Belagavi News In Kannada | News Belgaum

ಚರ್ಮ ಗಂಟು ರೋಗ’: ಪಶುವೈದ್ಯಾಧಿಕಾರಿಗಳಿಗೆ ತಾಂತ್ರಿಕ ತರಬೇತಿ

ಪಶುಗಳ ಆರೋಗ್ಯ ರಕ್ಷಣೆ ಸಾಧ್ಯ: ಜೆ.ಶ್ರೀನಿವಾಸನ್

ಬೆಳಗಾವಿ:ಉತ್ತರ ಭಾರತದ ಪಶುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಚರ್ಮ ಗಂಟು ರೋಗ(ಲಂಪಿ ಸ್ಕಿನ್ ಡಿಸೀಸ್) ಈಗ ನಮ್ಮ ರಾಜ್ಯದ ಜಾನುವಾರುಗಳಿಗೂ ಅಂಟಿಕೊಂಡಿದ್ದು ಸಹಜವಾಗಿ ಆತಂಕ ಮೂಡಿಸಿದೆ. ಆದರೆ ಪಶು ವೈದ್ಯಾಧಿಕಾರಿಗಳ ಸಲಹೆ, ಮಾರ್ಗದರ್ಶನ, ಮುನ್ನೆಚ್ಚರಿಕೆಯಿಂದ ಈ ರೋಗವನ್ನು ನಿಯಂತ್ರಿಸಬಹುದು. ಇದರೊಂದಿಗೆ ಜಾನುವಾರುಗಳ ಆರೋಗ್ಯ ರಕ್ಷಣೆ ಸಾಧ್ಯವಿದೆ ಎಂದು ಬೆಳಗಾವಿ ಹಾಲು ಒಕ್ಕೂಟ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಜೆ.ಶ್ರೀನಿವಾಸನ್ ಅಭಿಪ್ರಾಯಪಟ್ಟರು.

ನಗರದಲ್ಲಿ ಮಂಗಳವಾರ (ಸೆ.27) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಳಗಾವಿಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಸಹಯೋಗದಲ್ಲಿ ಬೆಳಗಾವಿ ವಿಭಾಗದ ಪಶುವೈದ್ಯಾಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ‘ಚರ್ಮ ಗಂಟು ರೋಗ’ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಾವೇರಿ ಜಿಲ್ಲೆಯ ಪಶುಗಳಲ್ಲಿ ಈ ಚರ್ಮ ಗಂಟು ರೋಗ (ಲಂಪಿ ಸ್ಕಿನ್ ಡಿಸೀಸ್) ಹೆಚ್ಚಾಗಿ ಕಂಡು ಬರುತ್ತಿರುವ ಕುರಿತು ವರದಿಯಾಗುತ್ತಿದೆ. ಈಗ ಬೆಳಗಾವಿಯಲ್ಲಿ ಈ ಸೋಂಕಿನ ಕುರಿತು ಜಾಗೃತಿ ಮೂಡಿಸಲು ಹಾಗೂ ನಿಯಂತ್ರಣಕ್ಕಾಗಿ ಈ ತಾಂತ್ರಿಕ ತರಬೇತಿ ವೈದ್ಯಾಧಿಕಾರಿಗಳಿಗೆ ನೆರವಾಗಲಿದೆ ಎಂದು ತಿಳಿಸಿದರು.

ವೈದ್ಯಾಧಿಕಾರಿಗಳಿಗೆ ತಜ್ಞರಿಂದ ತರಬೇತಿ:

ಜಾನುವಾರುಗಳಲ್ಲಿ ಚರ್ಮ ಗಂಟು ರೋಗ (ಲಂಪಿ ಸ್ಕಿನ್ ಡಿಸೀಸ್) ಕುರಿತು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಕೆ ಶ್ರೀಪಾದ ಮತ್ತು ಡಾ. ಸಂಜೀವ ಕುಮಾರ ಜಿಲ್ಲೆಯ ಪಶು ವೈದ್ಯಾಧಿಕಾರಿಗಳಿಗೆ ತರಬೇತಿ ನೀಡಿದರು.

ಏನಿದು ಚರ್ಮಗಂಟು ರೋಗ?

ಚರ್ಮಗಂಟು ರೋಗವು (ಲಂಪಿ ಸ್ಕಿನ್ ಡಿಸೀಸ್) ಜಾನುವಾರುಗಳಲ್ಲಿ 30.8 % ಮತ್ತು ಎಮ್ಮೆಗಳಲ್ಲಿ 1.6% ಕಂಡುಬರುವ ಒಂದು ವೈರಸ್ ಖಾಯಿಲೆಯಾಗಿದೆ. ಈ ರೋಗವು ಮೂಲತಃ ಆಫ್ರಿಕಾ ದೇಶಗಳಲ್ಲಿ ಕಂಡುಬಂದಿದ್ದು
ನಂತರದಲ್ಲಿ ಮಧ್ಯ ಪ್ರಾಚ್ಯ ದಕ್ಷಿಣ ಪೂರ್ವ ಯೂರೋಪ್, ರಷ್ಯಗಳಲ್ಲಿ ಕಂಡುಬಂದಿತ್ತು. ಇತ್ತೀಚೆಗೆ ಒಡಿμÁದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲೂ ಪತ್ತೆಯಾಗಿದೆ.

ಹೇಗೆ ಹರಡುತ್ತದೆ ಲಂಪಿ ಸ್ಕಿನ್ ಡಿಸೀಸ್?

ಕ್ಯುಲೆಕ್ಸ್, ಏಡಿಸ್ ಸೊಳ್ಳೆಗಳಿಂದ ಸೊಮಾಕ್ಸಿಸ್, ಸೈಬಲ್ (ಕುದುರೆ ನೊಣ), ಬಯೋಮಿಯ ಎಂಬ ಕಚ್ಚುವ ನೊಣಗಳಿಂದ, ರೆಪಿಸೆಫಲಸ್ ಹಾಗೂ ಆಂಬ್ಲಿಯೋಮ ಉಣ್ಣೆಗಳ ಮೂಲಕವೂ ಸಹ ಪ್ರಸರಣವಾಗುತ್ತದೆ. ರೋಗಗ್ರಸ್ತ ಪ್ರಾಣಿಗಳ ನೇರ ಸಂಪರ್ಕದಿಂದ, ಕಲುಷಿತಗೊಂಡ ನೀರು, ಮೇವಿನಿಂದಲೂ ಸಹ ಈ ರೋಗವು ಹರಡಬಹುದು.

ಚರ್ಮ ಗಂಟು ರೋಗದ ಲಕ್ಷಣಗಳೇನು?

ರೋಗಗ್ರಸ್ತ ಪ್ರಾಣಿಗಳಲ್ಲಿ ಪ್ರಾರಂಭಿಕ ಹಂತದಲ್ಲಿ ತೀವ್ರ ಜ್ವರ ಕಾಣಿಸಿಕೊಳ್ಳುತ್ತದೆ. ಚರ್ಮದಲ್ಲಿ ಗಂಟುಗಳು ಕಾಣಿಸಿ, ಕ್ರಮೇಣ ಚರ್ಮ ಗಂಟು, ಹಕ್ಕಳೆಗಟ್ಟುತ್ತದೆ. ಹಾಲಿನ ಇಳುವರಿಯಲ್ಲಿ ಗಣನೀಯ ಇಳಿಕೆ, ಮೇವು ತಿನ್ನದೆ ಕ್ರಮೇಣವಾಗಿ ರಾಸುಗಳು ಬಡಕಲಾಗುತ್ತವೆ. ಶೇ 10 ರಿಂದ 20 ರಷ್ಟು ರಾಸುಗಳು ರೋಗಕ್ಕೆ ತುತ್ತಾಗಬಹುದಾಗಿದ್ದು, ಅವುಗಳಲ್ಲಿ ಶೇ 1 ರಿಂದ 5 ರಷ್ಟು ರಾಸುಗಳು ಶ್ವಾಸಕೋಶದ ಉರಿಯೂತದಿಂದ ಸಾವನ್ನಪ್ಪಬಹುದು.

ಲಂಪಿ ಸ್ಕಿನ್ ಡಿಸೀಸ್ ಗೆ ಚಿಕಿತ್ಸೆ ಹೇಗೆ?

ಈ ಕಾಯಿಲೆಗೆ ಸೂಕ್ತ ಚಿಕಿತ್ಸೆ ಇಲ್ಲ. ಆದರೆ ಪ್ರಾರಂಭಿಕ ಹಂತದಲ್ಲಿಯೇ ನಂಜುನಿವಾರಕಗಳನ್ನು ತಜ್ಞ ಪಶುವೈದ್ಯರ ಮೂಲಕ ಕೊಡಿಸಿದರೆ ಸಾವು, ನೋವು ತಡೆಗಟ್ಟಬಹುದು. ಬ್ಯಾಕ್ಟಿರಿಯಾಗಳು ಶ್ವಾಸಕೋಶವನ್ನೇ ಗುರಿಯಾಸುವುದರಿಂದ ತಕ್ಷಣ ಚಿಕಿತ್ಸೆ ಕೊಡಿಸಿದರೆ ಸಾವನ್ನು ತಡೆಯಬಹುದು.

ಚರ್ಮ ಗಂಟು ರೋಗ ನಿಯಂತ್ರಣ ಹೇಗೆ?

ರೋಗ ಪೀಡಿತ ರಾಸುಗಳನ್ನು ಆರೋಗ್ಯವಂತ ಪ್ರಾಣಿಗಳಿಂದ ಬೇರ್ಪಡಿಸಿ ಕೂಡಲೆ ಚಿಕಿತ್ಸೆಗೆ ಒಳಪಡಿಸಬೇಕು. ಸೊಳ್ಳೆಗಳು, ನೊಣಗಳ ಹಾವಳಿಯನ್ನು ನೊಣನಿವಾರಕ ಮುಲಾಮು ಹಚ್ಚಿ ಹತೋಟಿಯಲ್ಲಿಡಬೇಕು. ಸೊಳ್ಳೆ ಪರದೆಗಳನ್ನು ಬಳಸಬೇಕು. ಬೇವಿನ ಸೊಪ್ಪಿನ ಹೋಗೆ ಹಾಕಬೇಕು. ಬೇವಿನ ಎಣ್ಣೆಯಲ್ಲಿ ತುಳಸಿ, ಬೆಳ್ಳುಳ್ಳಿ, ಹಸಿ ಬೇವಿನ ಎಲೆಗಳು, ಅರಿಶಿಣವನ್ನು ಮಿಶ್ರಣ ಮಾಡಿ ರುಬ್ಬಿ ರಾಸುಗಳು ಗಾಯದ ಮೇಲೆ ಲೇಪಿಸಬೇಕು.

ಈ ರೋಗ ಮನುಷ್ಯರಿಗೆ ಹರಡುವುದಿಲ್ಲ:

ಜಾನುವಾರುಗಳಲ್ಲಿ ಕಂಡು ಬರುತ್ತಿರುವ ಚರ್ಮ ಗಂಟು ರೋಗ ಅವುಗಳ ಸಾವಿಗೂ ಕಾರಣವಾಗುತ್ತದೆ. ಆದರೆ ಸಮಾಧಾನಕರ ಸಂಗತಿ ಎಂದರೆ ಈ ಖಾಯಿಲೆ ಮನುಷ್ಯರಿಗೆ ಹರಡುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೆಳಗಾವಿಯ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರಾದ ಡಾ. ರಾಜೀವ ಕೂಲೇರ, ಅಧ್ಯಕ್ಷರಾಗಿ ಬೆಳಗಾವಿ ಸ್ಪೆμÁಲಿಟಿ ಆಸ್ಪತ್ರೆ ಉಪನಿರ್ದೇಶಕರಾದ ಡಾ. ಶ್ರೀಕಾಂತ ಅರಗಂಜಿ ಹಾಗೂ ಜಿಲ್ಲೆಯ ಪಶುವೈದ್ಯಾಧಿಕಾರಿಗಳು, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಜಯಶ್ರೀ ಗಾಣಿಗೇರ ಪ್ರಾರ್ಥಿಸಿದರು. ಬೆಳಗಾವಿ ಕೆಸಿಪಿಎಫ್ ಮುಖ್ಯ ಪಶುವೈದ್ಯಾಧಿಕಾರಿ ಡಾ. ಶ್ರೀಕಾಂತ ಗಾಂವಿ ಸ್ವಾಗತಿಸಿದರು. ಪಶು ವೈದ್ಯಾಧಿಕಾರಿ ಡಾ. ಅಶೋಕ ದುರಗಣ್ಢವರ ನಿರೂಪಿಸಿದರು. ಪಶು ವೈದ್ಯಾಧಿಕಾರಿ ಡಾ. ಎಚ್. ಕೆ.ಯರಗಟ್ಟಿ ವಂದಿಸಿದರು.///////