Belagavi News In Kannada | News Belgaum

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಗೌತಮ್ ಅದಾನಿ

ವಾಷಿಂಗ್ಟನ್: ಭಾರತದ ನಂ.1 ಶ್ರೀಮಂತ ವ್ಯಕ್ತಿ, ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ಇತ್ತೀಚೆಗಷ್ಟೇ ಅಮೆಜಾನ್‌ನ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ, ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಪಡೆದಿದ್ದರು. ಆದರೆ ಅದಾನಿಯವರು ಈಗ ಮತ್ತೆ ಬ್ಲೂಮ್‌ಬರ್ಗ್ ಇಂಡೆಕ್ಸ್‌ನಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಇಂದಿನ ಹೊಸ ನವೀಕರಣದಲ್ಲಿ ಗೌತಮ್ ಅದಾನಿಯವರ ಸಂಪತ್ತಿನ ಮೌಲ್ಯ 135 ಬಿಲಿಯನ್ ಡಾಲರ್ ಇದೆ. 10 ದಿನಗಳ ಹಿಂದೆ ಅದಾನಿಯವರ ಸಂಪತ್ತು 154.7 ಬಿಲಿಯನ್ ಡಾಲರ್ ಇತ್ತು. ಅವರು ಇತ್ತೀಚೆಗೆ 6.9 ಬಿಲಿಯನ್ ಡಾಲರ್ ಸಂಪತ್ತು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದೀಗ ಅದಾನಿಯನ್ನು ಹಿಂದಿಕ್ಕಿ ಬೆಜೋಸ್ ಅವರು ಮತ್ತೆ 2ನೇ ಸ್ಥಾನಕ್ಕೆ ಮರಳಿದ್ದಾರೆ. ಬೆಜೋಸ್ ಅವರ ಪ್ರಸ್ತುತ ನಿವ್ವಳ ಸಂಪತ್ತು 138 ಬಿಲಿಯನ್ ಡಾಲರ್ ಆಗಿದೆ. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಈಗ 245 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದುವ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಅದಾನಿಯವರು ಈ ವರ್ಷ ಫೆಬ್ರವರಿಯಲ್ಲಿ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದಲ್ಲೇ ನಂ.1 ಶ್ರೀಮಂತ ವ್ಯಕ್ತಿಯಾದರು. ಕಳೆದ ತಿಂಗಳು ಮೈಕ್ರೋಸಾಫ್ಟ್ ಕಾರ್ಪೊರೇಷನ್‌ನ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ, ವಿಶ್ವದ 3ನೇ ಶ್ರೀಮಂತ ವ್ಯಕ್ತಿಯಾದರು. ಇದಾದ ಕೆಲವೇ ದಿನಗಳಲ್ಲಿ ಬೆಜೋಸ್ ಅವರನ್ನೂ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದರು. ಇದೀಗ ಅದಾನಿ ಮತ್ತೆ 3ನೇ ಸ್ಥಾನಕ್ಕೆ ಕುಸಿದಿದ್ದಾರೆ./////