Belagavi News In Kannada | News Belgaum

ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠಕ್ಕೆ ನ್ಯಾಯವಾದಿಗಳ ಒತ್ತಾಯ

ಬೆಳಗಾವಿ: ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠ ಆರಂಭಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನ್ಯಾಯವಾದಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಜಿಲ್ಲಾಢಳತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ನ್ಯಾಯವಾದಿ ಎನ್.ಆರ್. ಲಾತೂರ್ ಮಾತನಾಡಿ, ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ಖಾಯಂ ಪೀಠ ಆಗಬೇಕು ಎಂದು ಆಗ್ರಹಿಸಿ ಕಳೆದ ಮೂರು ತಿಂಗಳ ಹಿಂದೆ ಎಲ್ಲ ನ್ಯಾಯವಾದಿಗಳು ಜಿಲ್ಲಾ ಕೋರ್ಟ ಆವರಣದಲ್ಲಿ ಪ್ರತಿಭಟನೆ ಮಾಡಿದ್ದೇವು. ನ್ಯಾಯಾಲಯದ ಕಲಾಪಕ್ಕೆ ಬಹಿಷ್ಕಾರ ಹಾಕಿ ಧರಣಿ ಮಾಡಿದ ಮೇಲೆ ಅನೇಕ ಜನಪ್ರತಿನಿಧಿಗಳು ಆಗಮಿಸಿ ನಮಗೆ ಭರವಸೆ ಕೊಟ್ಟಿದ್ದರು. ಬೆಳಗಾವಿಗೆ ರಾಜ್ಯ ಗ್ರಾಹಕರ ಖಾಯಂ ಪೀಠ ಮಂಜೂರಾಗಿದೆ. ಕೆಲವೇ ದಿನಗಳಲ್ಲಿ ಇಲ್ಲಿ ಕಾರ್ಯಾರಂಭ ಮಾಡುತ್ತೆ ಎಂದು ಮನವಲಿಸಿ ನಮ್ಮ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದ್ದರು. ಈಗ ಮೂರು ತಿಂಗಳು ಕಳೆದರೂ ಕೂಡ ನಮ್ಮ ಬೇಡಿಕೆ ಈಡೇರಿಲ್ಲ ಎಂದು ಕಿಡಿಕಾರಿದರು.

ಈ ವೇಳೆ ನ್ಯಾಯವಾದಿ ಅಣ್ಣಾಸಾಹೇಬ್‌ ಗೋರ್ಪಡೆ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠ ಆರಂಭಿಸುವಂತೆ ಆಗ್ರಹಿಸಿ ನ್ಯಾಯವಾದಿಗಳು ಮತ್ತು ವಿವಿಧ ಸಂಘಟನೆಗಳು ಹೋರಾಟ ಮಾಡಿಕೊಂಡು ಬಂದಿವೆ. ಆದರೂ ಈ ಬೇಡಿಕೆ ಕೇವಲ ಬೇಡಿಕೆಯಾಗಿಯೇ ಉಳಿದಿದೆ. ಶೀಘ್ರವೇ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠಕ್ಕಾಗಿ ಜಿಲ್ಲಾ ಗ್ರಾಹಕರ ಆಯೋಗದ ಕೋರ್ಟ ಕಟ್ಟಡ ಆಯ್ಕೆ ಮಾಡುವ ಹಾಗೂ ಹೆಚ್ಚುವರಿ ಗ್ರಾಹಕರ ಆಯೋಗವನ್ನು ಬೆಳಗಾವಿಯಲ್ಲಿ ಖಾಯಂಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನ್ಯಾಯವಾದಿಗಳು ಭಾಗವಹಿಸಿದ್ದರು./////