Belagavi News In Kannada | News Belgaum

ಕರ್ನಾಟಕಕ್ಕೆ ಸೇರಲು ಮಹಾರಾಷ್ಟ್ರದಲ್ಲಿ ಹೆಚ್ಚಾದ ಹೋರಾಟ; ರಾಜ್ಯದ ಹೊಸ ನಕ್ಷೆ ಎಲ್ಲೆಡೆ ವೈರಲ್

ಬೆಳಗಾವಿ: ಗಡಿ ವಿಚಾರದಲ್ಲಿ ಸದಾ ಕಿರಿಕಿರಿ ಸೃಷ್ಟಿಸುತ್ತಿದ್ದ ಮಹಾರಾಷ್ಟ್ರ ಸರ್ಕಾರಕ್ಕೆ ಈಗ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಒಂದು ಕಡೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಜನ ಕರ್ನಾಟಕಕ್ಕೆ ಸೇರುವ ಆಸೆಯನ್ನು ಹೊರ ಹಾಕಿದ್ದು ಮತ್ತೊಂದೆಡೆ ಹೋರಾಟಗಾರರು ಕರ್ನಾಟಕದ ಹೊಸ ನಕ್ಷೆ ತಯಾರು ಮಾಡಿದ್ದಾರೆ. ಹೊಸ ನಕ್ಷೆ ಎಲ್ಲೆಡೆ ವೈರಲ್ ಆಗುತ್ತಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರ ಉಭಯ ರಾಜ್ಯಗಳ ಗಡಿ ವಿಚಾರ ಉಲ್ಬಣಗೊಂಡಿದೆ. ಮಹಾರಾಷ್ಟ್ರದ ಜತ್ ತಾಲೂಕಿನಲ್ಲಿ ಹೋರಾಟ ಜೋರಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಗ್ರಾಮಗಳು ಕರ್ನಾಟಕ ರಾಜ್ಯ ಸೇರಲು ಉತ್ಸುಕರಾಗಿದ್ದಾರೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸೇರಲು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಗ್ರಾಮಸ್ಥರು ತಿಕ್ಕುಂಡಿ ಗ್ರಾಮದಲ್ಲಿ ಕನ್ನಡ ಬಾವುಟಗಳನ್ನ ಹಾಕಿ ಜೈ ಕರ್ನಾಟಕ ಎಂಬ ಫಲಕಗಳನ್ನ ಅಳವಡಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಗ್ರಾಮ ದ್ವಾರ ಬಾಗಿಲಿಗೆ ಜೈ ಕರ್ನಾಟಕ ಎಂದು ಬರೆದಿರುವ ಬ್ಯಾನರ್ ಅಳವಡಿಸಲಾಗಿದೆ. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕೈಯಲ್ಲಿ ಕನ್ನಡದ ಬಾವುಟ ಹಿಡಿದು ಜೈಕಾರ ಹಾಕಿದ್ದಾರೆ. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಭಾವಚಿತ್ರ ಪ್ರದರ್ಶನ ಮಾಡಿದ್ದಾರೆ. ಜತ್ ಭಾಗದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನೆಪದಲ್ಲಿ ಕನ್ನಡ ಬಾವುಟ ಹಾಗೂ ಸಿಎಂ ಬೊಮ್ಮಾಯಿ ಇರುವ ಭಾವಚಿತ್ರದ ಬ್ಯಾನರ್​ಗಳನ್ನು ಅಲ್ಲಿನ ಪೊಲೀಸರು ತೆರವುಗೊಳಿಸಿದ್ದಾರೆ. ನಮ್ಮ ಗ್ರಾಮದಲ್ಲಿ ಕನಿಷ್ಠ ನೀರನ್ನು ಸಹ ಮಹಾರಾಷ್ಟ್ರ ಸರ್ಕಾರ ನೀಡುತ್ತಿಲ್ಲ. ಅಭಿವೃದ್ಧಿಗಾಗಿ ನಾವು ಕರ್ನಾಟಕಕ್ಕೆ ಸೇರಲು ಸಿದ್ದರಿದ್ದೇವೆ ಎಂದ ತಿಕ್ಕುಂಡಿ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಹೊಸ ಕರ್ನಾಟಕ ಎಂಬ ನಕ್ಷೆ ವೈರಲ್: 
ಕರ್ನಾಟಕಕ್ಕೆ ಸೇರಲು ಉತ್ಸುಕರಾಗಿರುವವರು ಹೊಸ ನಕ್ಷೆಯನ್ನು ತಯಾರು ಮಾಡಿದ್ದಾರೆ. ಪ್ರಸ್ತುತ ಇರುವ ನಕ್ಷೆಗೆ ಮಹಾರಾಷ್ಟ್ರದ ಕೆಲ ಜಿಲ್ಲೆಗಳನ್ನು ಸೇರಿಸಿ ಹೊಸ ನಕ್ಷೆ ತಯಾರು ಮಾಡಿದ್ದಾರೆ. ನಕ್ಷೆಯಲ್ಲಿ ಕರ್ನಾಟಕಕ್ಕೆ ಸೋಲಾಪುರ, ಉಸ್ಮನಬಾದ್​, ಲಾತೂರು, ಸಂಗಲ್ಕಿ ಮತ್ತು ಕೊಲ್ಹಾಪುರ ಜಿಲ್ಲೆಗಳನ್ನು ಸೇರಿಸಲಾಗಿದೆ./////