Belagavi News In Kannada | News Belgaum

ನ. 1ರಂದು ನಟ ದಿ. ಪುನೀತ್ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಸಿಎಂ ಬೊಮ್ಮಾಯಿ

ಬೆಂಗಳೂರು: ನಮ್ಮ ನೆಚ್ಚಿನ ನಟ ದಿ. ಪುನೀತ್ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಲು ತೀರ್ಮಾನಿಸಿದ್ದು, ನವೆಂಬರ್ 1 ರಂದು ವಿಧಾನಸೌಧದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಕುರಿತಾಗಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಇಂದಿನ ಸಭೆ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಎಲ್ಲರ ಮನದಾಳದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಪುನೀತ್ ನಿಜವಾಗಿಯೂ ಕರ್ನಾಟಕ ರತ್ನ. ಯುವಜನತೆಗೆ ಸದಾ ಪ್ರೇರಣೆ ನೀಡುತ್ತಿದ್ದರು. ಪುನೀತ್ ಹೆಸರು ಚಿರಸ್ಥಾಯಿಯಾಗಬೇಕು, ಪ್ರೇರಣೆಯಾಗಬೇಕು ಎಂದು ಈ ಪುರಸ್ಕಾರ ನೀಡಲಾಗುತ್ತಿದೆ. ಹಲವಾರು ಶ್ರೇಷ್ಠ ಸಾಹಿತಿಗಳು, ಮುಖ್ಯ ಅತಿಥಿಗಳು, ನಟರು, ಸಚಿವರು, ಶಾಸಕರು, ಹಿರಿಯ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಅರ್ಥಪೂರ್ಣ ಕಾರ್ಯಕ್ರಮ ಮಾಡಲಿದ್ದೇವೆ. ನವೆಂಬರ್ 1ರ ನಂತರ ಬೆಂಗಳೂರಿನಲ್ಲಿ 10 ದಿನಗಳ ಅಂತರದಲ್ಲಿ ಮೂರು ಭಾಗಗಳಲ್ಲಿ ಅಪ್ಪು ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಲಿದ್ದೇವೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.
ಇಂದಿನ ಸಭೆಯಲ್ಲಿ ರಾಜ್‌ಕುಮಾರ್ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ನವೆಂಬರ್ 1 ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. 2009ರ ನಂತರ ಯಾರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿರಲಿಲ್ಲ. ಈಗ 8 ಜನರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಲಾಗುತ್ತಿದೆ ಎಂದು ತಿಳಿಸಿದರು./////