Belagavi News In Kannada | News Belgaum

ಪೌರ ಕಾರ್ಮಿಕರ ಕಾಯಂಗೆ ಅಗತ್ಯ ಕ್ರಮ: ಸಿಎಂ ಬೊಮ್ಮಾಯಿ ಭರವಸೆ

ಬೆಂಗಳೂರು: ರಾಜ್ಯದ 11,136 ಪೌರ ಕಾರ್ಮಿಕರಿಗೆ ಕಾಯಂ ನೌಕರಿ ನೀಡಲು ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರು ಮತ್ತು ಬೆಂಗಳೂರಿನಾಚೆ ಇರುವ ನಗರ ಭಾಗದಲ್ಲಿನ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿಭಗವಾನ್ ಬುದ್ಧ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಪಾರ್ಕ್ ಉದ್ಯಾನವನ ಉದ್ಘಾಟಿಸಿ ಅವರು ಮಾತನಾಡಿದರು.

“ಪೌರ ಕಾರ್ಮಿಕರ ಆಪತ್ತು ನಿಧಿಯನ್ನು ₹2 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಸಮಿತಿ ರಚಿಸಿ ಅದರ ಶಿಫಾರಸ್ಸಿನನ್ವಯ ಕ್ರಮ ಕೈಗೊಳ್ಳಲಾಗಿದೆ. ದೀನ ದಲಿತರ ಕಲ್ಯಾಣವನ್ನು ಸರ್ಕಾರ ಗುರಿಯಾಗಿಸಿಕೊಂಡಿದೆ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿರಬೇಕು” ಎಂದರು.

“ಬುದ್ಧ ಜ್ಞಾನದ ಪ್ರತೀಕ. ಗೌತಮ ಬುದ್ಧ ತನ್ನ ರಾಜ್ಯವನ್ನು ತ್ಯಜಿಸಿ, ಜ್ಞಾನವನ್ನು ಪಡೆದು ಸಾಮಾಜಿಕ, ಧಾರ್ಮಿಕ ಮೌಲ್ಯಗಳನ್ನು ಜಗತ್ತಿಗೆ ಸಾರಿದರು. ಅಂಬೇಡ್ಕರ್ ಅವರು, ಬುದ್ಧನ ಮಾರ್ಗದಲ್ಲಿ ನಡೆದು ಸ್ವತಂತ್ರ ಭಾರತದಲ್ಲಿ ಎಲ್ಲರಿಗೂ ಸಮನಾದ ಹಕ್ಕುಗಳನ್ನು ನೀಡಿದರು. ದೇಶದಲ್ಲಿ ಜಾಗೃತಿ ಮೂಡಿಸಿ, ಸಮಾನತೆ, ಏಕತೆ, ಪ್ರಜಾಪ್ರಭುತ್ವ ಉಳಿಸಿದ್ದಾರೆ. ಆಧುನಿಕ ಭಾರತ ಮತ್ತು ಪ್ರಜಾಪ್ರಭುತ್ವದ ಪಿತಾಮಹ ಡಾ. ಬಿ ಆರ್ ಅಂಬೇಡ್ಕರ್; ಸಂವಿಧಾನವನ್ನು ರಚಿಸಿರುವ ಮಹಾತ್ಮನನ್ನು ನಾವೆಲ್ಲರೂ ಸದಾ ಕಾಲ ಸ್ಮರಿಸಬೇಕು” ಎಂದರು.

ಮೀಸಲಾತಿ ಹೆಚ್ಚಳವೆಂಬ ಜೇನುಗೂಡಿಗೆ ಕೈಹಾಕಬೇಡಿ ಎಂದು ನನಗೆ ಬಹಳ ಜನ ಸಲಹೆ ನೀಡಿದ್ದರು. ಆದರೂ, ಅವುಗಳನ್ನು ನಾನು ಲೆಕ್ಕಿಸಲಿಲ್ಲ. ಮಾನವೀಯ ಗುಣವಿಲ್ಲದವರು ಎಂದಿಗೂ ಆಡಳಿತ ನಡೆಸಬಾರದು. ಜನಸಂಖ್ಯೆಗೆ ಅನುಗುಣವಾಗಿ ಆ ಜನಾಂಗಗಳಿಗೆ ನ್ಯಾಯ ದೊರಕಿಸುವುದು ನಮ್ಮ ಧರ್ಮ. ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿಯವರು ನನಗೆ ಸದಾ ಕಾಲ ಪ್ರೇರಣೆಯಾಗಿದ್ದಾರೆ” ಎಂದು ಬೊಮ್ಮಾಯಿ ಹೇಳಿದರು.//////