿಗೆ “ಕರುನಾಡು ಸೇವಾ ರತ್ನ” ಪ್ರಶಸ್ತಿ ಪ್ರಧಾನ

“ಬೆಳಗಾವಿ ವರದಿ” ದಿನಪತ್ರಿಕೆಯ ಸಂಪಾದಕರಾದ ಸತೀಶ್ ಬಿ ಗುಡಗೆನಟ್ಟಿ  ಅವರನ್ನು ಇದೇ ಸಂದರ್ಭದಲ್ಲಿ ‘ಜ್ಞಾನ ಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ’, ಬೆಂಗಳೂರು ಹಾಗೂ ‘ಕರುನಾಡು ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಘಟಕ’, ಚಿತ್ರದುರ್ಗದ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ “ಕವಿ- ಕಲಾವಿದರ ಸಮ್ಮೇಳನ 2022” ರಲ್ಲಿ “ಕರುನಾಡು ಸೇವಾ ರತ್ನ” ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು. ಕನ್ನಡ ಪತ್ರಿಕೋದ್ಯಮದಲ್ಲೊಂದು ಹೊಸ ವ್ಯಾಖ್ಯಾನ ಬರೆದ ‘ಬೆಳಗಾವಿ ವರದಿ’ ಪತ್ರಿಕೆಯು ಈ ನಾಡಿಗೆ ನೀಡಿದ ಅಪಾರವಾದ ಕೊಡುಗೆಯ ಕಾರಣಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

 

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಲೇಖಕ ಮತ್ತು ಅಂಕಣಕಾರ ಮಣ್ಣೆ ಮೋಹನ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಪೌರಾಣಿಕವಾಗಿ ಹಾಗೂ ಐತಿಹಾಸಿಕವಾಗಿ ಕನ್ನಡ ನಾಡು ಬೆಳೆದು ಬಂದ ರೀತಿಯನ್ನು ಸವಿಸ್ತಾರವಾಗಿ ವಿವರಿಸುತ್ತಾ, ಬನವಾಸಿ ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಕಲ್ಯಾಣಿ ಚಾಲುಕ್ಯರು, ವಿಜಯನಗರದ ಅರಸರು, ಮೈಸೂರು ಅರಸರು, ಬೆಂಗಳೂರಿನ ಕೆಂಪೇಗೌಡ, ಚಿತ್ರದುರ್ಗದ ಪಾಳೆಗಾರರು, ಕಿತ್ತೂರಿನ ರಾಣಿ ಚೆನ್ನಮ್ಮ ಹೀಗೆ ಕನ್ನಡ ನಾಡಿನ ಎಲ್ಲ ರಾಜಮನೆತನಗಳು ಈ ನಾಡಿಗೆ ನೀಡಿದ ಅಪಾರವಾದ ಕೊಡುಗೆಯನ್ನು ಸ್ಮರಿಸುತ್ತಾ, ಅಂತಹ ಶ್ರೇಷ್ಠ ಪರಂಪರೆಯ ವಾರಸುದಾರರು ನಾವಾಗಿದ್ದೇವೆ. ಆ ಹೆಮ್ಮೆ ನಮ್ಮೆಲ್ಲರದಾಗಲಿ ಎಂದು ಆಶಿಸಿದರು. ಮುಂದುವರೆದು ಮಾತನಾಡಿದ ಅವರು, ನಮ್ಮ ಶ್ರೀಮಂತ ಪರಂಪರೆಯನ್ನು ಇಲ್ಲಿ ನೆರೆದಿರುವ ಎಲ್ಲಾ ಕವಿ- ಕಲಾವಿದ ಸಾಧಕರುಗಳು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕೆಂದು ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ‘ಇಂದು ಸಂಜೆ’ ಪತ್ರಿಕೆಯ ಸಂಪಾದಕರಾದ ಡಾ. ಪದ್ಮ ನಾಗರಾಜ್ ಅವರು ಮಾತನಾಡಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿ “ಕರುನಾಡ ಸೇವಾ ರತ್ನ ಪ್ರಶಸ್ತಿ” ಪಡೆದ ಎಲ್ಲಾ ಸಾಧಕರಿಗೆ, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಶ್ರೇಷ್ಠ ಕಾರ್ಯವನ್ನು ಮಾಡುತ್ತಿರುವ ಜ್ಞಾನಗಂಗಾ ಸ್ವಾಹಿತ್ಯರಂಗ ವೇದಿಕೆಗೆ ಶುಭವಾಗಲಿ” ಎಂದು ಅಭಿನಂದಿಸಿದರು. ನಮ್ಮ ಪತ್ರಿಕೆ ಇಂತಹ ಉದಯೋನ್ಮುಖ ಕವಿಗಳಿಗೆ ಸದಾ ವೇದಿಕೆ ಒದಗಿಸುತ್ತದೆ ಎಂದು ನುಡಿದರು.

ಕರ್ನಾಟಕ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಡಾ. ಸತೀಶ್ ಕುಮಾರ್ ಹೊಸಮನಿ ಅವರು ಮಾತನಾಡಿ “ನಾಡಿನ ಎಲ್ಲ ಭಾಗಗಳಿಂದ ಬಂದಿರುವ ಸಾಧಕರಿಗೆ ಅಭಿನಂದನೆ ಸಲ್ಲಿಸುತ್ತಾ, “ಇಲ್ಲಿರುವ ಎಲ್ಲಾ ಕವಿಗಳು ತಮ್ಮ ಪುಸ್ತಕಗಳ ಡಿಜಿಟಲೀಕರಣಕ್ಕೆ ಅನುಮತಿ ನೀಡಿದರೆ, ಗ್ರಂಥಾಲಯ ಇಲಾಖೆ ಹೂಗಳನ್ನು ತನ್ನ ಪೋರ್ಟಲ್ ನಲ್ಲಿ ಪ್ರಕಟಿಸುವ ಮೂಲಕ ಜಗತ್ತಿನಾದ್ಯಂತ ಓದುಗರಿಗೆ ಆ ಪುಸ್ತಕಗಳನ್ನು ಓದುವ ಅವಕಾಶ ಮಾಡಿಕೊಡುತ್ತದೆ” ಎಂದರು. ಹಾಗೆಯೇ ಎಲ್ಲರೂ ಗ್ರಂಥಾಲಯ ಇಲಾಖೆಯ ಸದಸ್ಯರಾಗಬೇಕೆಂದು ಕೇಳಿಕೊಂಡರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷರಾದ ಕೃಷ್ಣಪ್ಪನವರು ಮಾತನಾಡಿ ” ಜ್ಞಾನ ಗಂಗ ಸಾಹಿತ್ಯ ರಂಗ ಸಂಸ್ಥೆಯು ಮಾಡುತ್ತಿರುವ ಕನ್ನಡ ಕೈಂಕರ್ಯ ಅದ್ವಿತೀಯವಾದದ್ದು. ಯುವ ಕವಿಗಳನ್ನು ಗುರುತಿಸಿ, ಅವರ ಕವನಗಳನ್ನು ಪರಿಷ್ಕರಿಸಿ, ಪತ್ರಿಕೆಗಳಲ್ಲಿ ಪ್ರಕಟಿಸಿ, ನಾಡಿಗೆ ಪರಿಚಯಿಸಿ, ಅವರಿಗೆ ಬೆನ್ನು ತಟ್ಟುವ ಕೆಲಸವನ್ನು ಈ ಸಂಸ್ಥೆಯ ಮೂಲಕ ಮಣ್ಣೆ ಮೋಹನ್ ರವರು ಮಾಡುತ್ತಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ,ಧೀಮಂತವಾಗಿರುವ ಕನ್ನಡ ನಾಡು ಈ ಹೊಸ ತಲೆಮಾರಿನಿಂದ ಇನ್ನಷ್ಟು ಮೆರಗನ್ನು ಪಡೆಯಲಿ. ಈ ನಾಡಿನ ಭವ್ಯತೆ, ಹಿರಿಮೆ, ಗರಿಮೆ ನಮ್ಮೆಲ್ಲರ ಹೆಮ್ಮೆ ಆಗಿದೆ” ಎಂದರು. ತಮ್ಮ ಸ್ಪೂರ್ತಿಯುತ ಭಾಷಣದಿಂದ ಸಭಿಕರ ಮನೆಗೆದ್ದರು.

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ಸಮತಾ ದೇಶಮಾನೆಯವರು ಮಾತನಾಡಿ “ಎಲ್ಲಾ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸಿ, ಪುರಸ್ಕರಿಸುವ ಮಣ್ಣೆ ಮೋಹನ್ ರವರ ಜ್ಞಾನಗಂಗಾ ಸಾಹಿತ್ಯ ರಂಗದ ಕಾರ್ಯ ಅದ್ಭುತವಾದದ್ದು. ಎಲ್ಲ ಸಮುದಾಯಗಳ, ಎಲ್ಲಾ ಕ್ಷೇತ್ರಗಳ ಸಾಧಕರು ಇಲ್ಲಿ ನೆರೆದಿದ್ದಾರೆ. ಹಾಗಾಗಿ ಇದೊಂದು ಸಮತಾ ಸಮಾವೇಶವಾಗಿದೆ” ಎಂದು ಬಣ್ಣಿಸಿದರು. ತಮ್ಮ ಅಧೀನದಲ್ಲಿ 14 ಪಿ ಎಚ್ ಡಿ ಪ್ರಬಂಧಗಳು ಮಂಡನೆಯಾಗಿವೆ ಎಂದು ತಿಳಿಸುತ್ತಾ, ಅವುಗಳ ವಸ್ತು ವಿಶೇಷತೆಗಳನ್ನು ವಿವರಿಸಿದರು.

‘ಸಂಜೆ ಪ್ರಭ’ ಪತ್ರಿಕೆಯ ಉಪಸಂಪಾದಕರಾದ ರಜನಿ ಪೈರವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.’ವಿಶ್ವವಾಣಿ’ ಪುರವಣಿ ವಿಭಾಗದ ಸಂಪಾದಕರಾದ ಶಶಿಧರ ‌ಹಾಲಾಡಿ, ಲಯಾಬಿನಯ ಕಲ್ಚರ್ ಫೌಂಡೇಶನ್ ನ ಡಾ.ಜಯಶ್ರೀ ರವಿ ಹೆಗಡೆ, ಸಮಾಜ ಸೇವಕರಾದ ರಾಮಕೃಷ್ಣಯ್ಯ ಮುಂತಾದವರು ವೇದಿಕೆಯಲ್ಲಿದ್ದರು.150ಕ್ಕೂ ಹೆಚ್ಚು ಸಾಧಕರಿಗೆ “ಕರುನಾಡು ಸೇವಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗೋಷ್ಟಿ, ಮಹಿಳಾ ಗೋಷ್ಠಿ, ಕವಿಗೋಷ್ಠಿ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.ಬೀದರ್ ನಿಂದ ಕೊಡಗು ಜಿಲ್ಲೆಯವರೆಗೆ ಎಲ್ಲ ಜಿಲ್ಲೆಗಳ ಸಾದಕರನ್ನು ಗುರುತಿಸಿ ಸನ್ಮಾನಿಸಿದ್ದು ವಿಶೇಷವಾಗಿತ್ತು. ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ನಾಗರಾಜಪ್ಪ,ಮಣ್ಣೆ; ರಂಗನಾಥ್, ಶ್ರೀಪತಿಹಳ್ಳಿ; ಗಿರೀಶ್,ಮುದ್ದಲಿಂಗನಹಳ್ಳಿ ; ವೆಂಕಟೇಶ್, ಬೆಟ್ಟಹಳ್ಳಿ; ಜಗದೀಶ್ ಜಿ.ಎ.ಬೇವೂರು. ರವರನ್ನು ಸನ್ಮಾನಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಇದೇ ಸಂದರ್ಭದಲ್ಲಿ ಮಣ್ಣೆ ಮೋಹನ್ ವಿರಚಿತ “ಉತ್ತುಂಗದಲ್ಲಿ ವನಿತೆಯರು-೧” ಕೃತಿ, ಗಣಪತಿ ಗೋ. ಚಲವಾದಿಯವರ “ಕಾವ್ಯಾಮೃತ” ಕವನ ಸಂಕಲನ, ರಾಘವೇಂದ್ರ ಡಿ ತಳವಾರರವರ”ಆತ್ಮಾನುಬಂಧದ ಸಖಿ” ಕೃತಿಗಳು ಲೋಕಾರ್ಪಣಗೊಂಡವು.

*ವಿದ್ಯಾರ್ಥಿ ಗೋಷ್ಠಿ*

“ಭವ್ಯ ಭಾರತದ ಅಡಿಯಲ್ಲಿ ಯುವಜನರ ಪಾತ್ರ”ವಿಷಯದ ಕುರಿತು ನಮ್ಮೂರ ಟಿವಿಯ ವರ್ಷ ನಾಯಕ್, “ಡಿಜಿಟಲ್ ಯುಗದಲ್ಲಿ ಸ್ಟಾರ್ಟ್ ಆಪ್‌ಗಳಂದ ದೇಶದ ಎಕಾನಮಿ ಅಭಿವೃದ್ಧಿ”ವಿಷಯದ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿನಿ ಶೈಲಸುತೆ ರಂಜಿತಾ, “ಅಪರಾಧ ತಡೆಯುವಲ್ಲಿ ಯುವಜನತೆಯ ಪಾತ್ರ” ವಿಷಯದ ಕುರಿತು ರಾಮುಹುರಳಿಹಳ್ಳಿ, “ದೇಶಾಭಿಮಾನ ಮತ್ತು ಯುವ ಪೀಳಿಗೆ” ವಿಷಯದ ಕುರಿತು ತೃತೀಯ ಬಿಎ ವಿದ್ಯಾರ್ಥಿ ಚೇತನ್ ತಾವರೆಕೆರೆ ಮತ್ತು “ನೂತನ ಶಿಕ್ಷಣ ನೀತಿಯಿಂದ ಅನುಕೂಲಗಳು ಮತ್ತು ಅನಾನುಕೂಲಗಳು” ವಿಷಯದ ಕುರಿತು ದ್ವಿತೀಯ ಬಿಕಾಂ ವಿದ್ಯಾರ್ಥಿ ಮನು ಭೈರನಹಳ್ಳಿ ವಿಚಾರ ಮಂಡಿಸಿದರು.

*ಮಹಿಳಾ ಗೋಷ್ಠಿ*

“ಸ್ವಾತಂತ್ರ್ಯ ನಂತರ ಶೈಕ್ಷಣಿಕವಾಗಿ ಮಹಿಳೆಯರ ಬೆಳವಣಿಗೆ” ವಿಷಯ ಕುರಿತು ಆದರ್ಶ ಮಹಿಳಾ ವೇದಿಕೆಯ ಅಧ್ಯಕ್ಷರಾದ ಪುಷ್ಪ ವಿಶ್ವೇಶ್ವರ, “ಮಕ್ಕಳ ಬೌದ್ಧಿಕ, ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಮಾತೆಯರ ಕೊಡುಗೆ” ವಿಷಯದ ಕುರಿತು ವಿದ್ಯಾವಾಹಿನಿ ಶಾಲೆಯ ಮುಖ್ಯ ಶಿಕ್ಷಕಿ ವಾತ್ಸಲ್ಯ,”ಭಾರತ ಕ್ರೀಡಾ ಕ್ಷೇತ್ರದಲ್ಲಿ ಮಹಿಳಾ ಕ್ರೀಡಾಪಟುಗಳು & ಅವರ ಸಾಧನೆಗಳು” ವಿಷಯ ಕುರಿತು ಕವಯಿತ್ರಿ ಮತ್ತು ಉಪನ್ಯಾಸಕಿ ನಂದಾದೀಪ, “ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ” ವಿಷಯದ ಬಗ್ಗೆ ಪ್ರೆಸ್ ಕ್ಲಬ್ ಕೌನ್ಸಿಲ್ ನ ಪ್ರಧಾನ ಕಾರ್ಯದರ್ಶಿ ಆಶಾ ಸೀನಪ್ಪ ಮತ್ತು “ಸ್ವಾತಂತ್ರ್ಯ ನಂತರ ಭಾರತ ದೇಶದಲ್ಲಿ ಮಹಿಳೆಯರ ಸ್ಥಾನಮಾನ” ವಿಷಯ ಕುರಿತು ಅಫಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ರೂಪ ರವರು ವಿಚಾರ ಮಂಡಿಸಿದರು.

ಚಿನ್ಮಯಿ ಭಾರದ್ವಾಜ್ ಪ್ರಾರ್ಥನೆ ಮಾಡಿದರು. ಡಾ. ಯಶೋಧ ಸ್ವಾಗತ ಕೋರಿದರು. ಡಾ.ಎಂ ವಿ ನೆಗಳೂರು ರವರು ಪ್ರಾಸ್ತಾವಿಕ ನುಡಿಗಳನ್ನು ಹಾಡಿದರು. ನಟ- ನಿರೂಪಕ ಧನಂಜಯ್ ಕಾರ್ಯಕ್ರಮವನ್ನು ನಿರೂಪಿಸಿದರು. ನರಸಿಂಹ ರಾಜುರವರು ಸಮ್ಮೇಳನದ ಉದ್ಘಾಟಕರ ಪರಿಚಯ, ಕವಿಗೋಷ್ಠಿಯ ನಿರೂಪಣೆ ಮಾಡಿದರು.ಡ್ರಾಮಾ ಜೂನಿಯರ್ ಸೀಸನ್ 4ರ ಫೈನಲಿಸ್ಟ್ ಕುಮಾರಿ ಬೈರವಿ ಹಾಗೂ ಬಾಲನಟಿ ಗನಿಕಾ ಅವರ ಭರತನಾಟ್ಯ ಎಲ್ಲರ ಮನಸೂರೆಗೊಂಡಿತು.

ವರದಿ: ಮಣ್ಣೆ ಮೋಹನ್