Belagavi News In Kannada | News Belgaum

ಕನ್ನಡ ತೇರು ಎಳೆಯಲು ಹುಕ್ಕೇರಿ ಸಜ್ಜು

ಹುಕ್ಕೇರಿ : ರಾಜ್ಯದ ಗಡಿನಾಡು, ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಹೆಸರುವಾಸಿಯಾದ ಹುಕ್ಕೇರಿಯಲ್ಲಿ ಇದೇ ಬುಧವಾರ ದಿ.23 ರಂದು ನಡೆಯಲಿರುವ 67ನೇ ಕರ್ನಾಟಕ ರಾಜ್ಯೋತ್ಸವಕ್ಕೆ ಪಟ್ಟಣ ನವವಧುವಿನಂತೆ ಶೃಂಗಾರಗೊಂಡಿದ್ದು, ಕನ್ನಡ ತೇರು ಎಳೆಯಲು ಹುಕ್ಕೇರಿ ಜನತೆ ಸಜ್ಜಾಗಿದ್ದಾರೆ.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಾಗತ ಕಮಾನಗಳನ್ನು ನಿರ್ಮಿಸಲಾಗಿದೆ. ಪಟ್ಟಣ ಪ್ರವೇಶಿಸುವ ಮತ್ತು ಒಳ ರಸ್ತೆಗಳುದ್ದಕ್ಕೂ ಕನ್ನಡ ಧ್ವಜಗಳು, ತಳಿರು-ತೋರಣಗಳನ್ನು ಕಟ್ಟಲಾಗಿದೆ. ರಸ್ತೆಯ ವಿಭಜಕಗಳಲ್ಲಿ ಹಳದಿ ಮತ್ತು ಕೆಂಪು ಬಣ್ಣವುಳ್ಳ ಬಟ್ಟೆಯಿಂದ ಶೃಂಗರಿಸಲಾಗಿದೆ. ಪ್ರಮುಖ ವೃತ್ತಗಳು ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸುತ್ತಿವೆ.

ಆಯಕಟ್ಟಿನ ಸ್ಥಳಗಳು ಬ್ಯಾನರ್, ಕಟೌಟ್‍ಗಳಿಂದ ರಾರಾಜಿಸುತ್ತಿವೆ. ಈ ಮೂಲಕ ಬೃಹತ್ ಪ್ರಮಾಣದಲ್ಲಿ ನಡೆಯಲಿರುವ ಕನ್ನಡದ ಜಾತ್ರೆಗೆ ಹುಕ್ಕೇರಿ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾಗಲಿದೆ.
ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದ್ದು ಕನ್ನಡದ ಮನಸ್ಸುಗಳು ಈ ಅದ್ದೂರಿ ರಾಜ್ಯೋತ್ಸವಕ್ಕೆ ಕಾತರದ ಕ್ಷಣಗಳನ್ನು ಎಣಿಸುತ್ತಿವೆ. ಈ ನುಡಿ ಜಾತ್ರೆಯ ತೇರು ಎಳೆಯಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲ ದಿಕ್ಕುಗಳಲ್ಲಿ ಕನ್ನಡದ ವಾತಾವರಣ ಇಮ್ಮಡಿಗೊಂಡಿದೆ. ಪ್ರಮುಖ ಬೀದಿಗಳಲ್ಲಿ ಸಂಚರಿಸಲಿರುವ ವಿವಿಧ ರೂಪಕಗಳು ಐತಿಹಾಸಿಕ ಪರಂಪರೆ ಬಿಂಬಿಸುವ ಮತ್ತು ಕಲಾ ತಂಡಗಳ ಪ್ರದರ್ಶನವು ನಾಡು-ನುಡಿ, ನೆಲ-ಜಲ, ಭಾಷೆ-ಸಂಸ್ಕøತಿ, ಆಚಾರ-ವಿಚಾರ ಅನಾವರಣಗೊಳ್ಳಲಿದೆ.


ಕನ್ನಡದ ಅಸ್ಮಿತೆ ಅನಾವರಣಗೊಳಿಸುವ ದಿಸೆಯಲ್ಲಿ ಕುಂದಾನಗರಿ ಬೆಳಗಾವಿ ಮಾದರಿಯಲ್ಲಿ ಹುಕ್ಕೇರಿ ಪಟ್ಟಣದಲ್ಲೂ ಭವ್ಯ ರಾಜ್ಯೋತ್ಸವಕ್ಕೆ ಅಂತಿಮ ಹಂತದ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ. ನಾಡು-ನುಡಿ ಕುರಿತಾದ ಸಂಗೀತದ ನಾದಮೇಳಕ್ಕೆ ಯುವಕರು ಕುಣಿದು ಕುಪ್ಪಳಿಸಲು ಕಾತರರಾಗಿದ್ದು ಕನ್ನಡದ ಅಬ್ಬರದ ಕೂಗು ಕಿವಿಗಪ್ಪಳಿಸಲಿದೆ. ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಕನ್ನಡದ ಮನಸ್ಸುಗಳು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸೇರುವ ನಿರೀಕ್ಷೆ ಇದೆ.
ಈ ಕನ್ನಡದ ಜಾತ್ರೆಗೆ ಕರ್ನಾಟಕ ರಾಜ್ಯೋತ್ಸವ ಉತ್ಸಾಹಿ ಸಮಿತಿ ಹಾಗೂ ವಿವಿಧ ಕನ್ನಡಪರ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಟೊಂಕ ಕಟ್ಟಿ ನಿಂತು ಹಗಲಿರುಳು ಕೆಲಸ ಮಾಡುತ್ತಿವೆ. ಅದರಂತೆ ಯುವ ಸಮೂಹವೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ರಾಜ್ಯೋತ್ಸವಕ್ಕೆ ತಮ್ಮದೇ ರೀತಿಯಲ್ಲಿ ಸಜ್ಜುಗೊಂಡಿವೆ. ತನ್ಮೂಲಕ ಕನ್ನಡವೇ ಪ್ರಾಣಪದಕ ಎನ್ನುವುದನ್ನು ನಿರೂಪಿಸಲು ಹೊರಟಿದ್ದು ಹೆಮ್ಮೆಯ ಸಂಗತಿ.
ಇನ್ನು ಕನ್ನಡದ ಖ್ಯಾತ ನಟರಾದ ದ್ರುವ ಸರ್ಜಾ, ಡಾಲಿ ಧನಂಜಯ ಈ ಐತಿಹಾಸಿಕ ರಾಜ್ಯೋತ್ಸವದಲ್ಲಿ ಭಾಗವಹಿಸಲಿದ್ದು ಕನ್ನಡದ ಹಬ್ಬದ ಮೆರಗನ್ನು ಮತ್ತಷ್ಟು ಹೆಚ್ಚಿಸಲಿದೆ. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಕ್ಯಾರಗುಡ್ ಅವುಜಿಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮತ್ತಿತರರು ಈ ನಾಡಿನ ಜಾತ್ರೆಗೆ ಸಾಕ್ಷಿಯಾಗಲಿದ್ದಾರೆ.
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ವಿವಿಧತೆಯಲ್ಲಿ ಏಕತೆ, ಸರ್ವಧರ್ಮಗಳಲ್ಲಿ ಸಮನ್ವಯತೆ, ಕಲೆ ಸಂಸ್ಕøತಿಗಳಲ್ಲಿ ವೈವಿಧ್ಯತೆಯ ಹೊಂದಿದೆ. ಒಟ್ಟಿನಲ್ಲಿ ಅನ್ಯಧರ್ಮ ಹಾಗೂ ಪರರ ವಿಚಾರಗಳನ್ನು ಸಹಿಸಿಕೊಳ್ಳುವ ಚಿನ್ನದಂಥ ಜನರು ಎನ್ನುವುದನ್ನು ಮತ್ತೊಮ್ಮೆ ಸಾರುವ ಉದ್ದೇಶವೇ ಈ ಅದ್ದೂರಿ ರಾಜ್ಯೋತ್ಸವವಾಗಿದೆ.