Belagavi News In Kannada | News Belgaum

ಮಾಜಿ ಸೈನಿಕರಿಗೆ ಸರ್ಕಾರದಿಂದ ಸೂಕ್ತ ಸ್ಥಾನಮಾನ ಸಿಗಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಬೆಳಗಾವಿ: 75 ವರ್ಷಗಳಲ್ಲಿ ನಮ್ಮ ಸರ್ಕಾರ ಹಿಡಿದು ಎಲ್ಲ ಸರ್ಕಾರಗಳು ಸೈನಿಕರನ್ನು ನಿರ್ಲಕ್ಷ್ಯ ಮಾಡಿವೆ. ದೇಶ ಕಾಯುವ ಕಾಯಕವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಿ ನಿವೃತ್ತಿ ಜೀವನ ನಡೆಸುತ್ತಿರುವ ಮಾಜಿ ಸೈನಿಕರಿಗೆ ಸರ್ಕಾರದಿಂದ ಸೂಕ್ತ ಸ್ಥಾನ ಮಾನ ಸಿಗುವಂತಾಗಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

 

ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಉದ್ಘಾಟಿಸಿ ಅವರು ಮಾತನಾಡಿ,  ಸೈನಿಕರು ಯಾವಗಲೂ ಸಮಯಕ್ಕೆ ಬದ್ದರಾಗಿರುತ್ತಾರೆ. ನಮ್ಮದು ಸಹ ದೇಶ ಕಾಯುವ ಸೈನಿಕರ ಜತೆ ಸಾಕಷ್ಟು ಒಡನಾಟವಿದ್ದು, ಅವರ ಅನುಭವ ನಮಗೆ ಗೊತ್ತಿದೆ. ಅವರು ನಮಗೆ ಭೇಟಿಯಾದಾಗ ಅವರಲ್ಲಿರುವ ಸಮಸ್ಯೆಯನ್ನು ಹೇಳುತ್ತಿರುತ್ತಾರೆ.  ಇಂದು ಹೊಸ ಯೋಧರಿಗೆ ಟ್ರೇನಿಂಗ್‌ ನೀಡಲು ಸಾಕಷ್ಟು ಖರ್ಚಾಗಲಿದ್ದು, ನೂರಿತ ಯೋಧರ ಸೇವೆಯನ್ನು ಇಂದು ಸರ್ಕಾರ ಬಳಿಸಿಕೊಳ್ಳಬೇಕಿದೆ ಎಂದು ತಿಳಿ ಹೇಳಿದರು.

ಈ ಸಂಘಟನೆಯ ಮುಖಾಂತರ ನಿವೃತ್ತ ಸೈನಿಕರ ಹಿತಕಾಯುವಲ್ಲಿ ಮುಂದಾಬೇಕು, ದೇಶದಲ್ಲಿ ಮಾಜಿ ಸೈನಿಕರು ಕೇವಲ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಮಾಜದಲ್ಲಿ ಗೌರಯುತ ಸ್ಥಾನ ಪಡೆಯುವಂತಾಗಬೇಕು. ನಿಮ್ಮ ಸಮಸ್ಯೆ ಬಗೆಹರಿಸಲು ಎಲ್ಲ ಪಕ್ಷಗಳು ಕೂಡಿಕೊಂಡು ಪಕ್ಷಾತೀತವಾಗಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇವೆ. ಉಳ್ಳಾಗಡ್ಡಿ ಮತ್ತು ಮೊದಗಾದಲ್ಲಿ ಸೇನಾ ತರಬೇತಿ ಕೇಂದ್ರ ಆರಂಭಿಸಿದ್ದು
ಸೈನ್ಯಕ್ಕೆ ಸೇರುವ ಯುವಕರಿಗೆ ನಮ್ಮ ಫೌಂಡೇಶನ ವತಿಯಿಂದ ತರಬೇತಿ ನೀಡುತ್ತಿದ್ದೇವೆ. ರಾಜಕೀಯ ಹೊರತು ಪಡಿಸಿ ಇನ್ನಿತರ ಚಟುವಟಿಕೆ ಮೂಲಕೂ ನಾವು ಸಮಾಜಸೇವೆ ಮಾಡುತ್ತಿದ್ದೇವೆ ಎಂದರು.

ಮುಖ್ಯ ಅತಿಥಿಗಾಗಿ ಆಗಮಿಸಿದ್ದ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಮಾತನಾಡಿ, ಶಿಸ್ತಿಗೆ ಇನ್ನೊಂದು ಹೆಸರೆ ಸೈನಿಕರು. ಕೊಡಗು ಸೈನಿಕರ ನಾಡಾಗಿತ್ತು, ಈಗ ನಮ್ಮ ಚನ್ನಮ್ಮ, ಬೆಳವಡಿ ಮಲ್ಲಮ್ಮ, ರಾಯಣ್ಣನ ನಾಡು ಸೈನಿಕರ ನಾಡಾಗಿದ್ದು ನಮಗೆ ಹೆಮ್ಮೆ ಎನಿಸುತ್ತದೆ. ನನ್ನ ಕ್ಷೇತ್ರದಲ್ಲಿ ಹಾಲಿ, ಮಾಜಿ ಸೈನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ಒಂದೇ ದಿನದಲ್ಲಿ, ಜಾತಿಯಿಂದ ನಾನು ಎಂಎಲ್ಎ ಆಗಿಲ್ಲ, ನನ್ನ ಕ್ಷೇತ್ರದಲ್ಲಿ ನನ್ನ ಜಾತಿಯವರು ಬಹಳ ಕಡಿಮೆ. 18 ವರ್ಷಗಳ ಪರಿಶ್ರಮದ ಫಲವಾಗಿ, ಎರಡು ಚುನಾವಣೆಗಳಲ್ಲಿ ಸೋತು, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಇಂದು ಎಂಎಲ್ಎ ಆಗಿದ್ದೇನೆ. ಇಡೀ ವಿಶ್ವದಲ್ಲಿ ಬಲಿಷ್ಠ ಸೈನಿಕರು ಇದ್ದಿದ್ದು ನಮ್ಮ ಭಾರತದಲ್ಲಿ.

ಪ್ರತಿಯೊಂದು ಕ್ಷೇತ್ರದಲ್ಲಿ ದೇಶವನ್ನು ಕಟ್ಟಲು ನಿಮ್ಮ ಪರಿಶ್ರಮವಿದೆ. ಖಂಡಿತವಾಗಲೂ ನಿಮಗೆ ರಾಜಕೀಯ ಸ್ಥಾನಮಾನ ಸಿಗಬೇಕಿದೆ. ನನ್ನ ಕ್ಷೇತ್ರದಲ್ಲಿ ಮಾಜಿ ಸೈನಿಕ ಶಂಕರಗೌಡ ಪಾಟೀಲ್ ರನ್ನು ಜಿ.ಪಂ.ಸದಸ್ಯರನ್ನಾಗಿ, ತಾ.ಪಂ.ಅಧ್ಯಕ್ಷರನ್ನಾಗಿ ಮಾಡಿದ್ದೇನೆ. ನಿಮ್ಮ ಸಹೋದರಿಯಾಗಿ, ಮನೆ ಮಗಳಾಗಿ ನಿಮ್ಮ ಜೊತೆ ಇರುತ್ತೇನೆ, ಸಂಘಟನೆ, ಪರಿಶ್ರಮ, ಹೋರಾಟದಿಂದ ಏನು ಬೇಕಾದರೂ ಪಡೆಯಬಹುದು ಎಂದು ಕರೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ವಿಧಾನಪರಿಷತ ಸದಸ್ಯರಾದ ಪ್ರಕಾಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ, ಖ್ಯಾತ ವೈದ್ಯ ಡಾ.ರವಿ ಪಾಟೀಲ್, ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಎನ್.ಕೆ, ಗೌರವ ಅಧ್ಯಕ್ಷ ನಾಗಪ್ಪ ಕಳಸನ್ನವರ, ಉಪಾಧ್ಯಕ್ಷ ವಿರೂಪಾಕ್ಷ ತಿಳಗಂಜಿ, ದಯಾನಂದ ಢಾಳಿ, ರಮೇಶ ಚೌಗುಲಾ, ಜಗದೀಶ ಪೂಜೇರಿ, ಶಿವಬಸಪ್ಪ ಕಾಡನ್ನವರ ಸೇರಿದಂತೆ ಜಿಲ್ಲೆಯ ಮಾಜಿ ಸೈನಿಕರು ಮತ್ತು ಅವರ ಕುಟುಂಬಸ್ಥರು ಹಾಗೂ 24 ಜಿಲ್ಲೆಗಳ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರು ಭಾಗಿಯಾಗಿದ್ದರು.//////