Belagavi News In Kannada | News Belgaum

ಈರಣ್ಣ ಕಡಾಡಿ ಅವರ ಕಾರಿಗೆ ಮುತ್ತಿಗೆ ಹಾಕಿದ ಎಂಟು ಜನ ಕಾರ್ಯಕರ್ತರ ವಿರುದ್ಧ ಎಫ್ಐಆರ್

ಘಟಪ್ರಭಾ; ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪರವಾಗಿ ಘಟಪ್ರಭಾ ಪಟ್ಟಣದಲ್ಲಿ ಪ್ರತಿಭಟನೆ ಮಾಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರಿಗೆ ಮುತ್ತಿಗೆ ಹಾಕಿದ ಎಂಟು ಜನ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಘಟಪ್ರಭಾದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಕಾರಿಗೆ ಮುತ್ತಿಗೆ ಹಾಕಿ ಕಡಾಡಿ ವಿರುದ್ಧ ಘೋಷಣೆ ಕೂಗಿದ್ದ, ಪ್ರತಿಭಟನಾಕಾರರ ವಿರುದ್ಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದಿನಾಂಕ 11 ರಂದು ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ರತಿಭಟನಾಕಾರರಾದ ರಹಮಾನ್ ಮೋಕಾಶಿ, ವಸಂತ ರಾಣಪ್ಪಗೋಳ,ಗಣಪತಿ ಕೊರವ್ವಗೋಳ,ಮಂಜುಳಾ ರಾಮಗಾನಟ್ಟಿ, ಮಾರ್ಕಂಡಯ್ಯ ಮಹಿಮಗೋಳ, ರವಿ ನಾವಿ, ಕಾಡೇಶ ತೆಳಗೇರಿ, ನವೀನ ಮಾದರ ಅವರ ವಿರುದ್ಧ ಎಫ ಐ ಆರ್ ದಾಖಲಾಗಿದೆ.ಹೆಸರು ಗೊತ್ತಿಲ್ಲದ ಇನ್ನೂ 8 ರಿಂದ 10 ಪ್ರತಿಭಟನಾಕಾರರ ಮೇಲೆ ಕಲಂ 143, 147, 341,ಸ.ಕ , 149 ಐಪಿಸಿ ಅಡಿಯಲ್ಲಿ ಘಟಪ್ರಭಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಕರಣದ ಹಿನ್ನೆಲೆ : ನವೆಂಬರ್ 6 ರಂದು ಮಾನವ ಬಂಧುತ್ವ ವೇದಿಕೆ ವತಿಯಿಂದ ಜಿಲ್ಲೆಯ ನಿಪ್ಪಾಣಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರು ಮಾತನಾಡಿದ ಹಿಂದೂ ಪದ ಅರ್ಥದ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಪಕ್ಷದ ಮುಖಂಡರುಗಳಾದ ಈರಣ್ಣ ಕಡಾಡಿ, ಅನಿಲ್ ಬೆನಕೆ, ಅಭಯ ಪಾಟೀಲ, ಸಂಜಯ ಪಾಟೀಲ ಸೇರಿದಂತೆ ನೂರಾರು ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಿ ಶಾಸಕ ಸತೀಶ ಅವರ ಹೇಳಿಯನ್ನು ಖಂಡಿಸಿ ಅವರ ಪ್ರತಿಕೃತಿ ದಹಿಸಿದ್ದರು.

ಶಾಸಕ ಸತೀಶ ಜಾರಕಿಹೊಳಿ ಅವರ ವಿರುದ್ಧ ನಡೆದ ಪ್ರತಿಭಟನೆಯನ್ನು ಖಂಡಿಸಿ ಘಟಪ್ರಭಾದಲ್ಲಿ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಸತೀಶ ಜಾರಕಿಹೊಳಿ ಅವರ ಅಪಾರ ಬೆಂಬಲಿಗರು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಘಟಪ್ರಭಾದಲ್ಲಿ ಕಾರ್ಯಕ್ರಮವನ್ನು ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಕಲ್ಲೋಳಿಗೆ ತೆರಳುತ್ತಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರನ್ನು ಘಟಪ್ರಭಾದ ಮೃತ್ಯುಂಜಯ ವೃತ್ತದಲ್ಲಿ ತಡೆದ ಪ್ರತಿಭಟನಾಕಾರರು ಈರಣ್ಣ ಕಡಾಡಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ , ಅವರ ಕಾರನ್ನು ಗುದ್ದಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು‌.
ಈ ಘಟನೆಯ ಬಗ್ಗೆ ಪೊಲೀಸ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದ್ದ ಈರಣ್ಣ ಕಡಾಡಿ ಅವರು ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.