Belagavi News In Kannada | News Belgaum

ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶಾಲಾ ಪರಿಕರಗ ಕಿಟ್ ವಿತರಣಾ ಕಾರ್ಯಕ್ರಮ

ಕಾರ್ಮಿಕ ಇಲಾಖೆಯ ಅಧಿಕಾರಿಗಳ ಕಾರ್ಯ ಶ್ಲಾಘನೀಯ: ಶಾಸಕ ಅಭಯ ಪಾಟೀಲ

 

ಬೆಳಗಾವಿ, ಡಿ.26 : ಕಾರ್ಮಿಕ ಸಚಿವರ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯು ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಸ್ಥಳೀಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸಹ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ್ ತಿಳಿಸಿದರು.
ಬೆಳಗಾವಿಯ ಶಾಹಪೂರ ಸರಕಾರಿ ಚಿಂತಾಮಣಿರಾವ್ ಪದವಿ ಪೂರ್ವಕಾಲೇಜಿನಲ್ಲಿ ಶುಕ್ರವಾರ (ಡಿ.23) ನಡೆದ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶಾಲಾ ಪರಿಕರಗ ಕಿಟ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ, ನೋಂದಾಯಿತ ಕಟ್ಟಡ ಕಾರ್ಮಿಕ ಫಲಾನುಭವಿಗಳ ಮಕ್ಕಳಿಗೆ ಸುಮಾರು 800 ಕೋಟಿರೂ. ಗಳ ಶಿಷ್ಯವೇತನವನ್ನು ನೇರ ಹಣ ವರ್ಗಾವಣೆ (ಡಿ.ಬಿ.ಟಿ) ಮೂಲಕ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿರುತ್ತದೆ.
ಮಂಡಳಿಯ ಫಲಾನುಭವಿಗಳ 250 ಮಕ್ಕಳಿಗೆ ಯು.ಪಿ.ಎಸ್.ಸಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗೂ 500 ಮಕ್ಕಳಿಗೆ ಕೆ.ಪಿ.ಎಸ್.ಸಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಖ್ಯಾತ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳಿಂದ ಉಚಿತವಾಗಿ ನೀಡಿ ಸ್ಟೈಪಂಡ್ ಮೊತ್ತವನ್ನು ಸಹ ನೀಡಲಾಗಿದೆ.
ಅಲ್ಲದೇ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ನೋಂದಾಯಿತ ಕಟ್ಟಡ ಕಾರ್ಮಿಕ ಮಕ್ಕಳಿಗೆ ಉಚಿತ ಪೈಲೆಟ್ ತರಬೇತಿಯನ್ನು ನುರಿತ ತರಬೇತಿ ಕೇಂದ್ರದಿಂದ ಉಚಿತವಾಗಿಕೊಡಿಸುತ್ತಿದ್ದು, ಕಾರ್ಮಿಕ ಇಲಾಖೆಯ ಪ್ರತಿ ಉಪವಿಭಾಗದಿಂದ ಒಬ್ಬರನ್ನು ಆಯ್ಕೆ ಮಾಡಿ ತರಬೇತಿಗೆ ಸದ್ಯದಲ್ಲಿಯೇ ನಿಯೋಜಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ 150 ಜನಕಟ್ಟಡ ಕಾರ್ಮಿಕರುಗಳ ಮಕ್ಕಳಿಗೆ ಶಾಲಾ ಸಾಮಗ್ರಿಗಳನ್ನು ವಿತರಿಸಿದರು. ಮುಖ್ಯಅತಿಥಿಗಳಾಗಿ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳಾದ ಗುರು ಪ್ರಸಾದ ಎಮ್.ಪಿ,ಕಾರ್ಮಿಕ ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ ಬಳ್ಳಾರಿ ಹಾಜರಿದ್ದರು.
ಬೆಳಗಾವಿ ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಅ. ಶಿಂದಿಹಟ್ಟಿ, ಅವರು ಸ್ವಾಗತ ಕೋರಿ ಪ್ರಾಸ್ತಾವಿಕ ನುಡಿಗಳನ್ನಾಡಿರು. ಬೆಳಗಾವಿ ಕಾರ್ಮಿಕ ಅಧಿಕಾರಿ ತರನ್ನುಂ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಮಂಡಳಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.