Belagavi News In Kannada | News Belgaum

ಶಾಸಕ ರಮೇಶ್ ಜಾರಕಿಹೊಳಿ ಬಗ್ಗೆ ವೈಯಕ್ತಿಕವಾಗಿ ನಮಗೆ ಪ್ರೀತಿಯಿದೆ: ಸಿಎಂ ಇಬ್ರಾಹಿಂ

ಬೆಳಗಾವಿ: ರಮೇಶ್ ಜಾರಕಿಹೊಳಿ ಬಗ್ಗೆ ವೈಯಕ್ತಿಕವಾಗಿ ನಮಗೆ ಪ್ರೀತಿ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ‌ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬೆಳಗಾವಿಯಲ್ಲಿಂದು ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರ್ಪಡೆ ಬಗ್ಗೆ ಊಹಾಪೋಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಮೇಶ ಜಾರಕಿಹೊಳಿ ಈ ಭಾಗದ ಪ್ರಬಲ ಹಿಂದುಳಿದ ನಾಯಕ. ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಿದ್ರು ತಪ್ಪು, ಬರಬೇಡ ಅಂದ್ರೂ ತಪ್ಪಾಗುತ್ತದೆ. ಫೋನ್‌ನಲ್ಲಿ ಹಲವು ಸಲ ಮಾತನಾಡಿದ್ದೇವೆ. ಆದರೆ ಜೆಡಿಎಸ್ ಸೇರ್ಪಡೆ ಸಂಬಂಧ ಚರ್ಚೆ ಆಗಿಲ್ಲ ಎಂದರು.
ಜೆಡಿಎಸ್ ಸೇರ್ಪಡೆ ಆಗುವವರ ಪಟ್ಟಿ ದೊಡ್ಡದಿದೆ. ಅದನ್ನು ಈಗಲೇ ಬಹಿರಂಗ ಪಡಿಸಲ್ಲ. ಬರುವವರೂ ಡಿಸೆಂಬರ್ ಒಳಗೆ ಜೆಡಿಎಸ್ ಸೇರ್ಪಡೆ ಆಗುವಂತೆ ಕೋರುತ್ತೇನೆ. ಡಿಸೆಂಬರ್ ಡೆಡ್‌ಲೈನ್ ಹಾಕಿರುವುದು ಏಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ನಮ್ಮಲ್ಲಿ ಎಷ್ಟು ಮಾಲಿದೆ ಎಂಬುದನ್ನು ನೋಡಿಕೊಳ್ಳಬೇಕು. ಹೀಗಾಗಿ ಡಿಸೆಂಬರ್ ಒಳಗೆ ಜೆಡಿಎಸ್ ಸೇರ್ಪಡೆ ಬಗ್ಗೆ ಖಚಿತಪಡಿಸಲು ಹೇಳಿದ್ದೇವೆ ಎಂದರು.
ಬಿಜೆಪಿ ಜೆಡಿಎಸ್ ಗುರಿ ಒಂದೇ, ಕಾಂಗ್ರೆಸ್ ಅಧಿಕಾರದಿಂದ ದೂರ ಇಡುವುದು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ್ನು ಸೋಲಿಸಬೇಕು ಓಕೆ, ಬಿಜೆಪಿಯವರೇನು ನಮ್ಮ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಾ..ಅವರು ಕಂಪನಿ ಸರ್ಕಾರದವರು, ಇವರೂ ಕಂಪನಿ ಸರ್ಕಾರದವರು. ಕನ್ನಡಕ್ಕೆ ಕೈ ಎತ್ತು ಎಂಬುದು ನಮ್ಮ ನಿಲುವು, ನಮ್ಮದು ಕನ್ನಡಿಗರ ಪಕ್ಷ ಎಂದು ಹೇಳಿದರು./////