Belagavi News In Kannada | News Belgaum

ಮಣ್ಣೆ ಮೋಹನ್ ರವರಿಗೆ ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ

ನೆಲಮಂಗಲ: ತಾಲೂಕು ಆಡಳಿತದಿಂದ ಕೊಡಮಾಡುವ  2022-23ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಲೇಖಕ ಮತ್ತು ಅಂಕಣಕಾರ ಮಣ್ಣೆ ಮೋಹನ್ ರವರು ಭಾಜನರಾಗಿದ್ದಾರೆ. ಇದೇ ತಾಲೂಕಿನ, ಗಂಗರ ರಾಜಧಾನಿಯಾಗಿ ಮೆರೆದಿದ್ದ ಮಾನ್ಯಪುರ (ಇಂದಿನ ಮಣ್ಣೆಗ್ರಾಮ)ದಲ್ಲಿ ಹುಟ್ಟಿ, ತಮ್ಮ ಸಾಹಿತ್ಯ ರಚನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮಾಜಿಕ ಚಟುವಟಿಕೆಗಳ ಮೂಲಕ ತಾಲೂಕಿನಾದ್ಯಂತ ಮನೆ ಮಾತಾಗಿರುವ ಮಣ್ಣೆ ಮೋಹನ್ ರವರ ಸೇವೆಯನ್ನು ಗುರುತಿಸಿ ತಾಲೂಕು ಆಡಳಿತ ಈ ಪ್ರಶಸ್ತಿಯನ್ನು ನೀಡಿದೆ..

ಮಣ್ಣೆ ಮೋಹನ್ ರವರು ಎರಡು ವರ್ಷಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಲೋಕಾರ್ಪಣೆಗೊಳಿಸಿರುವ ಜೊತೆಗೆ, ‘ಜ್ಞಾನಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ’ದ ನೇತೃತ್ವ ವಹಿಸಿ, ಯುವಜನಾಂಗದ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ‘ಕುಪ್ಪಳ್ಳಿಯಲ್ಲಿ ಕುವೆಂಪು, ಕನ್ನಡದ ಕಂಪು’, ‘ಕನ್ಯಾಕುಮಾರಿಯಲ್ಲಿ ಕನ್ನಡದ ತೇರು’ ಕಾರ್ಯಕ್ರಮಗಳನ್ನು ಆಯೋಜಿಸಿ, ಉದಯೋನ್ಮುಖ ಕವಿಗಳನ್ನು ಅಲ್ಲಿಗೆ ಕರೆದೊಯ್ದು, ಸಾಹಿತ್ಯ ರಚನೆಯ ತರಬೇತಿ ನೀಡುವುದರ ಜೊತೆಗೆ, ಸ್ಥಳದಲ್ಲಿಯೇ ಕವನ ರಚಿಸುವ ಸ್ಪರ್ಧೆಯನ್ನು ಏರ್ಪಡಿಸಿ, ಅವರುಗಳನ್ನು ಕವಿಗಳನ್ನಾಗಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ.

ಒಂದು ಕಾಲದಲ್ಲಿ ಪಂಡಿತರ ನಾಡೆಂದು ಜಗತ್ಪ್ರಸಿದ್ಧವಾಗಿದ್ದ ಕಾಶಿಯಲ್ಲಿ ಪುಸ್ತಕ ಬಿಡುಗಡೆಗೊಳಿಸಿ, ಕನ್ನಡದ ಅರ್ಚಕರಿಂದ ಆರಾಧಿಸಲ್ಪಡುವ ನೇಪಾಳದ ಪಶುಪತಿನಾಥ ಸನ್ನಿಧಿಯಲ್ಲಿ ಕನ್ನಡ ಪುಸ್ತಕ ಅನಾವರಣಗೊಳಿಸುವುದರ ಮೂಲಕ ನಾಡಿನಾದ್ಯಂತ ಗಮನ ಸೆಳೆದು ಚಿರಪರಿಚಿತರಾಗಿರುವ ಮಣ್ಣೆ ಮೋಹನ್ ರವರು, ಇದೀಗ ಕೇರಳದ ಶಬರಿಮಲೆಯ ಸನ್ನಿಧಾನದಲ್ಲಿ ಮತ್ತು ರಾಮೇಶ್ವರದ ಡಾ. ಅಬ್ದುಲ್ ಕಲಾಂ ರವರ ಸಂರಕ್ಷಿತ ಮನೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಇನ್ನಷ್ಟು ಗಮನ ಸೆಳೆದಿದ್ದಾರೆ.

“ದಿನಕ್ಕೊಂದು ಕವಿತೆ” ಅಂಕಣದ ಮೂಲಕ ನೂರಾರು ಎಲೆಮರೆಕಾಯಿಗಳನ್ನು ನಾಡಿಗೆ ಪರಿಚಯಿಸಿರುವ ಮಣ್ಣೆ ಮೋಹನ್ ರವರು, ಅವುಗಳನ್ನು ಕವನಸಂಕಲನದ ರೂಪದಲ್ಲಿ ಸಂಗ್ರಹಿಸಿ ನಾಡಿಗೆ ಅರ್ಪಿಸಿದ್ದಾರೆ. ಅವರ “ನಮ್ಮ ನಡುವಿನ ಸಾಧಕಿಯರು” ಅಂಕಣವಂತೂ, ನಾಡಿನ ಸಾಧಕ ಹೆಣ್ಣುಮಕ್ಕಳ ಸಾಧನೆಯ ಬದುಕನ್ನು, ಇಂದಿನ ತಲೆಮಾರಿಗೆ  ಸ್ಪೂರ್ತಿಯಾಗುವಂತೆ ಚಿತ್ರಿಸುವಲ್ಲಿ ಯಶಸ್ವಿಯಾಗಿದೆ. ಇವುಗಳ ಸಂಗ್ರಹ ರೂಪವಾದ, ಇತ್ತೀಚೆಗೆ ಬಿಡುಗಡೆಗೊಂಡ ಅವರ “ಉತ್ತುಂಗದಲ್ಲಿ ವನಿತೆಯರು” ಕೃತಿಯು ನಾಡಿನಾದ್ಯಂತ ಸಂಚಲನವನ್ನು ಸೃಷ್ಟಿಸಿದೆ. /////