Belagavi News In Kannada | News Belgaum

ಮೂರು ದಿನದ ಗಂಧದ ಗುಡಿ ಕಲೆಕ್ಷನ್ 20 ಕೋಟಿ

ಬೆಂಗಳೂರು: ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಿರುವ ಗಂಧದ ಗುಡಿ ಡಾಕ್ಯುಮೆಂಟರಿ ಮಾದರಿ ಸಿನಿಮಾಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೆಯೇ ಬಾಕ್ಸ್ ಆಫೀಸಿನಿಂದಲೂ ಹಣದ ಹೊಳೆ ಹರಿದು ಬಂದಿದೆ. ಗುರುವಾರ ಪೇಯ್ಡ್ ಪ್ರಿಮಿಯರ್, ಶುಕ್ರವಾರ, ಶನಿವಾರ ಮತ್ತು ಭಾನುವಾರದ ಒಟ್ಟು ಕಲೆಕ್ಷನ್ ಅಂದಾಜು 20 ಕೋಟಿ ಎಂದು ಹೇಳಲಾಗುತ್ತಿದೆ.

ಇದೊಂದು ಡಾಕ್ಯುಮೆಂಟರಿ ಮಾದರಿಯ ಸಿನಿಮಾವಾಗಿದ್ದರೂ, ಅಪ್ಪು ಅವರ ಅಭಿಮಾನಿಗಳಿಗೆ ಎಂದಿನಂತೆ, ಡೈಲಾಗ್, ಫೈಟ್ಸ್ , ಹಾಡು, ಡಾನ್ಸ್ ಇಲ್ಲದೇ ಇದ್ದರೂ, ಅಪ್ಪು ನೀಡಿರುವ ಸಂದೇಶವನ್ನು ಸಖತ್‌ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೇ, ಪುನೀತ್ ಅವರ ಕೆಲವು ಮಾತುಗಳನ್ನು ಅಭಿಮಾನಿಗಳಿಗೆ ಕಣ್ಣೀರು ಹಾಕಿಸಿವೆ. ಸಾಕಷ್ಟು ಅಭಿಮಾನಿಗಳು ಥಿಯೇಟರ್ ನಲ್ಲಿ ಕಣ್ಣೀರು ಹಾಕಿರುವುದು ಸಾಮಾನ್ಯವಾಗಿದೆ.

ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಡಾಕ್ಯುಡ್ರಾಮಾ ಚಿತ್ರ ಇಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಚಿತ್ರದ ವಿಶೇಷ ಅಂದರೆ, ಅಪ್ಪು ಅಪ್ಪು ಆಗಿಯೇ ಕಾಣಿಸಿಕೊಂಡಿದ್ದಾರೆ. ಯಾವುದೇ ಮೇಕಪ್ ಇಲ್ಲದೇ, ಡೈಲಾಗ್ ಹೊಡೆಯದೇ ಸರಳವಾಗಿ ಹಾಗೂ ಸಹಜವಾಗಿದ್ದಾರೆ. ಹಾಗಾಗಿ ಪುನೀತ್ ಮತ್ತಷ್ಟು ಹತ್ತಿರವಾಗುತ್ತಾರೆ. ಈ ಚಿತ್ರದಲ್ಲಿ ಪುನೀತ್ ಕಾಡಿನ ಮಧ್ಯೆ ಹೋದಾಗ, ವಿಷ ಸರ್ಪಗಳನ್ನು ಕಾಣುತ್ತಾರೆ. ಹುಲಿ, ಚಿರತೆಗಳನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಅವರು ಮಾತೊಂದನ್ನು ಆಡುತ್ತಾರೆ. ಆ ಮಾತು ನೋಡುಗನನ್ನು ಭಾವುಕನಾಗಿಸುತ್ತದೆ.

ಕಾಡಿನೊಳಗೆ ವಿಷದ ಹಾವು ಕಾಣುತ್ತಾ, ನಿರ್ದೇಶಕ ಅಮೋಘ ವರ್ಷ ಜೊತೆ ತಮಾಷೆಯಾಗಿ ಮಾತನಾಡಿದರೂ ಅದೀಗ ಪ್ರೇಕ್ಷಕರನ್ನು ಕಣ್ಣೀರು ಹಾಕಿಸುತ್ತದೆ. ಹಾವು ನೋಡುತ್ತಾ, ‘ಹೆಂಡ್ತಿ ಮಕ್ಕಳನ್ನು ಮನೇಲಿ ಬಿಟ್ಟು ಬಂದಿದ್ದೀನಿ. ಸೇಫ್ ಆಗಿ ಮನೆ ಸೇರ್ತೀನಿ ತಾನೆ?’ ಎಂದು ಪ್ರಶ್ನೆ ಮಾಡುತ್ತಾರೆ. ಅಂದು ಸೇಫ್ ಆಗಿಯೇ ಮನೆಗೆ ಬಂದ ಪುನೀತ್ ರಾಜ್ ಕುಮಾರ್, ಆ ನಂತರ ಆಸ್ಪತ್ರೆಗೆ ಹೋದವರು ಮತ್ತೆ ಸೇಫ್ ಆಗಿ ಬರಲಿಲ್ಲ ಎನ್ನುವುದು ನೋವಿನ ಸಂಗತಿ. ಈ ಮಾತು ಕೇಳುತ್ತಿದ್ದಂತೆಯೇ ಕಣ್ಣೀರು ಬರುವುದು ಸತ್ಯ.//////