Belagavi News In Kannada | News Belgaum

ಕುಂದಾನಗರಿಯಲ್ಲಡೆ ಹಳದಿ ಕೆಂಪು ಬಣ್ಣ

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮಂಗಳವಾರದಂದು ಕನ್ನಡ ರಾಜ್ಯೋತ್ಸವದ ಸಡಗರ ಮುಗಿಲು ಮುಟ್ಟಿತ್ತು. ಬೆಳಗಾವಿ ಅಂದ್ರೆ ಕನ್ನಡ ರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಅಂದ್ರೆ ಬೆಳಗಾವಿ ಅನ್ನೊ ಮಾತಿದೆ.‌ ಆ ಮಾತಿನಂತೆ ಕುಂದಾನಗರಿಯಲ್ಲಡೆ ರಾಜ್ಯೋತ್ಸವದ ಪುಳಕ ಮತ್ತು ಕಲರವ ಎಲ್ಲಡೆ ಹರಡಿದೆ.

ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿ ಈಗ ಅಕ್ಷರಶಃ ಮದುವಣಗಿತ್ತಿಯಂತೆ ಕಂಗೊಳ್ಳಿಸುತ್ತಿದೆ. ಇಲ್ಲಿನ ಚನ್ನಮ್ಮ ವೃತ್ತವನ್ನು ಹೂವು, ಬಾಳೆ ಗಿಡಗಳಿಂದ ಸಿಂಗರಿಸಲಾಗಿದೆ. ಪ್ರಮುಖ ಬೀದಿಗಳು ಕನ್ನಡ ಬಾವುಟ ಮತ್ತು ಹೂಗಳಿಂದ ಅಲಂಕಾರಗೊಂಡಿವೆ. ವಿದ್ಯಾರ್ಥಿಗಳು ಹಾಗೂ ಯುವಕರು ಚನ್ನಮ್ಮ ವೃತ್ತದ ಚನ್ನಮ್ಮ ಪುತ್ಥಳಿ ಎದುರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.


ಎಲ್ಲಡೆ  ಹಾರಾಡಿದ ಕನ್ನಡ ಧ್ವಜ: ನಗರದ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಯುವಜನರು, ನಾಗರಿಕರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.  ಈ ಬಾರಿ ಕನ್ನಡ ರಾಜ್ಯೋತ್ಸವ  ಇಡಿ ಬೆಳಗಾವಿಯಲ್ಲೆಡೆಯೂ ಹಳದಿ ಕೆಂಪು ಬಣ್ಣದ ಧ್ವಜ ರಾರಾಜಿಸಿದವು. ಬೈಕ್‌ ಗಳ ಮಲೆ ಯುವಕರು ಕನ್ನಡ ಧ್ವಜವನ್ನು ಕೈಯಲ್ಲಿ ಹಿಡಿದು ಸಾಗಿದರು. ಇಡಿ ಬೆಳಗಾವಿ ಹಳದಿ ಕೆಂಪು ಬಣ್ಣದಿಂದ ಕೂಡಿತ್ತು.

ಚಿಣ್ಣರ ಕೆನ್ನೆ ಮೇಲೆ ಕನ್ನಡ ಧ್ವಜದ ಚಿತ್ತಾರ: ಅದ್ದೂರಿ ರಾಜ್ಯೋತ್ಸವದ ಆಚರಣೆ ಹಿನ್ನೆಲೆಯಲ್ಲಿ ಮಕ್ಕಳು ಸೇರಿದಂತೆ ಯುವಕರು ತಮ್ಮ ಕೆನ್ನೆಯ ಮೇಲೆ ಕನ್ನಡ ಧ್ವಜದ ಭಾವಚಿತ್ರವನ್ನು ಬಿಡಿಸಿಕೊಳ್ಳುವಲ್ಲಿ ನಿರತರಾಗಿದ್ದರು. ಅಲ್ಲದೇ ಪುಟ್ಟ ಮಕ್ಕಳು  ತಮ್ಮ ಕೈಯಲ್ಲಿ ಕನ್ನಡದ ಧ್ವಜವನ್ನು ಕೈಯಲ್ಲಿ ಹಿಡಿದು ಹಾರಾಡಿಸಿ ಸಂಭ್ರಮಗೊಳ್ಳುವ ದೃಶ್ಯಗಳು ಎಲ್ಲಡೆ ಕಂಡು ಬಂದವು.


ಎಲ್ಲೆಡೆ ಪುನೀತ್‌ ರಾಜಕುಮಾರ್‌ ಭಾವಚಿತ್ರದ ಮೆರವಣಿಗೆ: ಕರುನಾಡ ರಾಜಕುಮಾರ ಡಾ. ಪುನೀತ್ ರಾಜಕುಮಾರ ಅಗಲಿ ಇಂದಿಗೆ ಬರೋಬ್ಬರಿ ಒಂದು ವರ್ಷವಾಗಿದೆ. ಆದರೂ ಸಹ ಅವರ ಅಭಿಮಾನ ಇಂದಿಗೂ ಕಡಿಮೇಯಾಗಿಲ್ಲ. ಇಂದು ಕನ್ನಡ ರಾಜ್ಯೋತ್ಸವದಂದು ಪುನೀತ್‌ ರಾಜಕುಮಾರ್‌ ಅವರನ್ನು ಸ್ಮರಿಸಲಾಯಿತು. ನಗರದ ಚನ್ನಮ್ಮವೃತ್ತದಲ್ಲಿ ಡಾ. ಪುನೀತ್ ರಾಜಕುಮಾರ ಭಾವ ಚಿತ್ರವಿಟ್ಟು ಪುನೀತ್ ರಾಜಕುಮಾರ ಅಭಿನಯದ ಚಲನಚಿತ್ರದ ಹಾಡುಗಳನ್ನು ಹಾಕಿ ಪುನೀತ್ ರಾಜಕುಮಾರ ಅವರಿಗೆ ಗೌರವ ಸೂಚಿಸಿದರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ಕೈಯಲ್ಲೂ ಪುನೀತ ರಾಜಕುಮಾರ್‌ ಭಾವಚಿತ್ರ  ಪೋಟೋ ಹಿಡಿದಿರುವ ದೃಶ್ಯಗಳು ಕಂಡು ಬಂದವು.
ಹಿರಿಯ ನಟ ಸಾಯಿ ಕುಮಾರ್ ಸೇಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಜನತೆ: ಬೆಳಗಾವಿ ಅದ್ದೂರಿ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಳಗಾವಿಗೆ ಬಂದ ಹಿರಿಯ ನಟ ಸಾಯಿ ಕುಮಾರ್ ನೋಡಿದ ಜನತೆ ಸೇಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಒಂದಿಷ್ಟು ಜನ ಕೈ ಕುಲುಕಿ ಸಂತೋಷ ಪಟ್ಟರು.  ನೆರೆದಿದ್ದ ಜನತೆ ನೋಡಿದ ನಟ ಸಾಯಿ ಕುಮಾರ್ ಪೊಲೀಸ್‌ ಸ್ಟೋರಿ ಚಿತ್ರದ ಡೈಲಾಗ್‌ ಹೊಡೆದು ಎಲ್ಲರನ್ನು ರಂಜಿಸಿದರು.
ಬಿಗಿ ಬಂದೋಬಸ್ತ್: ಬೆಳಗಾವಿ ನಗರ ಪೊಲೀಸರು ರಾಜ್ಯೋತ್ಸವದ ಆಚರಣೆಗೆ ಕಪ್ಪು‌ ಚುಕ್ಕೆ ಬರದಂತೆ ಬಿಗಿ ಬಂದೋಬಸ್ತ ಏರ್ಪಡಿಸಿದ್ದಾರೆ. ಬೆಳಗಾವಿ ನಗರದಲ್ಲಿ ರಾಜ್ಯೋತ್ಸವದ ಬಂದೋಬಸ್ತ್  ಅಂಗವಾಗಿ  3 ಡಿಸಿಪಿಗಳು, 12 ಎಸಿಪಿಗಳು, 52 ಇನ್ಸ್‌ಪೆಕ್ಟರ್‌ಗಳು, 2500 ಸಿಬ್ಬಂದಿ ಮತ್ತು ಇತರ ಶ್ರೇಣಿಯ ಅಧಿಕಾರಿಗಳು, 9 ಸಿಎಆರ್ ಪ್ಲಟೂನ್‌ಗಳು, 10 ಕೆಎಸ್‌ಆರ್‌ಪಿ ತುಕಡಿಗಳು, 500 ಹೋಮ್ ಗಾರ್ಡ್‌ಗಳು, 8 ಡ್ರೋನ್ ಕ್ಯಾಮೆರಾಗಳು,300 ಸಿಸಿಟಿವಿ, 35 ವಿಡಿಯೋ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.