Belagavi News In Kannada | News Belgaum

ಬಸವಣ್ಣನವರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ ಅವರು ಜಗದಬೆಳಗು: ಪ್ರೊ. ಎಸ್.ಎಂ.ಗಂಗಾಧರಯ್ಯ ಮಹಾಸಭೆಯಲ್ಲಿ ಅಮವಾಸ್ಯೆ ಅನುಭಾವ ಗೋಷ್ಠಿ

ಬೆಳಗಾವಿ: ಬಸವಣ್ಣನವರನ್ನು ಒಂದು ಸಮುದಾಯಕ್ಕೆ ಬಂಡವಾಳ ಮಾಡುವುದು ಸೂಕ್ತವಲ್ಲ. ಅವರೊಬ್ಬ ಅದ್ಭುತ ಮನೋವಿಶ್ಲೇಷಕ, ಆರ್ಥಿಕ ಚಿಂತಕ, ಅನುಭಾವಿ, ಸಾಮಾಜಿಕ ಹೋರಾಟಗಾರ. ಒಂದು ನೆಲೆಯಲ್ಲಿ ಹೇಳಬೇಕೆಂದರೆ ಯುಗದ ಉತ್ಸಾಹ. ಅವರ ಮೌಲ್ಯಗಳನ್ನು ಅರಿಯುವ ಸೂಕ್ಷ್ಮ ದೃಷ್ಟಿಕೋನ ನಮ್ಮದಾಗಬೇಕೆಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಎಂ. ಗಂಗಾಧರಯ್ಯನವರು ಹೇಳಿದರು.

ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಬೆಳಗಾವಿಯ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ಹರಿಹರನ ಬಸವರಾಜ ದೇವರರಗಳೆ ಒಂದು ಪ್ರತ್ಯಾವಲೋಕನ ವಿಷಯ ಕುರಿತು ಮಾತನಾಡಿದರು. ಹರಿಹರನು ಬಸವಣ್ಣನವರ ಬದುಕನ್ನು ಹತ್ತಿರದಿಂದ ನೋಡಿದ ಮಹಾಕವಿ. ಬಸವಣ್ಣನವರ ಜೀವನದ ಮೇಲೆ ಬೆಳಕು ಚೆಲ್ಲುವುದರ ಮೂಲಕ ಅವರ ಬದುಕಿನ ಸಾಧನೆಯ ಮುಖಗಳನ್ನು ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಕಟ್ಟಿಕೊಡುತ್ತಾನೆ. ಬಸವಣ್ಣನವರು ಒಬ್ಬ ವ್ಯಕ್ತಿಯಾಗದೇ ದೇವಮಾನವರಾಗಿ ಭುವಿಯ ಕಲ್ಮಷಗಳನ್ನು ತೊಡೆದುಹಾಕುವ ಕಾರಣಕರ್ತರಾಗುತ್ತಾರೆ. ಸಮಾನತೆಯ ಹರಿಕಾರರಾಗಿರುವ ಅವರು ಮಾಡಿದನೆನ್ನದೆ ಬದುಕನ್ನು ಶಿವಾರ್ಪಿತಗೊಳಿಸಿದ ಮಹಾಶರಣ ಎಂಬ ಹರಿಹರನ ವಿಚಾರಗಳು ಇಂದಿಗೂ ಪ್ರಸ್ತುತವೆನಿಸಿದೆ. ಹರಿಹರನ ರಗಳೆಯನ್ನು ಮತ್ತೊಮ್ಮೆ ಅವಲೋಕನ ಮಾಡುವುದು ಇಂದಿನ ಅಗತ್ಯತೆ ಉಂಟೆಂದು ಹೇಳಿದರು. ಬಸವಣ್ಣನವರ ಸಂದೇಶಗಳು ಒಂದು ಸಮಾಜಕ್ಕೆ ಸೀಮಿತಗೊಳ್ಳದೇ ಸರ್ವಜನಾಂಗಕ್ಕೂ ಮನನೀಯ ಹಾಗೂ ಆದರ್ಶನೀಯವೆನಿಸಿವೆ. ಜಾತಿ ಮತ ಕುಲಗಳನ್ನು ಮೀರಿ ಬಸವಣ್ಣನವರು ನಿಲ್ಲುತ್ತಾರೆ. ಅವರ ಸಂದೇಶಗಳು ವಿಶ್ವಸಂದೇಶಗಳಾಗಿವೆ. ಕನ್ನಡ ಬಹುಕಾವ್ಯಗಳು ಬಸವಣ್ಣನವರ ಬದುಕಿನ ಚಿತ್ರಣವನ್ನು ಅದ್ಭುತವಾಗಿ ಕಟ್ಟಿಕೊಟ್ಟಿವೆ ಅವುಗಳನ್ನು ಮನನಮಾಡಿಕೊಳ್ಳುವುದು ಅವಶ್ಯವೆಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮಹಾಸಭೆಯ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ, ಬಸವಣ್ಣನವರ ಕುರಿತು ಹರಿಹರ ಕವಿಯ ಕಾವ್ಯ ಇಂದಿಗೂ ಜೀವಂತವಾಗಿದೆ. ಯುಗದ ಚೇತನವಾಗಿದ್ದ ಅಣ್ಣನವರ ಸಂದೇಶಗಳ ದಾರಿಯಲ್ಲಿ ಯುವಜನಾಂಗವನ್ನು ರೂಪಿಸುವುದು ಅಗತ್ಯವೆನಿಸಿದೆ. ವಚನಗಳು ನಮ್ಮ ಬದುಕಿನ ಕತ್ತಲೆಯನ್ನು ಹೊಡೆದೊಡಿಸುವ ಪ್ರಬಲ ಅಸ್ತ್ರಗಳಾಗಿವೆ. ಬದುಕಿನಗೆ ಒಂದು ಸಂಸ್ಕಾರಗಳನ್ನು ನೀಡುತ್ತವೆ. ಮಹಾಸಭೆ ಕಾಲಕಾಲಕ್ಕೆ ಅಂತಹ ಉಪನ್ಯಾಸಗಳನ್ನು ಆಯೋಜಿಸುವ ಮೂಲಕ ಚಿಂತನೆ ಅವಕಾಶವನ್ನು ಕಲ್ಪಿಸುತ್ತಿದೆ. ಸಮಾಜದವರು ಅವರ ಪ್ರಯೋಜನವನ್ನು ಪಡೆಯಬೇಕೆಂದು ಹೇಳಿದರು.

ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಮಹಾಸಭೆ ತನ್ನ ರಚನಾತ್ಮಕವಾದ ಕಾರ್ಯಗಳಿಂದ ಗುರುತಿಸಿಕೊಂಡಿದೆ. ಇಂದಿಗೂ ನಮ್ಮಲ್ಲಿ ಜಾತಿ ಒಳಜಾತಿ ಪಂಗಡವೆಂಬ ಆಷಾಡಿಭೂತತನಕ್ಕೆ ಜೋತುಬಿದ್ದಿದ್ದಿವೆ. ಬಸವಣ್ಣನವರು ಹೇಳಿದಂತೆ ಸಾಮಾಜಿಕ ಸ್ಥರಗಳನ್ನು ತೊರೆದು ಸಹಬಾಳ್ವೆಯಲ್ಲಿ ಜೀವನದ ಆನಂದ ಅಡಗಿದೆ. ನಮ್ಮ ಉತ್ತಮವಾದ ನಡೆ-ನುಡಿ, ಆಚಾರ-ವಿಚಾರಗಳು ನಮ್ಮ ಮಹಾದೇವನನ್ನಾಗಿ ರೂಪಿಸುತ್ತವೆ ಎಂದು ಹೇಳಿದರು.

ಡಾ.ರೋಹಿಣಿ ಕೆ.ಎಂ. ವಚನ ಪ್ರಾರ್ಥನೆಯನ್ನು ಸಲ್ಲಿಸಿದರು. ಶೈಲಜಾ ಸಂಸುದ್ದಿ ಅತಿಥಿಗಳನ್ನು ಪರಿಚಯಿಸಿದರು. ಶಾರದಾ ಪ್ರಸಾದ ಹಿರೇಮಠ ವಚನ ವಿಶ್ಲೇಷಣೆ ಮಾಡಿದರು. ಡಾ.ಮಹೇಶ ಗುರನಗೌಡರ ಸ್ವಾಗತಿಸಿದರು. ಸುಧಾ ಪಾಟೀಲ ನಿರೂಪಿಸಿದರು. ನ್ಯಾಯವಾದಿ ವಿ.ಕೆ.ಪಾಟೀಲ ವಂದಿಸಿದರು. ಡಾ.ಎಚ್.ಬಿ.ರಾಜಶೇಖರ, ಜ್ಯೋತಿ ಭಾವಿಕಟ್ಟಿ, ಡಾ.ಗುರುದೇವಿ ಹುಲೆಪ್ಪನವರಮಠ, ಪ್ರೊ.ಎ.ಬಿ.ಕೊರಬು ಮೊದಲಾದ ಗಣ್ಯರು ಉಪಸ್ಥಿತರಿದ್ದರು.//////