Belagavi News In Kannada | News Belgaum

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೇಕಾರರ ಪ್ರತಿಭಟನೆ

ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೇಕಾರರು ಸುವರ್ಣ ಸೌಧದ ಪಕ್ಕ ಇರುವ ಬಸ್ತವಾಡ ಗ್ರಾಮದ ಟೆಂಟ್‌ ನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಇದಕ್ಕೂ ಮೊದಲು ಬಸವೇಶ್ವರ ವೃತ್ತದಿಂದ ಸುವರ್ಣ ವಿಧಾನಸೌಧದ ವರೆಗೆ ಬೃಹತ್ ಪಾದಯಾತ್ರೆ ನಡೆಸಲು ಮುಂದಾದ ನೇಕಾಕರರು ಯಡಿಯೂರಪ್ಪ ರಸ್ತೆಯ ಮಾರ್ಗದಲ್ಲಿ ಬರುತ್ತಿದ್ದಂತೆ  ಪೊಲೀಸರು ನೇಕಾರರನ್ನು ತಡೆಯುವ ಯತ್ನ ಮಾಡಿದರು. ಈ ವೇಳೆ ನೇಕಾರರು ಹಾಗೂ ಪೊಲೀಸರ ನಡುವೇ ವಾಗ್ವಾದವು ನಡೆಯಿತು. ನಂತರ ನೇಕಾರರು ಸುವರ್ಣ ಸೌಧದ ಪಕ್ಕ ಇರುವ ಬಸ್ತವಾಡ ಗ್ರಾಮದ ಟೆಂಟ್ ಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ನೇಕಾರರ ಹೋರಾಟದ ವೇದಿಕೆಗೆ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ, ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ವಿವಿಧ ಶ್ರೀಗಳು ಆಗಮಿಸಿ ನೇಕಾರರ ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದರು.

ಈ ವೇಳೆ ಕಾಂಗ್ರೆಸ್‌ ಮುಖಂಡೆ ಸರಳಾ‌ ಸಾತ್ಪುತೆ ಮಾತನಾಡಿ, ಅನೇಕ ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿರುವ ವೃತ್ತಿಪರ ನೇಕಾರರು ಕಾರ್ಮಿಕ ಸೌಲಭ್ಯಗಳಿಲ್ಲದೆ ವಂಚಿತರಾಗುತ್ತಿದ್ದಾರೆ. 5ರಿಂದ 6 ಲಕ್ಷ ಜನ ಕಾರ್ಮಿಕರು ನೇಕಾರಿಕೆಯನ್ನು ನಂಬಿಕೊಂಡು  ಬದುಕು ಸಾಗಿಸುತ್ತಿದ್ದಾರೆ. ಆದರೆ ಕಳೆದ 10 ವರ್ಷಗಳಲ್ಲಿ ಬರಗಾಲ, ಅತೀವೃಷ್ಟಿ, ಅನಾವೃಷ್ಟಿ, ಜಿಎಸ್‌ಟಿ, ನೋಟ್ ಬಂದ ಇದರ ನಡುವೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ ಸಂಪೂರ್ಣ ಉದ್ಯಮ ನೆಲಕಚ್ಚಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಅಲ್ಲದೇ ಆರ್ಥಿಕ ಸಾಲದ ಹೊರೆಯಿಂದಾಗಿ ರಾಜ್ಯದಲ್ಲಿ ಅನೇಕ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆರೆ ಹಾವಳಿಯಿಂದ ಮಗ್ಗ ಹಾಗೂ ಮನೆಗಳು ಹಾಳಾಗಿವೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿರುವ ನೇಕಾರರಿಗೆ ಓದ್ಯೋಗಿಕ ಭದ್ರತೆ ಇಲ್ಲದಂತಾಗಿದೆ. ಆದ್ದರಿಂದ ರಾಜ್ಯದ ಎಲ್ಲ ಬ್ಯಾಂಕ್‌ಗಳಲ್ಲಿ ಹಾಗೂ ಹಣಕಾಸು ಸಂಘ, ಸಂಸ್ಥೆಗಳಲ್ಲಿನ ನೇಕಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳು: ಕಟ್ಟಡ ಕಾರ್ಮಿಕರಿಗೆ ಇರುವಂತೆ ಜವಳಿ ಇಲಾಖೆಯಲ್ಲಿ ನೇಕಾರರಿಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು. ಈ ಮಂಡಳಿಗೆ ಜವಳಿ ಉದ್ಯಮದಿಂದ ಆಕರಿಸುವ ಜಿಎಸ್ ಟಿ ಹಣದಲ್ಲಿ ಒಂದು ನಿಗದಿತ ಹಣವನ್ನು ಮೀಸಲಿಟ್ಟು ನೇಕಾರರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ನೇಕಾರರನ್ನು ಅಸಂಘಟಿತ ವಲಯ ಎಂದು ಘೋಷಿಸಬೇಕು,  ನೇಕಾರ ಸಮ್ಮಾನ ಯೋಜನೆಯನ್ನು ರಾಜ್ಯದಲ್ಲಿ ಶೇ.99ರಷ್ಟಿರುವ ವಿದ್ಯುತ್ ‌ಮಗ್ಗ ನೇಕಾರರಿಗೂ ಜಾರಿಗೆ ತರಬೇಕು. ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ನೇಕಾರರ ಕಲ್ಯಾಣಕ್ಕಾಗಿ ಜಾರಿಯಲ್ಲಿದ್ದ ಜನಶ್ರೀ ಭೀಮಾ ಯೋಜನೆ ಯಾವುದೇ ‌ಟ್ಯಾಕ್ಸ ರಹಿತವಾಗಿ ವಿದ್ಯುತ್ ಸಬ್ಸಿಡಿ ಶೇ.30ರ ಬಡ್ಡಿ ದರದಲ್ಲಿ ಸಾಲಸೌಲಭ್ಯ, ಸಾಲಮನ್ನಾ ಯೋಜನೆಯನ್ನು ಮರು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ, ಸೂರಿಲ್ಲದ ಕೂಲಿ ನೇಕಾರ ಕಾರ್ಮಿಕರಿಗೆ ವಿಶೇಷ ವಸತಿ ಯೋಜನೆ ರೂಪಿಸಿ ಮನೆ ನಿರ್ಮಾಣ‌ ಮಾಡಿಕೊಡಬೇಕು. ವಿದ್ಯುತ್ ಖಾಸಗೀಕರಣ ನಿಲ್ಲಿಸಬೇಕು. ನೇಕಾರ ಕೂಲಿ ಕಾರ್ಮಿಕರಿಗಾಗಿ ವಿಶೇಷ ಕಿರು ಸಾಲದ ಯೋಜನೆ ಜಾರಿಗೆ ತರಬೇಕೆಂದು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿದ್ದಾರೆ.

ಪ್ರತಿಭಟನೆಯಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌  ಅಧ್ಯಕ್ಷ ಲಕ್ಷಣರಾವ್‌ ಚಿಂಗಳೆ, ರಮೇಶ ಸೊಂಟಕ್ಕಿ, ದೀಪಕ ಪಮ್ಮಾರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ನೇಕಾರರು ಭಾಗವಹಿಸಿದ್ದರು.////////