Belagavi News In Kannada | News Belgaum

ಮನೆಯಲ್ಲಿದ್ದ ಫ್ರಿಡ್ಜ್ ಬ್ಲಾಸ್ಟ್; ಮೂವರು ಸಾವು

ಚೆನ್ನೈ: ಮನೆಯಲ್ಲಿದ್ದ ಫ್ರಿಡ್ಜ್ ಸ್ಫೋಟಗೊಂಡ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಚೆಂಗಲ್ಪಟ್ಟು ಜಿಲ್ಲೆಯ ಗುಡುವಂಚೇರಿ ಪಟ್ಟಣದಲ್ಲಿ ನಡೆದಿದೆ.

ನವೆಂಬರ್ 4ರ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. ವರ್ಷದ ಹಿಂದೆಯಷ್ಟೇ ಗುಡುವಂಚೇರಿಯಲ್ಲಿರುವ ಆರ್‌ಆರ್ ಬೃಂದಾವನ ಅಪಾರ್ಟ್‍ಮೆಂಟ್‍ನಲ್ಲಿ ವೆಂಕಟರಾಮನ್ ಅವರು ನಿಧನರಾಗಿದ್ದರು. ಹೀಗಾಗಿ ಅವರ ಪತ್ನಿ ಗಿರೀಜಾ (63) ದುಬೈನಲ್ಲಿ ನೆಲೆಸಿದ್ದರು. ಆದರೀಗ ವೆಂಕಟರಾಮನ್ ಅವರ ವಾರ್ಷಿಕ ವಿಧಿಗಳನ್ನು (ಶ್ರಾದ್ಧ) ಪಾವತಿಸಲು ಗುಡುವಂಚೇರಿ ಮನೆಗೆ ಮರಳಿದ್ದರು. ಈ ವೇಳೆ ಘಟನೆ ಸಂಭವಿಸಿದೆ.

ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಫ್ರಿಡ್ಜ್ ಬ್ಲಾಸ್ಟ್ ಆದಾಗ ಮನೆಯಲ್ಲಿ ಗಿರಿಜಾ, ಅವರ ಸಹೋದರಿ ರಾಧಾ (55), ಅವರ ಸಹೋದರ ರಾಜ್‍ಕುಮಾರ್ (47), ರಾಜ್‍ಕುಮಾರ್ ಅವರ ಪತ್ನಿ ಭಾರ್ಗವಿ (35) ಮತ್ತು ಅವರ ಪುತ್ರಿ ಆರಾಧನಾ (6) ಇದ್ದರು. ಫ್ರಿಡ್ಜ್ ಬ್ಲಾಸ್ಟ್ ಆದಾಗ ಮನೆಯ ತುಂಬಾ ಹೊಗೆ ಆವರಿಸಿತ್ತು.

ಫ್ರಿಡ್ಜ್ ಸ್ಫೋಟಗೊಂಡ ಶಬ್ದ ಕೇಳಿ ಅಪಾರ್ಟ್‍ಮೆಂಟ್‍ನಲ್ಲಿದ್ದ ಅಕ್ಕಪಕ್ಕದವರು ಅಲ್ಲಿಗೆ ಧಾವಿಸಿ ಬಾಗಿಲು ಒಡೆದು ಹಾಕಲು ಯತ್ನಿಸಿದ್ದಾರೆ. ಆದರೆ ದುರದೃಷ್ಟವಶಾತ್ ಸ್ಫೋಟದ ಹೊಗೆಯಿಂದ ಉಸಿರುಗಟ್ಟಿ ಗಿರಿಜಾ, ರಾಧಾ ಮತ್ತು ರಾಜ್‍ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೀಗ ಭಾರ್ಗವಿ ಮತ್ತು ಆರಾಧನಾ ಅವರನ್ನು ಕ್ರೋಂಪೇಟೆ ಸರ್ಕಾರಿ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.//////