Belagavi News In Kannada | News Belgaum

ಕೇರಳದಲ್ಲಿ ಕನ್ನಡ ಕಹಳೆ: ಶಬರಿಮಲೆ ಸನ್ನಿಧಾನದಲ್ಲಿ ಕನ್ನಡ ಪುಸ್ತಕ ಬಿಡುಗಡೆ

“ಕುಪ್ಪಳ್ಳಿಯಲ್ಲಿ ಕುವೆಂಪು, ಕನ್ನಡದ ಕಂಪು”, “ಕನ್ಯಾಕುಮಾರಿಯಲ್ಲಿ ಕನ್ನಡದ ತೇರು”, “ಕಾಶಿ, ನೇಪಾಳದಲ್ಲಿ ಕನ್ನಡ ಪುಸ್ತಕಗಳ ಬಿಡುಗಡೆ”, ಗಾಂಧಿ ಭವನದಲ್ಲಿ ರಾಜ್ಯಮಟ್ಟದ “ಪ್ರಥಮ ಕವಿ- ಕಲಾವಿದರ ಸಮ್ಮೇಳನ” ಗಳಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲೊಂದು ಹೊಸ ವಿಕ್ರಮ ಸ್ಥಾಪಿಸಿರುವ ತಂಡವು ಇದೀಗ ಮತ್ತೊಂದು ಕನ್ನಡ ಕಹಳೆ ಊದಿದೆ. ಜ್ಞಾನಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ ವೇದಿಕೆ ಹಾಗೂ ನೆಲಮಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತೊಂದು ವಿಭಿನ್ನವಾದ, ವಿಶಿಷ್ಟವಾದ, ವಿಶೇಷವಾದ ಕಾರ್ಯಕ್ರಮದ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಇಲ್ಲಿಯವರೆಗೂ ಯಾರೂ ಮಾಡಲಾಗದ ಹೊಸ ಸಾಹಸಗಾಥೆ ಇದಾಗಿದೆ.

18ನೇ ವರ್ಷದ ಶಬರಿಮಲೆ ಯಾತ್ರೆ ಹಾಗೂ ಆರು ದಿನಗಳ ತಮಿಳುನಾಡು ಪ್ರವಾಸ ದೊಂದಿಗೆ ಶಬರಿಮಲೆಯ ಸನ್ನಿಧಾನದಲ್ಲಿ ಪುಸ್ತಕ ಬಿಡುಗಡೆ ಹಾಗೂ ರಾಮೇಶ್ವರದ ಡಾ.ಅಬ್ದುಲ್ ಕಲಾಂ ರವರ ಮನೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ಶಬರಿಗಿರಿಯ ಸನ್ನಿಧಾನದಲ್ಲಿ ತಮ್ಮ ಕೃತಿ “ಭಾವ ಗಾನ” ಕವನ ಸಂಕಲನವು ಸಾಂಕೇತಿಕವಾಗಿ ಅನಾವರಣಗೊಂಡ ನಂತರ ಲೇಖಕ, ಅಂಕಣಕಾರ ಮಣ್ಣೆ ಮೋಹನ್ ಮಾತನಾಡಿದರು.

“ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಪವಿತ್ರ ಸನ್ನಿಧಾನದಲ್ಲಿ,ಪ್ರಥಮ ಬಾರಿಗೆ ಕನ್ನಡ ಪುಸ್ತಕವೊಂದು ಬಿಡುಗಡೆಯಾಗುವ ಮೂಲಕ, ಕನ್ನಡದ ಕೀರ್ತಿ ಪತಾಕೆ ಕೇರಳಕ್ಕೂ ವಿಸ್ತರಣೆಯಾಗಿದೆ. ಆ ಮೂಲಕ ಕನ್ನಡಿಗರು ವೀರಕಲಿಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಶ್ರೇಯ ನಿಮ್ಮೆಲ್ಲರದ್ದು. ಕನ್ನಡ ಸಾಹಿತ್ಯ ಲೋಕದ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಇದು ಕನ್ನಡ ಭುವನೇಶ್ವರಿಯ ಕಿರೀಟಕ್ಕೆ ಮತ್ತೊಂದು ಗರಿ ತೊಡಿಸಿದಂತೆ. ಮುಂದಿನ ದಿನಗಳಲ್ಲಿ ಭಾರತದ ಪ್ರತಿ ರಾಜ್ಯಗಳಲ್ಲೂ ಕನ್ನಡ ಕೃತಿಗಳನ್ನು ಹೊರತಂದು, ಕನ್ನಡ ಡಿಂಡಿಮವನ್ನು ರಾಷ್ಟ್ರದಾದ್ಯಂತ ಮೊಳಗಿಸಿ, ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಲಾಗುವುದು” ಎಂದು ಅವರು ತಿಳಿಸಿದರು.

ನೆಲಮಂಗಲ ತಾಲೂಕು ಕಸಾಪ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಅವರು ಮಾತನಾಡಿ “ಹೊರ ರಾಜ್ಯದಲ್ಲಿ ಕನ್ನಡ ಪುಸ್ತಕ ಬಿಡುಗಡೆಗೊಂಡಿರುವುದು ಕನ್ನಡಿಗರೆಲ್ಲರೂ ಹೆಮ್ಮೆಪಡುವ ವಿಚಾರವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು. ಕಸಾಪ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮೂರ್ತಿ ಅವರು ಮಾತನಾಡಿ “ಮಣ್ಣೆ ಮೋಹನ್ ಸಾರಥ್ಯದಲ್ಲಿ ಹೊಸಸಾಹಸಗಳ ಮೂಲಕ ಕನ್ನಡ ಸಾಹಿತ್ಯದ ಕೀರ್ತಿ ಕಳಸವನ್ನು ದಿಗಂತದವರೆಗೂ ಕೊಂಡೊಯ್ಯುತ್ತೇವೆ” ಎಂದು ಘೋಷಿಸಿದರು.

ಮಲ್ಲಿಕಾರ್ಜುನ್, ಡಾ. ವೇಣುಗೋಪಾಲ್, ನರಸಿಂಹಯ್ಯ, ಪುಷ್ಪಾ, ರಾಜೇಶ್ವರಿ ಹೆಗಡೆ, ನಾಗಮ್ಮ, ಕುಮಾರಿ ಋಥ್ವಿಕ ಪ್ರಿಯದರ್ಶಿನಿ, ಕಮಲಮ್ಮ, ನಾಗರತ್ನ, ಶಾರದಮ್ಮ, ಸುನಂದಮ್ಮ, ಇಂದ್ರಮ್ಮ, ಸುಭದ್ರಮ್ಮ, ಚಿಕ್ಕತಾಯಮ್ಮ ಮಂಗಳ ಗೌರಮ್ಮ ಮುತ್ತುಲಕ್ಷ್ಮಿ, ಶಿವಣ್ಣ, ಬಾಲಕೃಷ್ಣ, ಮಂಜುನಾಥ್ ನಾಗಯ್ಯ ಮುಂತಾದ ಇಪ್ಪತ್ತಕ್ಕೂ ಹೆಚ್ಚು ಯಾತ್ರಿಕರನ್ನೊಳಗೊಂಡ ಕರ್ನಾಟಕದ ತಂಡ ಕಾರ್ಯಕ್ರಮದಲ್ಲಿ ಉಪಸ್ಥಿತವಿತ್ತು. ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ರೂಪ, ಕವಯಿತ್ರಿ ಪರಿಮಳ, ಚಿಂತಕಿ ಸರಸ್ವತಿ ಹೆಗಡೆ, ಪದ್ಮಾ, ರಂಜಿತಾ ರವರು ತಂಡದ ಭಾಗವಾಗಿದ್ದರು.//////