Belagavi News In Kannada | News Belgaum

ಅಲೆಮಾರಿ-ಅರೆ ಅಲೆಮಾರಿ ಜನಾಂಗ ಸಲಹಾ/ಪ್ರಗತಿ ಪರಿಶೀಲನಾ ಸಮಿತಿ ಸಭೆ

ಅಲೆಮಾರಿ ಜನಾಂಗಗಳು ಸೌಲಭ್ಯ ಪಡೆದುಕೊಳ್ಳಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ  

ಬೆಳಗಾವಿ:  ಹಿಂದುಳಿದ ವರ್ಗಗಳ ಅಲೆಮಾರಿ ಜನಾಂಗಗಳಿಗೆ ಸ್ವಯಂ ಉದ್ಯೋಗ ಸಾಲ, ನೇರ ಸಾಲ, ಗಂಗಾ ಕಲ್ಯಾಣ, ಅರಿವು ಸಾಲ ಯೋಜನೆ ಸೇರಿದಂತೆ ವಿವಿಧ ಯೋಜನೆಯಡಿ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ (ಡಿ.1) ನಡೆದ ಅಲೆಮಾರಿ-ಅರೆ ಅಲೆಮಾರಿ ಜನಾಂಗದ ಜಿಲ್ಲಾ ಮಟ್ಟದ ಸಲಹಾ/ಪ್ರಗತಿ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಅಲೆಮಾರಿ ಜನಾಂಗದವರಿಗೆ ವಿವಿಧ ಆರ್ಥಿಕ ಸೌಲಭ್ಯಗಳಿವೆ.
ಗಂಗಾ ಕಲ್ಯಾಣ ಯೋಜನೆ, ವಯಕ್ತಿಕ ಕೊಳವೆ ಬಾವಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ವಿದ್ಯುತ್ ಸಂಪರ್ಕ ಕಲ್ಪಿಸಲು ಮನವಿ:
ಘಟಪ್ರಭದಲ್ಲಿ ನೆಲೆಸಿರುವ ಅಲೆಮಾರಿ ಜನಾಂಗಕ್ಕೆ ನಿರಂತರ ಜ್ಯೋತಿ ಸೌಲಭ್ಯ ಒದಗಿಸಲು ಈ ಮೊದಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಆದರೆ ಈ ವರೆಗೂ ವಿದ್ಯುತ್ ಸಂಪರ್ಕ ನೀಡಲಿಲ್ಲ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕೂಡಲೇ ವಿದ್ಯುತ್ ಸಂಪರ್ಕ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ವಸತಿ ಸೌಲಭ್ಯ ಕಲ್ಪಿಸಲು ಭರವಸೆ:
ಈ ವೇಳೆ ಮಾತನಾಡಿದ ಸಮಾಜದ ಮುಖಂಡರಾದ ರಾಜಶೇಖರ ಅವರು ಅಲೆಮಾರಿ ಜನಾಂಗಕ್ಕೆ ವಸತಿ ಮನೆಗಳ ಸೌಲಭ್ಯಗಳ ನೀಡಲಾಗಿದೆ. ಈಗಾಗಲೇ ರಾಜೀವ ಗಾಂಧಿ ವಸತಿ ನಿಗಮದಿಂದ ಮನೆಗಳು ಮಂಜೂರು ಆಗಿದ್ದು, 160 ರಲ್ಲಿ 55 ಮನೆಗಳು ಮಾತ್ರ ನೀಡಲಾಗಿದೆ ಕೂಡಲೇ ಬಾಕಿ ಅರ್ಜಿಗಳನ್ನು ಪರಿಶೀಲಿಸಿ ವಸತಿ ಮನೆಗಳನ್ನು ಮಂಜೂರು ಮಾಡಬೇಕು.
ಅದೇ ರೀತಿಯಲ್ಲಿ ಕೆಲವೆಡೆ ತಾಂತ್ರಿಕ ತೊಂದರೆಯಿಂದ ಜಿಪಿಎಸ್ ಆಗಲು ಸಮಸ್ಯೆ ಆಗಿವೆ ಇದಕ್ಕೆ ಸ್ಪಂದಿಸಲು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಇದಕ್ಕೆ ಸಂಭಂದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ತಾಂತ್ರಿಕ ತೊಂದರೆ ಬಗೆ ಹರಿಸಲಾಗುವುದು. ಅರ್ಹ ಫಲಾನುಭವಿಗಳ ಬಾಕಿ ಉಳಿದಿರುವ ಮನೆಗಳ ಅರ್ಜಿಗಳನ್ನು ಮಂಜೂರು ಮಾಡಲು ಸೂಚನೆ ನೀಡಿದರು.
ಅಲೆಮಾರಿ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ನೀಡಿ:
ಅಲೆಮಾರಿ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಿಗೆ ಪ್ರವೇಶ ನೀಡಲಾಗುತ್ತಿದೆ ಆದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಅನುದಾನ ನೀಡಿದ ಕಾರಣ ಈಗ ಶಾಲಾ ಪ್ರವೇಶ ಪಡೆಯಲು ಆಗುತ್ತಿಲ್ಲ ಎಂದು ಮನವಿ ಮಾಡಿಕೊಂಡರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಮಾನದಂಡಗಳ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಕ್ಷ್ಮಣ ಬಬಲಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಸುಚಿಂದ್ರ ಕುಲಕರ್ಣಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಬ್ದುಲ್ ರಶೀದ್ ಮಿರ್ಜನ್ನವರ, ಜಿಲ್ಲಾ ಅಲೆಮಾರಿ/ಅರೆ ಅಲೆಮಾರಿ ಮತ್ತು ಬುಡಕಟ್ಟುಗಳ ಅಭಿವೃದ್ದಿ ಸಂಘದ ಅಧ್ಯಕ್ಷರಾದ ಅಮೃತ ದಪ್ಪಿನವರ, ಕಾರ್ಯದರ್ಶಿ ನಟರಾಜ ದುರ್ವೆ, ಖಜಾಂಚಿ ಕಲ್ಪನಾ ಜೋಶಿ, ಸದಸ್ಯರಾದ ಉದ್ದಪ್ಪ ಹೆಳವರ, ಮಂಜುನಾಥ ಹೆಳವರ, ಲಕ್ಷ್ಮಣ ಬೈಲಪತರ, ಸುರೇಶ ಗೊಂದಳಿ, ಚಿನ್ನಪ್ಪ ದುರಮರ್ಗಿ ಸಭೆಯಲ್ಲಿ ಉಪಸ್ಥಿತರಿದ್ದರು.//////